ಯಾವುದು ಅಂತರಂಗದಲ್ಲಿ ನಡೆಯುವ ಆಧ್ಯಾತ್ಮಿಕ ಘಟನೆಯೋ, ಅದಕ್ಕೊಂದು ಹೆಸರು ಜಾಗ ಕೊಟ್ಟು ಚೆನ್ನಾಗಿ ಪ್ಯಾಕೇಜಿಂಗ್ ಮಾಡಿ ಜಾತ್ರೆ ಮಾಡಿ ದುಡ್ಡು ಮಾಡುವ ದಂಧೆ ಆಗಿಬಿಟ್ಟಿದೆ. ಈ ಹೊರಗಣ ಜಾತ್ರೆ ಬಿಟ್ಟು ಒಳಗಣ ಯಾತ್ರೆಯನ್ನು ಕೈಗೊಳ್ಳೋಣ...
ಐವತ್ತು ಕೋಟಿ ಜನ ಸ್ನಾನ ಮಾಡಿದ ನೀರು ಕಲುಷಿತ ಮತ್ತು ಅನಾರೋಗ್ಯಕರ ಅಂದರೆ ತಮ್ಮ ಧರ್ಮವನ್ನೇ ಹೀಯಾಳಿಸಿದಂತೆ ಸಿಡಿದೇಳುವ ಜನಕ್ಕೆ ಶುಚಿತ್ವದ ಬಗ್ಗೆ ಯಾವುದೇ ಕಾಳಜಿ ಇರಲು ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಆಕಳ ಉಚ್ಚೆಯಾದರೇನು, ಗಲೀಜು ನೀರಾದರೇನು ಎಲ್ಲವೂ ಸ್ವಾಹಾ… ಹೆಚ್ಚು ಕಡಿಮೆ ಆದರೆ ಮೇಲೆ ದೇವರಿದ್ದಾನೆ ಪಕ್ಕದ ಬೀದಿಯಲ್ಲಿ ಡಾಕ್ಟರ್ ಇದ್ದಾನೆ ಬಿಡಿ.
ಧರ್ಮದ ದಂಧೆ ಮಾಡುವವರಿಗೆ ಧರ್ಮ ಅರ್ಥವೇ ಆಗಿರುವುದಿಲ್ಲ. ಉಗ್ರ ಮುಸ್ಲಿಮರಿಗೆ ಮತ್ತು ತೀವ್ರವಾದಿ ಸನಾತನಿಗಳಿಗೆ ಧರ್ಮ ಒಂದು ಆಯುಧ ಮಾತ್ರ. ಅಥವಾ ಎಲ್ಲಾ ಪ್ರಜ್ಞೆಯನ್ನು ಕಸಿಯುವ ನಶೆ.
ಅದರಲ್ಲೂ ಜಗತ್ತಿನ ಮೊಟ್ಟ ಮೊದಲ ಅರಿವಿನ ಉಪಾಯವಾದ ಸನಾತನ ಧರ್ಮ, ವೇದಗಳು, ಉಪನಿಷತ್ತುಗಳು, ರಾಮಾಯಣ ಮಹಾಭಾರತಗಳು ಮೂಲಭೂತವಾಗಿ ನಿಸರ್ಗದೊಂದಿಗೆ ಶಾಂತಿಯುತ ಸಹಜೀವನವನ್ನು ಕಲಿಸುತ್ತವೆ. ನಿಸರ್ಗದ ಮೇಲೆ ಆಕ್ರಮಣ ಮಾಡಿಯೇ ಬದುಕುವ ಮನುಷ್ಯನಿಗೆ, ಪ್ರತಿದಿನ ಸಾವಿರ ಭಾನಗಡಿ ಮಾಡಿಯೇ ಬದುಕುವ ಮನುಷ್ಯನಿಗೆ ಪಾಪ ಪ್ರಜ್ಞೆ ಕಾಡುವುದು ಸಹಜ. ಪಾಪ ಪ್ರಜ್ಞೆ ಮತ್ತು ನರಕದ ಭಯ ಧರ್ಮದ ದಂಧೆಯ ಬಂಡವಾಳ. ಈ ಜನರಿಗೆ ತಮ್ಮ ಪಾಪಗಳನ್ನು ತೊಳೆದುಕೊಂಡು ಪಾವನರಾಗುವ ಒಂದು ಸರಳ ಸರಕು ಈ ಕುಂಭಮೇಳ. ಅದು ಗಂಗೆಯೇ ಆಗಬೇಕು. ಅದು ತ್ರಿವೇಣಿ ಸಂಗಮವೇ ಆಗಿರಬೇಕು. ಅದು ಇಂತಿಂತ ಮುಹೂರ್ತವೇ ಆಗಿರಬೇಕು. ಅಲ್ಲಿ ಬಂದು ಮುಳುಗಿ. ಏಳಿ. ಮುಳುಗಿ. ಏಳಿ. ಮುಳುಗಿ ಮುಳುಗಿ ಏಳಿ. ಅಷ್ಟೇ! ಎಲ್ಲಾ ಝಳ ಝಳ, ಎಲ್ಲಾ ಫಳ ಫಳ!

ಹಾಗೆಯೇ ಉದ್ಯಮ ಮತ್ತು ಶಿಕ್ಷಣ ರಂಗದಲ್ಲಿ ಪಾತಾಳದಲ್ಲಿರುವ ಯೋಗಿಯ ಉತ್ತರ ಪ್ರದೇಶಕ್ಕೆ ಐವತ್ತು ಕೋಟಿ ಜನ ಬಂದು ಊಟ ವಸತಿ ದಕ್ಷಿಣೆ ಇತ್ಯಾದಿಗೆ ನಾಲ್ಕಾರು ಸಾವಿರ ಖರ್ಚು ಮಾಡಿದರೆ ಹೆಚ್ಚು ಕಡಿಮೆ ಒಂದು ಲಕ್ಷ ಕೋಟಿ ವ್ಯವಹಾರ. ಹೀಗಾಗಿ ಇದಕ್ಕೆ ಸೆಲೆಬ್ರಿಟಿ ಎಂಡೋರ್ಸ್ಮೆಂಟು, ಮಾಧ್ಯಮಗಳ ಪ್ರಚಾರ ಇತ್ಯಾದಿ ಅಗತ್ಯ. ಅಲ್ವೇ ಮತ್ತೆ?
ಇದನ್ನು ಓದಿದ್ದೀರಾ?: ಎಲ್ಲ ಕಾಲಕ್ಕೂ ಅನ್ವಯವಾಗುವ ಮಂಟೋರ ʼಹಿಂದೂಸ್ತಾನ್ ಕೋ ಲೀಡರೋ ಸೆ ಬಚಾವೋʼ
ಅಮೆರಿಕಾದ ಬೆನ್ನೆಲುಬು ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು. ಜಗತ್ತಿನ ಎಲ್ಲಾ ದೊಡ್ಡ ಉದ್ಯಮಗಳು ಇರುವುದು ದಕ್ಷಿಣ ಭಾರತದಲ್ಲಿ. ಇಡೀ ದೇಶದ ಅರ್ಧದಷ್ಟು ಜಿಡಿಪಿ ಗಳಿಕೆ ದಕ್ಷಿಣದಿಂದಲೇ. ಅಷ್ಟೇ ಏಕೆ ಭಾರತದ ಅತಿ ಶ್ರೀಮಂತ ದೇವಸ್ಥಾನಗಳು ಕೂಡ ಇಲ್ಲಿವೆ. ತಿರುಪತಿ, ಅನಂತ ಪದ್ಮನಾಭ, ಧರ್ಮಸ್ಥಳ ಅಷ್ಟೇ ಅಲ್ಲ ಎಪ್ಪತ್ತು ಪರ್ಸೆಂಟ್ ದೇವಸ್ಥಾನಗಳು ದಕ್ಷಿಣದಲ್ಲಿಯೇ ಇವೆ. ಇವನ್ನೆಲ್ಲ ವಿರೋಧ ಮಾಡುವ ಬಸವಣ್ಣ, ನಾರಾಯಣ ಗುರು, ಪೆರಿಯಾರ್ ಕೂಡ ಇದ್ದಾರೆ.
ಇದೆಲ್ಲ ಉತ್ತರದ ಬಿಮಾರು ಪ್ರದೇಶಕ್ಕೆ ಕೀಳರಿಮೆ ಹುಟ್ಟಿಸುವುದು ಸಹಜ. ಈ ಕೀಳರಿಮೆಯ ಸಹಜ ಪರಿಣಾಮ ಈ ಹಿಂದಿ ಮತ್ತು ಹಿಂದೂ ರಾಜಕಾರಣ. ದಕ್ಷಿಣದೊಂದಿಗೆ ಜ್ಞಾನ ವಿಜ್ಞಾನ ಉದ್ಯಮ ರಂಗಗಳಲ್ಲಿ ಪೈಪೋಟಿ ಮಾಡಲಾರದ ಉತ್ತರದ ಹುನ್ನಾರ ರಾಮ ಮಂದಿರ, ಕುಂಭ ಮೇಳ ಇತ್ಯಾದಿ ಮಂಕುಬೂದಿ.
ಇರಲಿ. ಸನಾತನ ಧರ್ಮದ ಸಾರವನ್ನೇ ತಿಳಿಯೋಣ ಬನ್ನಿ… ಐವತ್ತು ಕೋಟಿ ಜನ ಒಂದೇ ಒಂದು ಜಾಗದಲ್ಲಿ ಸ್ನಾನ ಮಾಡಿದರೆ ಅದು ಗಂಗೆಯ ಮೇಲೆ ಮಾಡುವ ಆಕ್ರಮಣ ಅಲ್ಲವೇ? ಗಂಗೆಯ ಮೇಲೆ ಆಕ್ರಮಣ ಮಾಡುವುದು ಸನಾತನ ಧರ್ಮವೇ? ನೀರು ಗಾಳಿ ಭೂಮಿ ಬೆಂಕಿ ಆಕಾಶ ಇತ್ಯಾದಿ ಪಂಚ ಮಹಾಭೂತಗಳೊಂದಿಗೆ ಸಮತೋಲದ ಸಹಜೀವನವನ್ನು ಕಲಿಸುತ್ತದೆ ಸನಾತನ ಧರ್ಮ. ನಿಸರ್ಗದ ಮೇಲೆ ಆಕ್ರಮಣವನ್ನಲ್ಲ.
ಅಷ್ಟಕ್ಕೂ ಗಂಗೆ ಅಂದರೆ ಏನು. ಕೇವಲ ಗಂಗಾ ನದಿಯ ನೀರು ಮಾತ್ರ ಗಂಗೆಯೇ? ಅಥವಾ ಭೂಮಂಡಲದ ಜಲ ಎಲ್ಲವೂ ಗಂಗೆಯೋ? ಗಂಗೆ ಅಂದರೆ ಹೆಸರು ಮಾತ್ರ ಅಲ್ಲ. ಗಂಗೆ ಅನ್ನುವ ಹೆಸರಿಗೆ ಜೋತು ಬೀಳುವುದಿಕ್ಕೆ ಕಾರಣ ಆ ನದಿಯ ಸುತ್ತಲಿನ ದಂಧೆ. ನದಿ ಮೊದಲು ಹುಟ್ಟಿದೆ. ಆಮೇಲೆ ಹೆಸರು ಕೊಟ್ಟಿದ್ದೀರಿ. ನದಿ ನೀರು ಮುಖ್ಯ ಹೆಸರಲ್ಲ. ಹೆಸರನ್ನು ದಂಧೆ ಮಾಡಿ ನದಿ ನೀರು ಕಲುಷಿತಗೊಳಿಸಿ ಅದಕ್ಕೆ ಧರ್ಮದ ಗುರಾಣಿ ಹಿಡಿದರೆ ನೀರು ಶುದ್ಧವಾಗುವುದಿಲ್ಲ.
ನೀವಂತೂ ಶುದ್ಧವಾಗುವ ಸಾಧ್ಯತೆಯೇ ಇಲ್ಲ. ಯಾಕೆಂದರೆ, ನಿಮಗೆ ಪಾಪ ಪುಣ್ಯಗಳ ಅರ್ಥವೇ ಆಗಿಲ್ಲ. ಯಾರೋ ಪ್ರಗತಿಪರ ಎಡಪಂಥೀಯ ಅಲ್ಲ. ನಿಮ್ಮ ಧರ್ಮ ಶಾಸ್ತ್ರಗಳೇ ಹೇಳುವ ಪ್ರಕಾರ ಪಾಪ ಅನ್ನುವುದು ಮನುಷ್ಯನಿಗೆ ಪುಣ್ಯದಷ್ಟೇ ಸಹಜ ಗುಣ. ಪಾಪವನ್ನು ಮಾಡಿಸುವುದು ಸೈತಾನ ಅಂತ ಬೈಬಲ್ಲು ಮತ್ತು ಕುರಾನು ಹೇಳಿದರೆ, ಸನಾತನ ಧರ್ಮ ಹೇಳುತ್ತದೆ ಮನುಷ್ಯನಲ್ಲಿ ಅರಿಷಡ್ವರ್ಗಗಳು ಇರುವುದು ಸಹಜ ಅಂತ. ಈ ಅರಿಷಡ್ವರ್ಗಗಳ ಮೂಲ ತ್ರಿಗುಣಗಳು- ರಜಸ್ಸು, ತಮಸ್ಸು ಮತ್ತು ಸತ್ವ. ಏನೇನೂ ಇಲ್ಲದಾಗ ಇದ್ದೇ ಇರುವ ತಮಸ್ಸು ಮೂಲಭೂತ ಗುಣ. ಇದು ಭೌತಶಾಸ್ತ್ರದಲ್ಲಿ ನಾವು ಕಲಿಯುವ ಜಡತ್ವ(inertia) ಇದ್ದಂತೆ. ರಜಸ್ಸಿಗೆ ಗತಿ ಮತ್ತು ತಡೆ ಎರಡನ್ನೂ ನೀಡುವುದು ತಮಸ್ಸು. ಒಂದು ವಸ್ತುವಿಗೆ momentum ಅಷ್ಟೇ ಅಲ್ಲ, rest ಕೂಡ ತರಲು inertia ಮುಖ್ಯ. inertia ಮತ್ತು velocity ಎರಡನ್ನು ಸಮನಾಗಿ ನಿಯಂತ್ರಣ ಮಾಡಿದರೆ ಮಾತ್ರ ನಿಮ್ಮ ಗಾಡಿ ನೆಟ್ಟಗೆ ಓಡುತ್ತದೆ. ಹಾಗೆಯೇ ರಜಸ್ಸು ಮತ್ತು ತಮಸ್ಸನ್ನು ಸಮತೋಲನದಲ್ಲಿ ನಡೆಸಿಕೊಂಡರೆ ಆರೋಗ್ಯಕರ ಜೀವನ. ಈ ಸಮತೋಲನವನ್ನು ಕಾಪಾಡುವುದು ಸತ್ವ ಗುಣ. ತಮಸ್ಸು ನಿಯಂತ್ರಣ ತಪ್ಪಿದರೆ ಪಾಪಗಳನ್ನು ಮಾಡುವ ಮನುಷ್ಯ ನರಕದೆಡೆಗೆ ಸಾಗುತ್ತಾನೆ. ತಮಸ್ಸನ್ನು ಕಡಿಮೆ ಮಾಡಿಕೊಂಡ ಮನುಷ್ಯ ಸ್ವರ್ಗದೆಡೆಗೆ ಸಾಗುತ್ತಾನೆ. ಇವೆಲ್ಲ ನಡೆಯಬೇಕಾದ್ದು ಮನುಷ್ಯನ ಒಳಗೆ. ಹೊರಗೆ ನಡೆಯುವ ಪೂಜೆ, ಪುಣ್ಯ ಸ್ನಾನ ಇತ್ಯಾದಿ ನಿಷ್ಪ್ರಯೋಜಕ.
ಇದನ್ನು ಓದಿದ್ದೀರಾ?: ಮಹಾ ಕುಂಭಮೇಳ | ಮಹಿಳೆಯರು ಸ್ನಾನ ಮಾಡುವ, ಬಟ್ಟೆ ಬದಲಾಯಿಸುವ ಚಿತ್ರಗಳ ಮಾರಾಟ!
ಸ್ವರ್ಗ ಮತ್ತು ನರಕದ ಕಲ್ಪನೆ ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಇದೆ. ಆದರೆ ಮೋಕ್ಷದ ಕಲ್ಪನೆ ಇರುವುದು ಕೇವಲ ಹಿಂದೂ ಧರ್ಮಗಳಲ್ಲಿ. ಸನಾತನ, ಜೈನ, ಬೌದ್ಧ ಇವು ಹಿಂದೂ ಧರ್ಮಗಳು. ಈ ಧರ್ಮಗಳಲ್ಲಿ ಮಾತ್ರ ಮೋಕ್ಷದ ಕಲ್ಪನೆ ಇದೆ. ಅಂದರೆ ಸ್ವರ್ಗ ಮತ್ತು ನರಕವನ್ನು ಮೀರಿದವನಿಗೆ ಮಾತ್ರ ಮೋಕ್ಷ ಪ್ರಾಪ್ತಿ ಆಗುತ್ತದೆ. ಅಂದರೆ ಅರಿಷಡ್ವರ್ಗಗಳನ್ನು ಗೆದ್ದು, ತ್ರಿಗುಣಗಳನ್ನು ದಾಟಿ ಸೇರುವ ಜಾಗ ಮೋಕ್ಷ. ಆದ್ದರಿಂದಲೇ ಇಲ್ಲಿ ದೇವರಿಗೆ ತ್ರಿಗುಣಾತೀತ ಅಂತಾರೆ. ಶಿಶುನಾಳ ಶರೀಫಜ್ಜ ಹೇಳ್ತಾನೆ, ಆರು ಮೂರನು ದಾಟಿ ಮೇಲಕೆ ಏರಿದವನೇ ಗಟ್ಟಿ ಅಂತ. ಅಜ್ಜ ಹೇಳಿದ್ದು ಇವೇ ಅರಿಷಡ್ವರ್ಗ ಮತ್ತು ತ್ರಿಗುಣಗಳ ಮಾತು.
ಯಾವುದು ಅಂತರಂಗದಲ್ಲಿ ನಡೆಯುವ ಆಧ್ಯಾತ್ಮಿಕ ಘಟನೆಯೋ, ಅದಕ್ಕೊಂದು ಹೆಸರು ಜಾಗ ಕೊಟ್ಟು ಚೆನ್ನಾಗಿ ಪ್ಯಾಕೇಜಿಂಗ್ ಮಾಡಿ ಜಾತ್ರೆ ಮಾಡಿ ದುಡ್ಡು ಮಾಡುವ ದಂಧೆ ಆಗಿಬಿಟ್ಟಿದೆ.
ಈ ಹೊರಗಣ ಜಾತ್ರೆ ಬಿಟ್ಟು ಒಳಗಣ ಯಾತ್ರೆಯನ್ನು ಕೈಗೊಳ್ಳೋಣ.


ಡಾ. ಬಸವರಾಜ್ ಇಟ್ನಾಳ್
ಪತ್ರಕರ್ತ, ಚಿತ್ರನಿರ್ದೇಶಕ