- ಲಲಿತ್ ಮೋದಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದ ಹಿರಿಯ ವಕೀಲ ಸಿ.ಯು ಸಿಂಗ್
- ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ದ್ವಿಸದಸ್ಯ ಪೀಠ ವಿಚಾರಣೆ
ಲಲಿತ್ ಮೋದಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಸೋಮವಾರ (ಏಪ್ರಿಲ್ 24) ಮುಕ್ತಾಯಗೊಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗ ನಿಂದನೆ ಪೋಸ್ಟ್‌ಗಳನ್ನು ಮಾಡಿದ್ದ ಮಾಜಿ ಐಪಿಎಲ್ ಆಯುಕ್ತ ಲಲಿತ್ ಅವರು ಬೇಷರತ್ ಕ್ಷಮೆಯಾಚಿಸಿದ್ದರಿಂದ ಅವರ ವಿರುದ್ಧದ ಆರೋಪಗಳನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ದ್ವಿಸದಸ್ಯ ಪೀಠ ಲಲಿತ್ ಮೋದಿ ಅವರು ನ್ಯಾಯಾಂಗ ನಿಂದನೆ ಆರೋಪದ ಅರ್ಜಿ ವಿಚಾರಣೆ ನಡೆಸಿತು.
ಆರೋಪಕ್ಕೆ ಸಂಬಂಧಿಸಿ ಲಲಿತ್ ಅವರು ಸಲ್ಲಿಸಿದ ಬೇಷರತ್ ಕ್ಷಮೆಯ ಪ್ರಮಾಣಪತ್ರವನ್ನು ಪೀಠ ಪರಿಗಣಿಸಿತು. ಲಲಿತ್ ಮೋದಿ ಅವರು ತಾವು ಇನ್ನೆಂದೂ ನ್ಯಾಯಾಂಗ ವಿರುದ್ಧ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
“ಭವಿಷ್ಯದಲ್ಲಿ ನಾನು ಯಾವುದೇ ರೀತಿಯಲ್ಲಿ ಭಾರತೀಯ ನ್ಯಾಯಾಂಗ ಅಥವಾ ನ್ಯಾಯಾಲಯಗಳ ಘನತೆಗೆ ಧಕ್ಕೆ ತರುವಂತಹ ಯಾವುದೇ ಕಾರ್ಯ ಮಾಡುವುದಿಲ್ಲ” ಎಂದು ಉಲ್ಲೇಖಿಸಿದ್ದಾರೆ.
“ನಾವು ಬೇಷರತ್ ಕ್ಷಮೆಯನ್ನು ಅಂಗೀಕರಿಸಿದ್ದೇವೆ. ಭವಿಷ್ಯದಲ್ಲಿ ಲಲಿತ್ ಅವರು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಕಳಂಕ ತರುವಂತಹ ಯಾವುದೇ ಪ್ರಯತ್ನವನ್ನು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ” ಎಂದು ಪೀಠ ಎಚ್ಚರಿಕೆ ನೀಡಿದೆ.
“ವಿಶಾಲ ಹೃದಯದಿಂದ ನ್ಯಾಯಾಲಯ ಈ ಕ್ಷಮೆಯನ್ನು ಅಂಗೀಕರಿಸಿದೆ. ಕ್ಷಮಾಪಣೆಯನ್ನು ಮನದಾಳದಿಂದ ಬೇಷರತ್ತಾಗಿ ಕೇಳಿದಾಗ ಅದನ್ನು ನ್ಯಾಯಾಲಯ ಯಾವಾಗಲೂ ಪರಿಗಣಿಸುತ್ತದೆ. ಅದಕ್ಕಾಗಿ ಕ್ಷಮೆಯನ್ನು ಅಂಗೀಕರಿಸಿ ವಿಚಾರಣಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುತ್ತದೆ” ಎಂದು ಪೀಠ ಹೇಳಿದೆ.
“ನ್ಯಾಯಾಂಗವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂಬುದು ನಮ್ಮ ಏಕೈಕ ಕಾಳಜಿಯಾಗಿದೆ” ಎಂದು ಪೀಠ ಹೇಳಿತು.
ಲಲಿತ್ ಅವರು ನ್ಯಾಯಾಂಗದ ವಿರುದ್ಧ ನೀಡಿದ ಹೇಳಿಕೆಯನ್ನು ಏಪ್ರಿಲ್ 13 ರಂದು ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಈ ಸಂಬಂಧ ಲಲಿತ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಬೇಷರತ್ ಕ್ಷಮೆ ಕೋರುವಂತೆ ಸೂಚಿಸಿತ್ತು. ಲಲಿತ್ ಮೋದಿ ಅವರು ನ್ಯಾಯಾಂಗ ಮತ್ತು ಕಾನೂನಿಗಿಂತ ದೊಡ್ಡವರಲ್ಲ. ಮತ್ತೆ ಇಂತಹ ಪ್ರಯತ್ನ ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೀಠ ಉಲ್ಲೇಖಿಸಿತ್ತು.
ಈ ಸುದ್ದಿ ಓದಿದ್ದೀರಾ? ದೆಹಲಿ | ಅಪಾರ್ಟ್‌ಮೆಂಟ್‌ಗೆ ನುಗ್ಗಿ ದುಷ್ಕರ್ಮಿಗಳ ಗುಂಡಿನ ದಾಳಿ
ನ್ಯಾಯಾಂಗ ನಿಂದನೆ ಹೇಳಿಕೆ ಸಂಬಂಧ ಬೇಷರತ್ ಕ್ಷಮೆ ಹಾಗೂ ಭವಿಷ್ಯದಲ್ಲಿ ಇಂತಹ ಪ್ರಯತ್ನ ಮಾಡುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು.
ಲಲಿತ್ ಅವರು ಮಾರ್ಚ್ 30 ರಂದು ಮಾಡಿದ್ದ ಟ್ವೀಟ್‌ನಲ್ಲಿ ನ್ಯಾಯಾಂಗ ನಿಂದನೆಯ ಹೇಳಿಕೆಗಳಿದ್ದು, ಅವು ನ್ಯಾಯಾಂಗ ಮತ್ತು ನ್ಯಾಯಾಧೀಶರ ಘನತೆಗೆ ಕುಂದು ಉಂಟುಮಾಡುತ್ತವೆ ಎಂದು ಹಿರಿಯ ವಕೀಲ ಸಿ.ಯು ಸಿಂಗ್ ಅವರು ಲಲಿತ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.