ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗೆಲುವಿನತ್ತ ಸಾಗುತ್ತಿದೆ. ಈಗ ಕೇರಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಶುರುವಾಗಿದೆ. ಈ ನಡುವೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಕೆ.ಸಿ. ವೇಣುಗೋಪಾಲ್ ಅವರು ಕೇರಳದ ಮುಂದಿನ ಸಿಎಂ ಆಗಬಹುದು ಎಂಬ ಸುಳಿವನ್ನು ಕೇರಳ ಕಾಂಗ್ರೆಸ್ ಮುಖ್ಯಸ್ಥ ಸನ್ನಿ ಜೋಸೆಫ್ ನೀಡಿದ್ದಾರೆ.
ಶಾಸಕರಲ್ಲದ ಒಬ್ಬರು ಮುಖ್ಯಮಂತ್ರಿಯಾಗುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸನ್ನಿ ಜೋಸೆಫ್ ಉತ್ತರಿಸುತ್ತಾ ಅದು ಸಾಧ್ಯವಿದೆ ಎಂದಿದ್ದಾರೆ. “ಏಕೆ ಸಾಧ್ಯವಿಲ್ಲ. ಅಚ್ಯುತ ಮೆನನ್ ಅವರು ಸಿಎಂ ಆದಾಗ ಶಾಸಕರಾಗಿರಲಿಲ್ಲ” ಎಂದು ಸನ್ನಿ ಜೋಸೆಫ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!
ಆದರೆ ಕಾಂಗ್ರೆಸ್ ಕೆ.ಸಿ. ವೇಣುಗೋಪಾಲ್ ಅವರನ್ನು ಸಿಎಂ ಎಂದು ಹೆಸರಿಸುತ್ತದೆಯೇ ಎಂದು ನಿರ್ದಿಷ್ಟವಾಗಿ ಕೇಳಿದಾಗ, “ನಾನು ಈ ಸಂದರ್ಭದಲ್ಲಿ ಹೆಚ್ಚಿಗೆ ಮಾತನಾಡಲು ಬಯಸಲ್ಲ” ಎಂದಿದ್ದಾರೆ.
ಸಿಪಿಐನ ಸಿ ಅಚ್ಯುತ ಮೆನನ್ 1969ರ ನವೆಂಬರ್ 1ರಂದು ಕೇರಳದ ಐದನೇ ಮುಖ್ಯಮಂತ್ರಿಯಾದರು. ಆದರೆ ಅವರು ಶಾಸಕರಾಗಿರಲಿಲ್ಲ. 1964ರಲ್ಲಿ, ಕಮ್ಯುನಿಸ್ಟ್ ಪಕ್ಷವು ಸಿಪಿಐ ಮತ್ತು ಸಿಪಿಐಎಂ ಆಗಿ ವಿಭಜನೆಯಾಯಿತು. ಮುಂದಿನ ಚುನಾವಣೆಯಲ್ಲಿ, ಎರಡೂ ಪಕ್ಷಗಳು ಏಳು ಪಕ್ಷಗಳ ಮೈತ್ರಿಕೂಟದಲ್ಲಿ ಒಟ್ಟಾಗಿ ಹೋರಾಡಿದವು. ಕಾಂಗ್ರೆಸ್ ವಿರುದ್ಧ ಗೆಲುವು ಕಂಡಿತು.
ಸಿಪಿಐ (ಎಂ) ನ ಇಎಂಎಸ್ ನಂಬೂದಿರಿಪಾಡ್ ಮುಖ್ಯಮಂತ್ರಿಯಾದರು. ಆದರೆ ಎರಡು ವರ್ಷಗಳಲ್ಲಿ, ಸಚಿವ ಸಂಪುಟ ಕುಸಿಯಿತು. ಎರಡು ಕಮ್ಯುನಿಸ್ಟ್ ಪಕ್ಷಗಳ ನಡುವಿನ ವ್ಯತ್ಯಾಸಗಳೇ ಇದಕ್ಕೆ ಕಾರಣ. ಈ ವೇಳೆ ರಾಜ್ಯಸಭಾ ಸದಸ್ಯರಾದ ಸಿಪಿಐನ ಅಚ್ಯುತ ಮೆನನ್ ನೇತೃತ್ವದ ಸರ್ಕಾರವು ಕೆಲವು ತಿಂಗಳುಗಳ ಕಾಲ ಅಧಿಕಾರಕ್ಕೆ ಬಂದಿತ್ತು. ಅಚ್ಯುತ ಮೆನನ್ 1969 ಲ್ಲಿ ಶಾಸಕರಾಗಿರಲಿಲ್ಲ (ಶಾಸಕ) ಮತ್ತು ಕೆಲವೇ ತಿಂಗಳುಗಳಲ್ಲಿ ಕೊಟ್ಟಾರಕ್ಕರದಿಂದ ಉಪಚುನಾವಣೆಯಲ್ಲಿ ಗೆದ್ದರು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಯುಡಿಎಫ್‌ಗೆ ಬೆಂಬಲ ನೀಡಿದ 65ಕ್ಕೂ ಅಧಿಕ ದಲಿತ, ಆದಿವಾಸಿ ಸಮುದಾಯ ಒಳಗೊಂಡ ಸಂಘಟನೆ
ರಾಹುಲ್ ಗಾಂಧಿಯ ವಿಶ್ವಾಸಾರ್ಹ ವ್ಯಕ್ತಿ ವೇಣುಗೋಪಾಲ್
ವೇಣುಗೋಪಾಲ್ ಮೊದಲು ಉಮ್ಮನ್ ಚಾಂಡಿ (2004-06) ಅವರ ಅಡಿಯಲ್ಲಿ ಸಚಿವರಾಗಿದ್ದವರು. ಲೋಕಸಭೆಯಲ್ಲಿ (2009-14) ತಮ್ಮ ಮೊದಲ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ರಾಹುಲ್ ಗಾಂಧಿಯವರ ವಿಶ್ವಾಸವನ್ನು ಗಳಿಸುವ ವೇಣುಗೋಪಾಲ್ ಅವರ ಸಾಮರ್ಥ್ಯವೇ ಅವರನ್ನು ರಾತ್ರೋರಾತ್ರಿ ಕೇರಳದಲ್ಲಿ ಪಕ್ಷದ ‘ಹೈಕಮಾಂಡ್’ ಆಗುವಂತೆ ಮಾಡಿತು.
ಏನೇ ಆದರೂ ಪ್ರತಿ ಭಾನುವಾರ ತಮ್ಮ ಕ್ಷೇತ್ರವಾದ ಆಲಪ್ಪುಳಕ್ಕೆ ಮೀಸಲಿಡುತ್ತಾ ಬಂದಿದ್ದಾರೆ. ಇತ್ತೀಚೆಗೆ, ಕೇರಳದಲ್ಲೇ ಹೆಚ್ಚುವರಿ ಸಮಯವನ್ನು ಕಳೆಯುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕೆಲಸಕ್ಕೆ ಇಳಿದಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ಧತೆ ನಡೆಸಲೆಂದೇ ಈ ತಯಾರಿ ಎಂಬ ಮಾತುಗಳೂ ಇವೆ. ಕಳೆದ ಐದು ವರ್ಷಗಳಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಬಣಗಳ ಸಂಬಂಧ ಬಿಗಡಾಯಿಸಿದ್ದಾಗ ವೇಣುಗೋಪಾಲ್, ಚೆನ್ನಿತ್ತಲ ಅವರ ನಿಷ್ಠಾವಂತರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.




