ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು ಸೋನು ಪಾಸ್ವಾನ್ ಎಂದು ಗುರುತಿಸಲಾಗಿದ್ದು, ಬಿಹಾರದ ಸಮಷ್ಟಿಪುರ ನಿವಾಸಿಯಾದ ಈತ ದಾವಣಗೆರೆಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಯನ್ನು ಪಾಟ್ನಾಕ್ಕೆ ಕರೆದೊಯ್ಯಲಾಗಿದೆ.
ಜನವರಿ 30ರಂದು ಬಿಹಾರದ ಪೊಲೀಸ್ ಮಹಾ ನಿರ್ದೇಶಕ ಆರ್ ಎಸ್ ಬಟ್ಟಿ ಅವರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳಿಸಿದ್ದ ಸೋನು ಪಾಸ್ವಾನ್, ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಳ್ಳದಿದ್ದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಇತರ ಶಾಸಕರನ್ನು ಬಾಂಬ್ ಸ್ಫೋಟಿಸಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ
ಈ ಬಗ್ಗೆ ತನಿಖೆ ನಡೆಸಿದ್ದ ರಾಜ್ಯ ಆರ್ಥಿಕ ಅಪರಾಧ ಘಟಕ ಪೋನ್ ನಂಬರ್ಅನ್ನು ತನಿಖೆಗೊಳಪಡಿಸಿತ್ತು. ಫೋನ್ ಸಂಖ್ಯೆಯ ಲೊಕೇಷನ್ ಪತ್ತೆ ಹಚ್ಚಿದಾಗ ಕರ್ನಾಟಕದ ದಾವಣಗೆರೆಯಲ್ಲಿರುವುದು ಪತ್ತೆಯಾಗಿತ್ತು. ತರುವಾಯು ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಸ್ಥಳವನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲಾಯಿತು.
ಬಿಹಾರದಲ್ಲಿ ನಿರುದ್ಯೋಗ ಹಾಗೂ ಬಡತನ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಆರೋಪಿ ನಿತೀಶ್ ಕುಮಾರ್ ಆರ್ಜೆಡಿಯೊಂದಿಗೆ ಮೈತ್ರಿ ಕಡಿದುಕೊಂಡಿರುವುದಕ್ಕೆ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.