ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ಯೋಧನೋರ್ವ ತನ್ನ ತಾಯಿ, ಸೋದರಳಿಯ ಮತ್ತು ಇಬ್ಬರು ಸೊಸೆಯಂದಿರು ನಿದ್ದೆಯಲ್ಲಿದ್ದಾಗ ಒಟ್ಟಾಗಿ ಕುಟುಂಬದ ಆರು ಮಂದಿಯ ಕೊಚ್ಚಿ ಕೊಲೆ ಮಾಡಿರುವ ಘಟನೆ ಹರಿಯಾಣದ ನರೇನ್‌ಗಢದ ರಾಟರ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಯೋಧ ಭೂಷಣ್ ಕುಮಾರ್ ತನ್ನ ತಾಯಿ ಸೇರಿ ಆರು ಮಂದಿಯನ್ನು ಕೊಂದ ಬಳಿಕ ಮನೆಯಲ್ಲಿ ಶವಗಳನ್ನು ಸುಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿವೃತ್ತ ಯೋಧನನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೊಸೆ ಚಂಡೀಗಢದ ಪಿಜಿಐಎಂಇಆರ್‌ನಲ್ಲಿ ಸಾವನ್ನಪ್ಪಿದ್ದಾಳೆ ಎಂದು ನರೈಂಗಢ ಪೊಲೀಸ್ ಠಾಣೆ ಎಸ್‌ಎಚ್‌ಒ ರಾಂಪಾಲ್ ತಿಳಿಸಿದ್ದಾರೆ.
ಆರೋಪಿಯು ತನ್ನ ತಂದೆಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಇಬ್ಬರು ಸಹೋದರರ ನಡುವಿನ ಜಮೀನು ವಿವಾದ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಗುರಾಯಿಸಿ ನೋಡಿದ ಯುವಕನಿಗೆ ಇರಿದು ಕೊಲೆ!
ಪೊಲೀಸರ ಪ್ರಕಾರ ಮೃತರನ್ನು ಭೂಷಣ್ ಕುಮಾರ್ ತಾಯಿ ಸರೂಪಿ ದೇವಿ (65), ಸಹೋದರ ಹರೀಶ್ ಕುಮಾರ್ (35), ಸೊಸೆ ಸೋನಿಯಾ (32) ಮತ್ತು ಅವರ ಮೂವರು ಮಕ್ಕಳಾದ ಪರಿ (7), ಯಶಿಕಾ (5) ಮತ್ತು ಮಯಾಂಕ್ (6 ತಿಂಗಳು) ಎಂದು ಗುರುತಿಸಲಾಗಿದೆ.
“ಆರೋಪಿಯನ್ನು ಬಂಧಿಸಲು ನಾವು ಅನೇಕ ತಂಡಗಳನ್ನು ರಚಿಸಿದ್ದು ಆರೋಪಿಯ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಭೀಕರ ಹತ್ಯೆಗೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ಅಂಬಾಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೀಂದರ್ ಸಿಂಗ್ ಭೋರಿಯಾ ತಿಳಿಸಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿದೆ.