ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಯ ಪ್ರಕರಣವನ್ನು ಮುಚ್ಚಿಹಾಕಲು ಸಂತ್ರಸ್ತೆಯ ಪೋಷಕರಿಗೆ ಹಣ ಕೊಡಲು ಪೊಲೀಸರು ಪ್ರಯತ್ನಿಸಿದ್ದರು. ಮಾತ್ರವಲ್ಲದೆ, ಸಂತ್ರಸ್ತೆಯ ಮೃತದೇಹವನ್ನು ತ್ವರಿತವಾಗಿ ಸುಟ್ಟು ಹಾಕುವ ಮೂಲಕ ಪ್ರಕರಣವನ್ನು ತಿರುಚಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಸ್ವತಃ ಮೃತ ವೈದ್ಯೆಯ ಕುಟುಂಬವೇ ಈ ಆರೋಪ ಮಾಡಿದೆ.
ವೈದ್ಯೆಯ ಅತ್ಯಾಚಾರ-ಕೊಲೆಯ ವಿರುದ್ಧ ಪ್ರತಿಭಟನಾನಿರತ ವೈದ್ಯರೊಂದಿಗೆ ಸಂತ್ರಸ್ತೆಯ ಕುಟುಂಬ ಪ್ರತಿಭಟನೆಗೆ ಇಳಿದಿದೆ. ಆರ್‌ಜಿ ಕರ್ ಆಸ್ಪತ್ರೆ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕುಟುಂಬವು ಭಾಗವಹಿಸಿದೆ. “ಆಗಸ್ಟ್ 9ರಂದು ಘಟನೆ ನಡೆದು, ಘಟನೆ ಬೆಳಕಿಗೆ ಬಂದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣ (ಲಂಚ) ನೀಡಲು ಪ್ರಯತ್ನಿಸಿದರು” ಎಂದು ಕುಟುಂಬ ಆರೋಪಿಸಿದೆ.
“ಪೊಲೀಸರು ಮೊದಲಿನಿಂದಲೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದರು. ಮೃತದೇಹವನ್ನು ನೋಡಲು ನಮಗೆ ಅವಕಾಶ ನೀಡಲಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಪೊಲೀಸ್ ಠಾಣೆಯಲ್ಲಿ ಕಾಯಬೇಕಾಯಿತು. ನಂತರ, ಶವವನ್ನು ಹಸ್ತಾಂತರಿಸಿದಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣ ನೀಡಲು ಮುಂದಾಗಿದ್ದರು. ಅವರ ಹಣವನ್ನು ನಾವು ತಕ್ಷಣ ನಿರಾಕರಿಸಿದ್ದೇವೆ” ಎಂದು ಮೃತ ವೈದ್ಯರ ತಂದೆ ಹೇಳಿದ್ದಾರೆ.