ಶಾಲೆಯ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಅಪ್ರಾಪ್ತ ಬಾಲಕಿಯೋರ್ವಳನ್ನು ಅಪಹರಣ ಮಾಡಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ಈ ಅಪಹರಣದ ಸಿಸಿಟಿವಿ ದೃಶ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ತವರು ಜಿಲ್ಲೆ ಭರತ್‌ಪುರದಲ್ಲಿ ಈ ಘಟನೆ ನಡೆದಿದ್ದು, ಹಾಡುಹಗಲೇ ಬಾಲಕಿಯನ್ನು ಯುವಕರು ಅಪಹರಿಸಿ ಎಸ್‌ಯುವಿಯಲ್ಲಿ ಕರೆದೊಯ್ದಿದ್ದಾರೆ. ಜೊತೆಗೆ ಬಾಲಕಿಯನ್ನು ಕಾಪಾಡಲು ಜನರು ಬಂದಾಗ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಪಂಚರ್ ಹಾಕುವ ವೇಳೆ ಟೈರ್ ಸ್ಫೋಟ: ಗಾಳಿಯಲ್ಲಿ ಹಾರಿಬಿದ್ದ ಯುವಕ; ವಿಡಿಯೋ ವೈರಲ್
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ಮತ್ತು ರಾಜಕೀಯ ಟೀಕೆಗೆ ಕಾರಣವಾಗಿದೆ. ಅಪಹರಣವಾದ ಬಾಲಕಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಸೋಮವಾರ ಅರ್ಧವಾರ್ಷಿಕ ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಆಕೆ ಬರುವುದನ್ನೇ ಕಾಯುತ್ತಿದ್ದ ಅಪಹರಣಕಾರರು ಆಕೆಯನ್ನು ಬಲವಂತವಾಗಿ ತಮ್ಮ ವಾಹನಕ್ಕೆ ಎಳೆದೊಯ್ದಿದ್ದಾರೆ. ಆಕೆಯ ಸ್ನೇಹಿತರು ಆಕೆಯನ್ನು ರಕ್ಷಿಸಲು ಮುಂದಾದಾಗ ಅಪಹರಣಕಾರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
#Bharatpur, Rajasthan : Minor girl (14) returning after giving exam was publicaly abducted by half a dozen men in Bolero car on Monday around 4.30 pm in front of Police station in Deeg village of Bharatpur, Rajasthan.
— Saba Khan (@ItsKhan_Saba) December 24, 2024
The class 10 student was going back home when miscreants… pic.twitter.com/3bIqJYhBpq
ಇನ್ನು ಬಾಲಕಿಯ ತಂದೆ ಆಕೆಯ ‘ಭಾವಿ ಪತಿಯ ಮನೆಯವರು’ ಅಪಹರಣಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಆಟಾ-ಸಾಟಾ ಪದ್ಧತಿಯ ಪ್ರಕಾರ ಬಾಲ್ಯ ವಿವಾಹ ಮಾಡಲಾಗಿದೆ. ಔಪಚಾರಿಕವಾಗಿ ವಿವಾಹವಾಗಿದ್ದರೂ ಬಾಲಕಿ ವಯಸ್ಕಳಾಗುವವರೆಗೂ ಪತಿಯೊಂದಿಗೆ ಜೀವಿಸುತ್ತಿರಲಿಲ್ಲಿ.
ಇನ್ನು ವರದಕ್ಷಿಣೆ ವಿಚಾರದಲ್ಲಿ ಉಭಯ ಕುಟುಂಬದ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಹೇಳಲಾಗಿದೆ. ಇದೇ ವಿಚಾರದಲ್ಲಿ ಅಪಹರಣ ಮಾಡಲಾಗಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಈ ಘಟನೆ ನಡೆದು 24 ಗಂಟೆಗಳು ಕಳೆದಿದ್ದು ಇನ್ನೂ ಬಾಲಕಿಯ ಪತ್ತೆಯಾಗಿಲ್ಲ. ಅಪಹರಣಕಾರರು ಯಾವುದೇ ಬೇಡಿಕೆಯನ್ನು ಮುಂದಿಟ್ಟಿಲ್ಲ ಎನ್ನಲಾಗಿದೆ.
