ಕೇರಳದ ಪ್ರಸಿದ್ಧ ಹಬ್ಬ ‘ತ್ರಿಶೂರ್ ಪೂರಂ’ಗೆ ದಿನಗಣನೆ ಆರಂಭವಾಗಿರುವಾಗಲೇ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇಂದು (ಏ.21) ಮಧ್ಯಾಹ್ನ ಜಿಲ್ಲೆಯ ಮುಂಡತಿಕೋಡ್‌ನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಏ.26 ರಂದು ನಡೆಯಲಿರುವ ತ್ರಿಶೂರ್ ಪೂರಂ ಹಬ್ಬದ ಅಂಗವಾಗಿ ದೇವಸ್ಥಾನದ ದೇವಸ್ವಂ ಪರವಾಗಿ ಪಟಾಕಿ ತಯಾರಿಸುತ್ತಿದ್ದ ಶೆಡ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:30 ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದ್ದು, ನಂತರ ಸರಣಿ ಸ್ಫೋಟಗಳು ಮುಂದುವರಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ ಎಂದು ವರದಿಯಾಗಿದೆ.
ಸ್ಫೋಟದ ಸಮಯದಲ್ಲಿ ಘಟಕದಲ್ಲಿ ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರು ಇದ್ದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸರ್ಕಾರಿ ಅಧಿಕಾರಿಯೊಬ್ಬರು, “ಸ್ಫೋಟದ ವೇಳೆ 40 ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು” ಎಂದು ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಶಬರಿಮಲೆ ಪ್ರವೇಶ ಪ್ರಕರಣ | ನ್ಯಾಯಾಂಗ ವಿಮರ್ಶೆಯ ಅಧಿಕಾರ ಪ್ರಶ್ನಿಸಬೇಡಿ; ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ
ದುರಂತದ ಬೆನ್ನಲ್ಲೇ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಗಾಯಾಳುಗಳಿಗೆ ವಿಶೇಷ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಗಳಲ್ಲಿ ತುರ್ತು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸಮೀಪದ ಎಲ್ಲಾ ಆಸ್ಪತ್ರೆಗಳನ್ನು ಹೈ ಅಲರ್ಟ್‌ನಲ್ಲಿ ಇಡಲಾಗಿದೆ. ತುರ್ತು ಸೇವೆಗಾಗಿ ಹೆಚ್ಚುವರಿ ಆಂಬ್ಯುಲೆನ್ಸ್ ಮತ್ತು ʼಕನಿವ್ 108ʼ ಸೇವೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಸದ್ಯ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹಬ್ಬದ ಸಡಗರದಲ್ಲಿದ್ದ ತ್ರಿಶೂರ್‌ನಲ್ಲಿ ಈಗ ಆಕ್ರಂದನ ಮುಗಿಲುಮುಟ್ಟಿದೆ.





