ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸುರೇಂದ್ರ ಕೋಟ್ಯಾನ್ ಅವರು ಸಾಮಾನ್ಯ ವ್ಯಾಪಾರಿಗಳಿಗಿಂತ ತೀರಾ ಭಿನ್ನವಾದ ವ್ಯಕ್ತಿ. ಹಾಗಂತ ಅವರದ್ದೇನು ದೊಡ್ಡ ಮಟ್ಟಿನ ವ್ಯಾಪಾರ ವಹಿವಾಟು ಮಳಿಗೆಯೂ ಅಲ್ಲ. ಮಂಜೇಶ್ವರ ಉದ್ಯಾವರದ ಹೆದ್ದಾರಿ ಬಳಿ ಕಬ್ಬಿನ ಅರಸು ಮಂಜಿಸ್ಣಾರ್ ದೈವದ ಮಾಡಾ ಹಾಗೂ ಉದ್ಯಾವಾರ ದೊಡ್ಡ ಮಸೀದಿಯ ಬಳಿ ಮಾಡಾ ಟ್ರಸ್ಟ್‌ಗೆ ಸೇರಿದ ಕಟ್ಟಡದಲ್ಲಿ ಜ್ಯೂಸ್ ಹಾಗೂ ಎಳನೀರು ಮಾರಾಟದ ಪುಟ್ಟ ಅಂಗಡಿಯಷ್ಟೇ.
ಸುರೇಂದ್ರ ಕೋಟ್ಯಾನ್ ಅವರು ತನ್ನ ದುಡಿಮೆಯ ಸಂಪಾದನೆಯಲ್ಲಿ ದೊಡ್ಡ ಪಾಲನ್ನು ಪುಸ್ತಕ ಖರೀದಿಸಲು ವಿನಿಯೋಗಿಸುತ್ತಾರೆ ಅನ್ನೋದೇ ಅವರ ವೈಶಿಷ್ಟ್ಯ. ವ್ಯಾಪಾರಿಗಳು ತಮ್ಮ ಲಾಭವನ್ನು ವ್ಯಾಪಾರ ವಿಸ್ತರಣೆಗೆ ಬಳಸುವುದು ಸಾಮಾನ್ಯ ವಿಚಾರ. ಆದರೆ ಸುರೇಂದ್ರ ಕೋಟ್ಯಾನ್ ಅವರು ಜ್ಞಾನ ವಿಸ್ತರಣೆಗಾಗಿ ತನ್ನ ದುಡಿಮೆಯ ಬಹುಪಾಲು ದುಡ್ಡನ್ನು ಖರ್ಚು ಮಾಡುತ್ತಿದ್ದಾರೆ.
ತನ್ನ ವ್ಯಾಪಾರದ ನಡುವೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ಊರಿನ ಆಸುಪಾಸಿನಲ್ಲಿ, ಪಕ್ಕದ ಜಿಲ್ಲೆಯಲ್ಲಿ ನಡೆಯುವ ಪುಸ್ತಕ ಬಿಡುಗಡೆ, ಪುಸ್ತಕ ಮೇಳ, ಸಾಹಿತ್ಯ ಸಮ್ಮೇಳನಕ್ಕೆ ಸುರೇಂದ್ರ ಕೋಟ್ಯಾನ್ ಹಾಜರಾಗುತ್ತಾರೆ, ಪುಸ್ತಕ ಖರೀದಿಸುತ್ತಾರೆ. ಈ ರೀತಿಯ ಹವ್ಯಾಸವನ್ನು ಕಳೆದ 35 ವರ್ಷಗಳಿಂದ ಪಾಲಿಸಿಕೊಂಡು ಬಂದ ಸುರೇಂದ್ರ ಅವರ ಮನೆಯಲ್ಲಿ ಬರೋಬ್ಬರಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಾಗಿದೆ. ಪುಸ್ತಕಗಳ ಮೌಲ್ಯ ಲೆಕ್ಕ ಹಾಕಿದರೆ 10 ಲಕ್ಷ ರೂಪಾಯಿಗೂ ಹೆಚ್ಚಾಗಬಹುದು.
ಸುರೇಂದ್ರರು ತಾನು ಖರೀದಿಸಿದ ಪುಸ್ತಕವನ್ನು ತನ್ನ ಓದಿಗಾಗಿ ಮಾತ್ರ ಬಳಸಿಕೊಳ್ಳಲಿಲ್ಲ, ಜ್ಞಾನದಾಹಿಗಳಿಗೆಲ್ಲ ಅವರ ಮನೆ ತೆರೆದ ಪುಸ್ತಕಾಲಯವಾಗಿತ್ತು. ಪ್ರತಿ ಭಾನುವಾರ ಊರಿನ ಪುಸ್ತಕ ಪ್ರೇಮಿಗಳು, ಸಾಹಿತ್ಯಾಸಕ್ತರು ಅವರ ಮನೆಯಂಗಳದಲ್ಲಿ ಸೇರಿ ಹೊಸ ಕೃತಿಗಳನ್ನು ಓದುವ, ವಿಮರ್ಶೆ ಮಾಡುವ, ಚರ್ಚಿಸುವ ಹವ್ಯಾಸ ರೂಢಿಸಿಕೊಂಡಿದ್ದರು.
ನೂರಾರು ಮಂದಿ ಸುರೇಂದ್ರ ಅವರ ಪುಸ್ತಕದ ಮನೆಗೆ ಭೇಟಿ ಕೊಡುತ್ತಿದ್ದರು. ಹತ್ತಾರು ಪಿಎಚ್‌ಡಿ ವಿದ್ಯಾರ್ಥಿಗಳು ಸುರೇಂದ್ರ ಅವರ ಮನೆಗೆ ಬಂದು ಹಳೆಯ, ಅಪೂರ್ವ ಪುಸ್ತಕಗಳನ್ನು ಜಾಲಾಡಿ ತಮ್ಮ ಅಧ್ಯಯನಕ್ಕಾಗಿ ಸುರೇಂದ್ರ ಅವರ ಮನೆ ಗ್ರಂಥಾಲಯವನ್ನು ಬಳಸಿಕೊಂಡಿದ್ದಾರೆ. ತನ್ನ ಮನೆ ಹಾಗೂ ಕಬ್ಬಿನ ಜ್ಯೂಸ್ ಅಂಗಡಿಗೂ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರವಿರುವುದರಿಂದ ಸುರೇಂದ್ರ ಅವರನ್ನು ಪುಸ್ತಕ ಪ್ರೇಮಿಗಳು ಮನೆ ಕಡೆಗೆ ಹುಡುಕಿಕೊಂಡು ಬರುವಾಗ ಎರಡೂ ಕಡೆಗೂ ಓಡಾಡುವುದು ತುಸು ತ್ರಾಸ ಅನಿಸಿದಾಗ ಸುರೇಂದ್ರ ಅವರು ಮನೆ ಪುಸ್ತಕ ಭಂಡಾರವನ್ನು ತನ್ನ ಕಬ್ಬಿನ ಜ್ಯೂಸ್ ಅಂಗಡಿಗೆ ಸ್ಥಳಾಂತರಿಸಲು ತೀರ್ಮಾನಿಸಿದರು.
ಆರಂಭದಲ್ಲಿ ಸಣ್ಣ ಪುಟ್ಟ ಅಡೆತಡೆ, ತೊಡಕುಗಳು ಎದುರಾದರೂ ಊರಿನ ಸಾಹಿತ್ಯ ಆಸಕ್ತರು, ಪುಸ್ತಕ ಪ್ರೇಮಿಗಳು, ಶಿಕ್ಷಣ ಪ್ರೇಮಿಗಳು ಸುರೇಂದ್ರ ಕೋಟ್ಯಾನ್ ಅವರಿಗೆ ಸಹಾಯ, ಸಹಕಾರ ನೀಡಿ ಬೆಂಗಾವಲಾಗಿ ನಿಂತರು. ಜ್ಯೂಸ್ ಅಂಗಡಿಯ ಪುಟ್ಟ ಕೋಣೆಯಲ್ಲಿ ಜನವರಿ 14ರ ಭಾನುವಾರ ಗ್ರಂಥಾಲಯ ತೆರೆದುಕೊಂಡಿತು.
ಸುರೇಂದ್ರ ಕೋಟ್ಯಾನ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನೇನು ಹೆಚ್ಚು ಶಾಲೆಗೆ ಹೋದವನಲ್ಲ. ಪ್ರಾಥಮಿಕ ಶಾಲೆ ದಾಟಿ ನನಗೆ ಮುಂದೆ ಓದಲಾಗಲಿಲ್ಲ. ನನ್ನೂರಿನ ಮಕ್ಕಳಿಗೆ ಓದಲು ಅನುಕೂಲವಾಗಲಿ ಎಂಬ ಆಶಯದಿಂದ ಪುಸ್ತಕ ಸಂಗ್ರಹ ಆರಂಭಿಸಿದ್ದೆ. ಸಣ್ಣದೊಂದು ಗ್ರಂಥಾಲಯ ತೆರೆಯಬೇಕೆಂಬ ಕನಸಿತ್ತು. ಅದೀಗ ಸಾರ್ಥಕವಾಗಿದೆ” ಎಂದು ವಿನೀತರಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಗುಂಪುಗಾರಿಕೆ ಸೃಷ್ಟಿಸುವ ಮುದ್ದಹನುಮೇಗೌಡರಿಗೆ ಪಕ್ಷನಿಷ್ಠೆಯಿಲ್ಲ: ನಾರಾಯಣಗೌಡ
ಕಬ್ಬಿನ ಜ್ಯೂಸ್ ಅಂಗಡಿಯ ಗ್ರಂಥಾಲಯವನ್ನು ಉದ್ಘಾಟಿಸಲು ಬಂದವರು ಕಿತ್ತಳೆ ಹಣ್ಣು ಮಾರಾಟ ಮಾಡಿ ಊರಿನಲ್ಲಿ ಶಾಲೆ ತೆರೆದ ಅಕ್ಷರ ಸಂತ ಹರೇಕಳ ಹಾಜಬ್ಬ. ಈ ಅಪೂರ್ವ ಮುಖಾಮುಖಿಯನ್ನು ಕಣ್ತುಂಬಿಸಿಕೊಂಡ ಊರ ಜನರ ಬಾಯಲ್ಲಿ ಬಂದ, “ಅಕ್ಷರ ಸಂತ ಹಾಗೂ ಪುಸ್ತಕ ಬಂಧುವಿನ ಸಂಗಮ” ಎಂಬ ಉದ್ಘಾರದ ಮಾತು ಉದ್ಯಾವರ ಮಾಡ ಎಂಬ ಸಾಮರಸ್ಯದ ಸಂಗಮ ಭೂಮಿಗೊಂದು ಸಂಕ್ರಾತಿಯ ಹೊಸ ಬೆಳಕು ಚಿಮ್ಮಿಸಿದಂತಾಗಿತ್ತು.
ಕಬ್ಬಿನ ಹಾಲಿನ ಜ್ಯೂಸ್ ಅಂಗಡಿಯ ಫಲಕದಲ್ಲಿ ನಾರಾಯಣ ಗುರುಗಳ ವಿಶ್ವಮಾನ್ಯ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ‘ ಎಂಬ ಸಂದೇಶಕ್ಕೆ ಜೊಡಣೆಯಾಗಿ ಜ್ಞಾನವೇ ಬೆಳಕು, ಜ್ಞಾನವೇ ದೇವರ ಮೂಲ ಎಂಬ ನುಡಿ ಜ್ಞಾನದಾಹಿಗಳನ್ನು ಈ ಪುಟ್ಟ ಗ್ರಂಥಾಲಯಕ್ಕೆ ಕೈ ಬೀಸಿ ಕರೆಯುತ್ತಿದೆ.