ಕೇರಳದಲ್ಲಿ ಸತತ ಎರಡನೇ ಬಾರಿಗೆ ಗೆಲುವು ಕಂಡು ದಾಖಲೆ ನಿರ್ಮಿಸಿದ್ದ ಎಲ್ಡಿಎಫ್ ಮೂರನೇ ಬಾರಿಗೆ ಗದ್ದುಗೆ ಪಡೆಯುವಲ್ಲಿ ವಿಫಲವಾಗಿದೆ. ಎಡಕೋಟೆಯನ್ನು ಕೆಡವಿ ಯುಡಿಎಫ್ ಭರ್ಜರಿ ಗೆಲುವನ್ನು ಸಾಧಿಸಿದೆ. ಇದರಿಂದಾಗಿ ಐದು ದಶಕಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಮ್ಯುನಿಸ್ಟ್ ಸರ್ಕಾರವಿಲ್ಲದ ಭಾರತವನ್ನು ನಾವು ಕಾಣುವಂತಾಗಿದೆ.
ಪಶ್ಚಿಮ ಬಂಗಾಳದಲ್ಲಿ 1977ರಿಂದ 2011 ರವರೆಗೆ ಎಡಪಕ್ಷಗಳು ಅಧಿಕಾರದಲ್ಲಿದ್ದವು. 1993ರಿಂದ 2018ರವರೆಗೆ ತ್ರಿಪುರದಲ್ಲಿ ಎಡರಂಗ ಆಡಳಿತ ನಡೆಸಿತ್ತು. ಕೇರಳದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಎಲ್ಡಿಎಫ್ ಅಧಿಕಾರಕ್ಕೆ ಬರುತ್ತಿತ್ತು. ಆದರೆ 2021ರಲ್ಲಿ ಮೊದಲ ಬಾರಿಗೆ ಸತತ ಎರಡು ಬಾರಿಗೆ ಎಲ್ಡಿಎಫ್ ಗೆಲುವು ಕಂಡಿತ್ತು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಶೈಲಜಾ ಟೀಚರ್ ಸೋಲಲು ಪಕ್ಷ ಪೆರವೂರು ಟಿಕೆಟ್ ಕೊಟ್ಟಿದೆಯೇ?
ಮಮತಾ ಬ್ಯಾನರ್ಜಿ 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಎಡಪಕ್ಷ ಆಡಳಿತವನ್ನು ಕೆಡವಿ ಟಿಎಂಸಿ ಸರ್ಕಾರ ರಚಿಸಿದ್ದರು. ತ್ರಿಪುರಾದಲ್ಲಿ 25 ವರ್ಷಗಳ ಹಳೆಯ ಎಡಪಕ್ಷ ಆಡಳಿತವು 2018ರಲ್ಲಿ ಕೊನೆಗೊಂಡಿದ್ದು, ಆಶ್ಚರ್ಯವೆಂಬಂತೆ ಬಿಜೆಪಿ ಅಧಿಕಾರ ಪಡೆಯಿತು. 2023ರಲ್ಲಿ ಬಿಜೆಪಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿತು.
ಇವೆಲ್ಲವುದರ ನಡುವೆ 2016ರಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬಂದ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಪ್ರಜಾಪ್ರಭುತ್ವ ರಂಗ ಸರ್ಕಾರವೊಂದೇ ಈವರೆಗೆ ದೇಶದಲ್ಲಿ ಎಡರಂಗಕ್ಕೆ ಆಶಾಕಿರಣವಾಗಿತ್ತು. ಆದರೆ ಇದೀಗ ಆ ಬೆಳಕೂ ಆರಿದೆ. 1977ರ ನಂತರ ಮೊದಲ ಬಾರಿಗೆ, ಭಾರತದಲ್ಲಿ ಕಮ್ಯುನಿಸ್ಟ್ ಮುಖ್ಯಮಂತ್ರಿ ಇಲ್ಲದಂತಾಗಿದೆ.
2004ರಲ್ಲಿ ಎಡರಂಗಗಳು ದೇಶದ ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ಪಾತ್ರ ವಹಿಸಿದ್ದವು. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು ತಮ್ಮ ಇತಿಹಾಸದಲ್ಲೇ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಸರ್ಕಾರ ರಚನೆಯ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದ್ದವು. 2004ರ ಚುನಾವಣೆಯಲ್ಲಿ ಸಿಪಿಐ(ಎಂ), ಸಿಪಿಐ, ಆರ್.ಎಸ್.ಪಿ ಮತ್ತು ಫಾರ್ವರ್ಡ್ ಬ್ಲಾಕ್ ಒಳಗೊಂಡ ಎಡರಂಗವು ಒಟ್ಟು 61 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಎಡಪಕ್ಷಗಳ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
2008ರಲ್ಲಿ ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದವನ್ನು (Indo-US Nuclear Deal) ವಿರೋಧಿಸಿ ಎಡಪಕ್ಷಗಳು ಯುಪಿಎ-1 ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದವು. ಇದರಿಂದಾಗಿ 2009ರ ಚುನಾವಣೆಯನ್ನು ಎಡಪಕ್ಷಗಳು ಕಾಂಗ್ರೆಸ್ ವಿರುದ್ಧವಾಗಿ ಸ್ಪರ್ಧಿಸಿದವು. ಆದರೆ 2009ರಲ್ಲಿ ಎಡರಂಗ ತೀವ್ರ ಹಿನ್ನಡೆ ಕಂಡಿದೆ. 2004ರಲ್ಲಿ 61 ಸ್ಥಾನಗಳನ್ನು ಗೆದ್ದಿದ್ದ ಎಡರಂಗವು, 2009ರ ಚುನಾವಣೆಯಲ್ಲಿ ಕೇವಲ 24 ಸ್ಥಾನಗಳಿಗೆ ಕುಸಿಯಿತು. ಈ ಚುನಾವಣಾ ಫಲಿತಾಂಶವು 2011ರಲ್ಲಿ ಬಂಗಾಳದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆ ಕೊನೆಗೊಳ್ಳಲು ಮುನ್ಸೂಚನೆಯಾಗಿತ್ತು.
ಅದಾದ ಬಳಿಕ 2014ರಲ್ಲಿ 10 ಮತ್ತು 2019ರಲ್ಲಿ 5 ಸ್ಥಾನಗಳಿಗೆ ಕುಸಿದಿದೆ. ಸಿಪಿಎಂ ಮತ್ತು ಸಿಪಿಐ ಈಗ ಲೋಕಸಭೆಯಲ್ಲಿ 9 ಸಂಸದರನ್ನು ಹೊಂದಿವೆ. ಸಿಪಿಐ(ಎಂ) ನ ನಾಲ್ವರು, ಸಿಪಿಐನ ಇಬ್ಬರು, ಸಿಪಿಐ(ಎಂಎಲ್) ಲಿಬರೇಶನ್ನ ಇಬ್ಬರು, ಆರ್ಎಸ್ಪಿ ಒಬ್ಬರು ಸಂಸದರು ಇದ್ದಾರೆ.





