ಎಲ್ಲಿಯೂ ತಮ್ಮ ಪಕ್ಷದ ಧೋರಣೆಗಳ ವಿರುದ್ಧ ಧ್ವನಿ ಎತ್ತಿದವರಲ್ಲ ಟೀಚರಮ್ಮ. ಈ ವಿಚಾರದಲ್ಲಿ ಎಂದಿಗೂ ಬಹಿರಂಗವಾಗಿ ಮಾತನಾಡಿದವರಲ್ಲ. ಯಾವುದೇ ಮಾಧ್ಯಮ ಪ್ರಶ್ನಿಸಿದರೂ ಶೈಲಜಾ ಅವರ ಉತ್ತರ ಒಂದೇ. ಅದು "ಪಕ್ಷದ ನಿರ್ಧಾರವೇ ಅಂತಿಮ"
ಕೇರಳದಲ್ಲಿ ಇನ್ನೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಟಿಕೆಟ್‌ಗಳ ಹಂಚಿಕೆ ನಡೆದಿದೆ. ಯುಡಿಎಫ್, ಎಲ್‌ಡಿಎಫ್ ಎರಡೂ ಯುವಕರಿಗೆ ಮಣೆ ಹಾಕಿದೆ. ಇದರಿಂದಾಗಿ ಹಲವು ಹಿರಿಯ ನಾಯಕರುಗಳು ಬಂಡಾಯವೆದ್ದಿರುವುದೂ ಇದೆ. ಇವೆಲ್ಲವುದರ ನಡುವೆ ಪ್ರಮುಖವಾಗಿ ಕಾಣುವುದು ಶೈಲಜಾ ಟೀಚರ್. ಕೇರಳ ರಾಜಕಾರಣದಲ್ಲಿ ಕೆ ಕೆ ಶೈಲಜಾ ಅವರನ್ನು ಸಿಪಿಐಎಂ ಬದಿಗೊತ್ತುತ್ತಿದೆ ಎಂಬ ಚರ್ಚೆಯು ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಇದೀಗ ಅವರ ಭದ್ರಕೋಟೆಯಾದ ಕೂತುಪರಂಬ ಬಿಟ್ಟು ಪೆರವೂರು ಕ್ಷೇತ್ರದಿಂದ ಕಣಕ್ಕಿಳಿಸುವ ನಿರ್ಧಾರವು ಈ ಆರೋಪಗಳಿಗೆ ಪುಷ್ಟಿ ನೀಡಿದೆ.
ಶೈಲಜಾ ಕೇರಳ ಮಾತ್ರವಲ್ಲ ಇಡೀ ವಿಶ್ವದಲ್ಲೇ ಹೆಸರುವಾಸಿಯಾದ ದಕ್ಷ ನಾಯಕಿ. ನಿಫಾ ವೈರಸ್ ಮತ್ತು ಕೋವಿಡ್-19 ಸಾಂಕ್ರಾಮಿಕವನ್ನು ಶೈಲಜಾ ಟೀಚರ್ ನಿರ್ವಹಿಸಿದ ರೀತಿ ಕೇವಲ ಕೇರಳ ಅಥವಾ ಭಾರತ ಮಾತ್ರವಲ್ಲ ಇಡೀ ವಿಶ್ವದ ಗಮನ ಸೆಳೆದಿತ್ತು. ಅವರ ಕಾರ್ಯವೈಖರಿಯನ್ನು ಕೇರಳ ಮಾಡೆಲ್ ಎಂದೇ ಕರೆಯಲಾಯಿತು. ಆದರೆ ಅದಾದ ಬಳಿಕ 2021ರಿಂದಲೇ ಸಿಪಿಐಎಂ ಪಕ್ಷದೊಳಗಿನ ಕೆಲವು ಪ್ರಭಾವಿ ನಾಯಕರುಗಳು ಟೀಚರಮ್ಮರನ್ನು ಬದಿಗೊತ್ತುತ್ತಿದ್ದಾರೆ ಎಂಬ ಆರೋಪವು ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಪ್ರಗತಿಪರ ರಾಜ್ಯದಲ್ಲಿ ಮಹಿಳೆಯರಿಗಿಲ್ಲ ಟಿಕೆಟ್: ಪರಂಪರಾಗತ ಅನ್ಯಾಯ ಮುಂದುವರಿಕೆ
ಶೈಲಜಾ ಟೀಚರ್ 2016ರಿಂದ 2021ರವರೆಗೆ ಕೂತುಪರಂಬ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿಯೇ ಕೇರಳ ಸರ್ಕಾರದ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಆದರೆ 2021ರಲ್ಲಿ ಶೈಲಜಾ ಟೀಚರ್ ಅವರ ರಾಜಕೀಯ ಜೀವನದ ಅತ್ಯಂತ ವಿವಾದಾತ್ಮಕ ತಿರುವು ಕಂಡುಬಂದಿದೆ. ಕೂತುಪರಂಬ ಬದಲಾಗಿ ಮಟ್ಟನೂರು ಕ್ಷೇತ್ರದಿಂದ ಸ್ಪರ್ಧಿಸಿದರೂ ಟೀಚರಮ್ಮ 60,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. ರಾಜ್ಯದಲ್ಲಿ ಎಲ್‌ಡಿಎಫ್ ಅಭೂತಪೂರ್ವ ಗೆಲುವು ಕಂಡಿತು. ಈ ವೇಳೆ ಶೈಲಜಾ ಅವರು ಆರೋಗ್ಯ ಸಚಿವೆಯಾಗಿ ಮುಂದುವರೆಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ವಾಸ್ತವದಲ್ಲಿ ನಡೆದಿದ್ದು ಬೇರೆ.
ಇಡೀ ಸಚಿವ ಸಂಪುಟಕ್ಕೆ ಹೊಸ ಮುಖಗಳನ್ನು ತರಬೇಕೆಂಬ ಸಿಪಿಐಎಂ ಪಕ್ಷದ ನಿರ್ಧಾರವನ್ನು ಮುಂದಿಟ್ಟು ಶೈಲಜಾ ಅವರನ್ನು ಕೈಬಿಡಲಾಯಿತು. ಆದರೆ ಪಿಣರಾಯಿ ವಿಜಯನ್ ಮಾತ್ರ ಮುಖ್ಯಮಂತ್ರಿಯಾಗಿ ಮುಂದುವರೆದರು. ಇದು ಹೊಸಬರಿಗೆ ಅವಕಾಶ ಎಂಬ ವಾದಕ್ಕೆ ಅರ್ಥವೇ ಇಲ್ಲದಂತೆ ಮಾಡಿತು. ಸಿಪಿಐಎಂ ಟೀಕೆಗೆ ಗುರಿಯಾಯಿತು. ಇನ್ನು ಶೈಲಜಾ ಟೀಚರ್‌ಗೆ ವಿಶ್ವವಿಖ್ಯಾತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಘೋಷಣೆಯಾದಾಗ ಅದನ್ನು ಸ್ವೀಕರಿಸಲು ಸಿಪಿಐಎಂ ಕೇಂದ್ರೀಯ ಸಮಿತಿ ಅನುಮತಿ ನೀಡಲಿಲ್ಲ. ಒಬ್ಬ ಮಹಿಳಾ ನಾಯಕಿಗೆ ಸಿಗುತ್ತಿದ್ದ ಅಂತಾರಾಷ್ಟ್ರೀಯ ಗೌರವವನ್ನು ಪಕ್ಷದೊಳಗಿನ ಪುರುಷ ಪ್ರಧಾನ ಚಿಂತನೆಗಳು ತಡೆಹಿಡಿದವು ಎಂಬ ಆರೋಪಗಳೂ ಕೇಳಿಬಂದವು. ಆದರೆ ಮ್ಯಾಗ್ಸೆಸೆ ಫಿಲಿಪೈನ್ಸ್‌ನ ಅಧ್ಯಕ್ಷರಾಗಿದ್ದಾಗ ಕಮ್ಯುನಿಸ್ಟ್ ಚಳವಳಿಯನ್ನು ಕ್ರೂರವಾಗಿ ಹತ್ತಿಕ್ಕಿದ್ದರು ಎಂಬ ಕಾರಣಕ್ಕೆ ಪ್ರಶಸ್ತಿ ಸ್ವೀಕಾರಕ್ಕೆ ಅವಕಾಶ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇವೆಲ್ಲವುದರ ನಡುವೆ ಶೈಲಜಾ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿರುವವರು ಎಂಬ ಮಾತುಗಳು ಹರಿದಾಡಲು ಶುರುವಾಯಿತು. ಕೋವಿಡ್, ನಿಫಾ ಬಿಕ್ಕಟ್ಟನ್ನು ಟೀಚರಮ್ಮ ನಿರ್ವಹಿಸಿದ ರೀತಿಯನ್ನು ಹೊಗಳಿದ್ದ ಬ್ರಿಟಿಷ್ ಮ್ಯಾಗಜೀನ್ ‘ಪ್ರಾಸ್ಪೆಕ್ಟ್’ ಟೀಚರಮ್ಮನನ್ನು “ವಿಶ್ವದ ಅಗ್ರ ಚಿಂತಕಿ” ಎಂದು ಗೌರವಿಸಿತು. ಕೋವಿಡ್ ನಿರ್ವಹಣೆ ಮಾಡಿದಾಗ ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ ಅವರನ್ನು ‘ಕೊರೊನಾ ಸಂಹಾರಕಿ’ (Coronavirus Slayer) ಎಂದು ಶ್ಲಾಘಿಸಿತ್ತು. ಕೇರಳದ ಆರೋಗ್ಯ ಕ್ಷೇತ್ರದಲ್ಲಿ ಶೈಲಜಾ ಕಾರ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಅಭಿಮಾನಿಗಳು ಸಿಎಂ ಕುರ್ಚಿ ಟೀಚರಮ್ಮದ್ದು ಎಂಬ ನಿರೀಕ್ಷೆ ಹೊಂದಿದ್ದರು. ಆದರೆ ಅಷ್ಟರಲ್ಲೇ 2024ರ ಲೋಕಸಭಾ ಚುನಾವಣೆಯಲ್ಲಿ ಶೈಲಜಾ ಅವರನ್ನು ವಡಕರ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಯಿತು. ಶೈಲಜಾರನ್ನು ಸಂಸದರನ್ನಾಗಿಸಿ ದೆಹಲಿಗೆ ಕಳುಹಿಸಿ ಸಿಎಂ ಸ್ಥಾನದ ರೇಸ್‌ನಿಂದ ಹೊರದಬ್ಬುವ ಹುನ್ನಾರವಿದು ಎಂಬ ಚರ್ಚೆಗಳು ಆ ಸಂದರ್ಭದಲ್ಲಿ ಎದ್ದಿತ್ತು. ಆದರೆ ಟೀಚರಮ್ಮ ಸ್ಪರ್ಧೆಯಲ್ಲಿ ಪರಾಭವಗೊಂಡರು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
ಆಗ ಟೀಚರಮ್ಮಗೆ ರಾಜಕೀಯವಾಗಿ ಯಾವುದೇ ಸ್ಥಾನವಿಲ್ಲದಾಯಿತು. ಟೀಚರಮ್ಮಗೆ ಉನ್ನತ ಸ್ಥಾನ ನೀಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿದ್ದಂತೆ ಶೈಲಜಾ ಅವರು ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರನ್ನಾಗಿ ಮಾಡಲಾಯಿತು. ಆದರೆ ಅವರಿಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ‘ಪಾಲಿಟ್ ಬ್ಯೂರೋ’ (PB) ನಲ್ಲಿ ಸ್ಥಾನ ನೀಡಲಾಗಿಲ್ಲ. ಕೇರಳದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮತ ಗಳಿಸಿದ ಮಹಿಳಾ ನಾಯಕಿಗೆ ಈ ಸ್ಥಾನ ನೀಡದಿರುವುದು ಅವರ ಮೇಲೆ ನಡೆಯುತ್ತಿರುವ ತಾರತಮ್ಯಕ್ಕೆ ಸಾಕ್ಷಿ ಎಂಬ ವಾದಗಳೂ ಕೇಳಿಬಂದವು. ಶೈಲಜಾ ಟೀಚರಮ್ಮರನ್ನು ವಯಸ್ಸಿನ ನೆಪ ಹೇಳಿ ಬೇಕೆಂದೇ ಬದಿಗೊತ್ತಲಾಗುತ್ತಿದೆ ಎಂಬ ಆರೋಪಗಳು ಮತ್ತೆ ಮತ್ತೆ ಕೇಳಿಬಂತು. ಅಷ್ಟರಲ್ಲೇ ವಿಧಾನಸಭೆ ಚುನಾವಣೆ ಬಂತು.
ಚುನಾವಣೆಯಲ್ಲಿ ಟೀಚರಮ್ಮಗೆ ಟಿಕೆಟ್ ನೀಡಲ್ಲ ಎಂಬ ವದಂತಿಗಳು ಹರಿದಾಡಿದವು. ಇವೆಲ್ಲವೂ ಟೀಚರಮ್ಮ ಅಭಿಮಾನಿಗಳು, ಮಹಿಳಾವಾದಿಗಳಿ ಅಸಮಾಧಾನಕ್ಕೆ ಕಾರಣವಾಯಿತು. ಹಾಗಿರುವಾಗಲೇ ಟೀಚರಮ್ಮಗೆ ವಿಧಾನಸಭೆ ಚುನಾವಣೆಯ ಟಿಕೆಟ್ ಅನ್ನು ನೀಡಲಾಯಿತು. ಆದರೆ ಇಲ್ಲೂ ಆಟವಿದೆ. ಶೈಲಜಾ ಟೀಚರ್ ಅವರ ಮೂಲ ಮತ್ತು ಸುರಕ್ಷಿತ ಕ್ಷೇತ್ರಗಳನ್ನು ಬಿಟ್ಟು ಪೆರವೂರು ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಾಗುತ್ತಿದೆ. ಪೆರವೂರು ಸಾಮಾನ್ಯವಾಗಿಯೇ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭದ್ರಕೋಟೆ. ಹಾಗಿರುವಾಗ ಇಲ್ಲಿ ಶೈಲಜಾರನ್ನು ಕಣಕ್ಕಿಳಿಸಿ ಸೋಲಿಸುವ ಮತ್ತು ರಾಜ್ಯ ರಾಜಕಾರಣದಿಂದ ದೂರವಿಡುವ ತಂತ್ರ ಎಂಬ ಆಪಾದನೆಗಳು ಸದ್ಯ ಕೇಳಿಬರುತ್ತಿರುವಂತದ್ದು.
ವಿಪಕ್ಷಗಳೂ ಈ ವಿಚಾರವನ್ನೇ ತಮ್ಮ ರಾಜಕೀಯ ಪ್ರಚಾರದ ವಿಷಯವಸ್ತುವನ್ನಾಗಿಸಿದೆ. “ಶೈಲಜಾ ಅವರು ಚುನಾವಣೆಯಲ್ಲಿ ಸೋತರೆ ಪಕ್ಷದಲ್ಲಿ ಮುಂಬಡ್ತಿ ಪಡೆಯುತ್ತಾರೆ. ವಡಕರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಾಗ ಕೇಂದ್ರೀಯ ಸಮಿತಿ ಸದಸ್ಯರಾದರು. ಈಗ ಪೆರವೂರಿನಲ್ಲಿ ಸೋತರೆ ಪಾಲಿಟ್‌ಬ್ಯುರೋ ಸದಸ್ಯರಾಗಬಹುದು. ಪಾಲಿಟ್‌ಬ್ಯುರೋ ಸ್ಥಾನದ ಭರವಸೆ ನೀಡಿದ್ದಕ್ಕೆ ಶೈಲಜಾ ತಾವು ಸೋಲುವ ಪೆರವೂರಿನಿಂದ ಸ್ಪರ್ಧಿಸುತ್ತಿರಬಹುದು” ಎಂದು ಶೈಲಜಾ ಪ್ರತಿಸ್ಪರ್ಧಿ ಯುಡಿಎಫ್‌ನ ಸನ್ನಿ ಜೋಸೆಫ್ ಟೀಕಿಸಿದ್ದಾರೆ.
ಆದರೆ, ಟೀಚರಮ್ಮ, “ನಾನು ಶಾಖಾ ಮಟ್ಟದಿಂದ ಸ್ಥಳೀಯ, ಪ್ರದೇಶ, ಜಿಲ್ಲೆ ಮತ್ತು ರಾಜ್ಯ ಮಟ್ಟಗಳಿಗೆ ಹೋಗಿ ಕೇಂದ್ರ ಸಮಿತಿಯನ್ನು ತಲುಪಿದೆ. ಇದು ನೈಸರ್ಗಿಕ ಪ್ರಕ್ರಿಯೆಯಾಗಿತ್ತು. ನಾನು ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇನೆ ಮತ್ತು ಸೋತಿದ್ದೇನೆ. ಅದು ದೊಡ್ಡ ವಿಷಯವಲ್ಲ” ಎಂದಷ್ಟೇ ಹೇಳಿದ್ದಾರೆ. ಎಲ್ಲಿಯೂ ತಮ್ಮ ಪಕ್ಷದ ಧೋರಣೆಗಳ ವಿರುದ್ಧ ಧ್ವನಿ ಎತ್ತಿದವರಲ್ಲ ಟೀಚರಮ್ಮ. ಈ ವಿಚಾರದಲ್ಲಿ ಎಂದಿಗೂ ಬಹಿರಂಗವಾಗಿ ಮಾತನಾಡಿದವರಲ್ಲ. ಯಾವುದೇ ಮಾಧ್ಯಮ ಪ್ರಶ್ನಿಸಿದರೂ ಶೈಲಜಾ ಅವರ ಉತ್ತರ ಒಂದೇ. ಅದು “ಪಕ್ಷದ ನಿರ್ಧಾರವೇ ಅಂತಿಮ”
ಆದರೆ, ಕೇರಳದ ಜನಸಾಮಾನ್ಯರಲ್ಲಿ ಮತ್ತು ಮಹಿಳಾ ಸಂಘಟನೆಗಳಲ್ಲಿ ‘ಹೆಚ್ಚು ಬೆಳೆಯುತ್ತಿರುವ ಹೆಣ್ಣುಮಕ್ಕಳ ರೆಕ್ಕೆ ಕತ್ತರಿಸುವ ಕೆಲಸ’ ಸಿಪಿಐಎಂನ ಒಳಗೆ ನಡೆಯುತ್ತಿದೆ ಎಂಬ ಬಲವಾದ ನಂಬಿಕೆ ಬೇರೂರಿದೆ. ಅದಕ್ಕೆ ಕಾರಣ ಈವರೆಗೂ ಎಷ್ಟೇ ಪ್ರಬಲರಾದರೂ ಮಹಿಳೆಯರು ಸಿಎಂ ಗದ್ದುಗೆ ಪಡೆಯದಿರುವುದು. ಪಿಣರಾಯಿ ವಿಜಯನ್ ನಂತರದ ಜನಪ್ರಿಯ ನಾಯಕಿ ಶೈಲಜಾ ಟೀಚರ್. ಶೈಲಜಾ ಟೀಚರ್ ಅವರ ಜನಪ್ರಿಯತೆಯು ಸಿಎಂ ಪಿಣರಾಯಿ ವಿಜಯನ್ ಅವರ ವರ್ಚಸ್ಸಿಗೆ ಸವಾಲಾಗಬಹುದು ಎಂಬ ಭೀತಿಯಿದೆ, ಅದರಿಂದಾಗಿ ವ್ಯವಸ್ಥಿತವಾಗಿ ಟೀಚರಮ್ಮ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಆರೋಪ. ಆದರೆ ಈ ಹಿಂದೆಯೂ ಇಂದೂ ಸಿಪಿಐಎಂನ ಉತ್ತರ ಒಂದೇ ‘ಹೊಸಬರಿಗೆ ಅವಕಾಶ’ ನೀಡುವ ಪ್ರಯತ್ನ!




