ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ವಿಚಾರಣೆಯ ಆರನೇ ದಿನದಂದು, ನ್ಯಾಯಾಂಗ ವಿಮರ್ಶೆಯ ಅಧಿಕಾರವನ್ನು ಪ್ರಶ್ನಿಸದಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಜೆ. ಸಾಯಿ ದೀಪಕ್ ಅವರಿಗೆ ಎಚ್ಚರಿಕೆ ನೀಡಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಸಾಯಿ ದೀಪಕ್ ಅವರು, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ನಿಯಮಗಳನ್ನು ರಾಜ್ಯವು ರೂಪಿಸಿದಾಗ ಅವು ನ್ಯಾಯಾಂಗ ವಿಮರ್ಶೆಗೆ ಒಳಪಡುವುದಿಲ್ಲ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು “ನ್ಯಾಯಾಂಗ ವಿಮರ್ಶೆಯ ಅಧಿಕಾರದ ಮೇಲೆ ಇಷ್ಟೊಂದು ದಾಳಿ ಮಾಡುವ ಅಗತ್ಯವಿಲ್ಲ. ಒಂದು ವೇಳೆ ರಾಜ್ಯವು ಸಮಾಜ ಕಲ್ಯಾಣದ ಹೆಸರಿನಲ್ಲಿ ಧಾರ್ಮಿಕ ಆಚರಣೆಯನ್ನು ನಿಷೇಧಿಸಿದರೆ, ಅದನ್ನು ಯಾರು ಪರಿಶೀಲಿಸಬೇಕು? ಅಧಿಕಾರಕ್ಕೆ ಮಿತಿಗಳಿವೆ ಎಂಬುದು ನಮಗೂ ತಿಳಿದಿದೆ, ಆದರೆ ನ್ಯಾಯಾಂಗಕ್ಕೆ ಅಧಿಕಾರವೇ ಇಲ್ಲ ಎನ್ನುವುದು ಅಸಾಧ್ಯ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ
ಇದೇ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಕೇರಳ ಸರ್ಕಾರವು ಮಹಿಳೆಯರ ಪ್ರವೇಶವನ್ನು ನಿಷೇಧಿಸಿಲ್ಲ, ಬದಲಾಗಿ ಅಲ್ಲಿನ ರೂಢಿಗತ ನಿಷೇಧದ ನಡುವೆಯೂ ಪ್ರವೇಶವನ್ನು ಉತ್ತೇಜಿಸುವ ಕಾನೂನನ್ನು ತಂದಿದೆ ಎಂದು ಅಭಿಪ್ರಾಯಪಟ್ಟರು. ಮತ್ತೊಬ್ಬ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್ ಅವರು ವಾದ ಮಂಡಿಸುತ್ತಾ, ಸಂವಿಧಾನದ ವಿಧಿ 26 (ಧಾರ್ಮಿಕ ವ್ಯವಹಾರಗಳ ನಿರ್ವಹಣೆ) ಕಡ್ಡಾಯವಾಗಿ ವಿಧಿ 25(2)ಕ್ಕೆ ಒಳಪಟ್ಟಿರುತ್ತದೆ. ‘ಧಾರ್ಮಿಕ ಪಂಗಡ’ ಎಂಬ ಪದಕ್ಕೆ ವಿಶಾಲವಾದ ಅರ್ಥ ನೀಡಿದಾಗ ಮಾತ್ರ ಎಲ್ಲ ಧರ್ಮಗಳಿಗೂ ಸಮಾನತೆ ಸಿಗಲು ಸಾಧ್ಯ ಎಂದು ತಿಳಿಸಿದರು.





