1999ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಗಾಯಗೊಂಡಿದ್ದ ನಿವೃತ್ತ ಯೋಧರೊಬ್ಬರು, ಸರ್ಕಾರ ಭರವಸೆ ನೀಡಿದ್ದ ಜಮೀನು 24 ವರ್ಷಗಳಾದರೂ ಮಂಜೂರಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಭಾರತೀಯ ಸೇನೆಯ ನಿವೃತ್ತ ಯೋಧ ನಾಯಕ್ ಶಿವಾನಂದ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದವರು. ಅವರು ಭಾರತೀಯ ಸೇನೆಯ ಮರಾಠಾ ಲೈಟ್ ಇನ್ಫ್ಯಾಂಟ್ರಿಗೆ ಸೇರಿದವರಾಗಿದ್ದು, ಯುದ್ಧದ ವೇಳೆ ಗಾಯಗೊಂಡಿದ್ದರು. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 29ರಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ, ತಮಗೆ ಸರ್ಕಾರ ಭರವಸೆ ನೀಡಿದ್ದ ಜಮೀನು ಮಂಜೂರು ಮಾಡಿಸುವಂತೆ ಮನವಿ ಮಾಡಲು ರೆಡ್ಡಿ ಮುಂದಾಗಿದ್ದರು. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಉಪಮುಖ್ಯಮಂತ್ರಿಯನ್ನು ಭೇಟಿಯಾಗದಂತೆ ತಡೆದಿದ್ದಾರೆ. ತಮ್ಮ ಸಮಸ್ಯೆಯನ್ನು ಉಪಮುಖ್ಯಮಂತ್ರಿಯವರ ಗಮನಕ್ಕೆ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ಬೇಸರದಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೆಪಿಎಸ್ಸಿ ಬಳಿಕ ಆರ್ಡಿಪಿಆರ್ ನೇಮಕಾತಿ ಅಕ್ರಮ ಆರೋಪ; ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್ಡಿಕೆ ವಾಗ್ದಾಳಿ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ತಮ್ಮ ಸ್ವಗ್ರಾಮದಲ್ಲಿ ಸೇವೆಯನ್ನು ಗುರುತಿಸಿ ಜಮೀನು ಮಂಜೂರು ಮಾಡುವುದಾಗಿ ಸರ್ಕಾರ ರೆಡ್ಡಿ ಅವರಿಗೆ ಭರವಸೆ ನೀಡಿತ್ತು. ಆದರೆ, ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದರೂ ಜಮೀನು ಮಂಜೂರಾತಿ ಮಾತ್ರ ಆಗಿಲ್ಲ ಎನ್ನಲಾಗಿದೆ.






