ರೈತರಿಗೆ ಕಾನೂನು ಖಾತರಿಗೊಳಿಸುವ ಎಂಎಸ್‌ಪಿ ಜಾರಿಯಿಂದ ಬಜೆಟ್‌ನಲ್ಲಿ ಕೊರತೆ ಉಂಟಾಗುವ ಬದಲು ಜಿಡಿಪಿ ಬೆಳವಣಿಗೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಎಂಎಸ್‌ಪಿ ಖಾತರಿ ಯೋಜನೆಯಿಂದ ಸರ್ಕಾರದ ಬಜೆಟ್‌ನಲ್ಲಿ ಕೊರತೆಯುಂಟಾಗುತ್ತದೆ ಎಂಬುದು ಸುಳ್ಳಾಗಿದೆ. ಕಾಂಗ್ರೆಸ್ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ನೀಡುವುದಾಗಿ ಭರವಸೆ ನೀಡಿದ ನಂತರ ಮೋದಿಯವರ ಪ್ರಚಾರ ಯಂತ್ರ ಹಾಗೂ ಅವರ ಮಾಧ್ಯಮ ಸ್ನೇಹಿತರು ಎಂಎಸ್‌ಪಿ ಬಗ್ಗೆ ಸುಳ್ಳಿನ ಸರಮಾಲೆಯನ್ನು ಹರಿದುಬಿಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಎಂಎಸ್‌ಪಿಗೆ ಕಾನೂನು ಖಾತರಿ ಒದಗಿಸಿದರೆ ಕೊರತೆಯುಂಟಾಗುತ್ತದೆ ಎನ್ನುವುದು ಸುಳ್ಳು. ನಿಜ ಏನೆಂದರೆ ಸಿಆರ್‌ಐಎಸ್‌ಐಎಲ್ ವರದಿಯ ಪ್ರಕಾರ 2022-23ಯಲ್ಲಿ ರೈತರಿಗೆ ಎಂಎಸ್‌ಪಿ ನೀಡಿದ್ದರೆ ಸರ್ಕಾರದಲ್ಲಿ ಹೆಚ್ಚುವರಿಯಾಗಿ 21 ಸಾವಿರ ಕೋಟಿ ರೂ,ಗಳು ಮಾತ್ರ ಖರ್ಚಾಗಿ ಒಟ್ಟು ಆದಾಯದ 0.4 ರಷ್ಟು ಮಾತ್ರ ಆಗುತ್ತಿತ್ತು” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭಾರತದಲ್ಲಿ ಸಾಲ ಮನ್ನಕ್ಕಾಗಿ ಬ್ಯಾಂಕುಗಳು 14 ಲಕ್ಷ ಕೋಟಿ ರೂ. ಸಾಲ ಮನ್ನಾ ಹಾಗೂ ಕಾರ್ಪೋರೇಟ್ ತೆರಿಗೆ ವಿನಾಯಿತಿಗಾಗಿ 1.8 ಲಕ್ಷ ಕೋಟಿ ರೂ. ಸಾಲ ಮನ್ನ ಮಾಡಿವೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸ್ವಲ್ಪ ಹಣವನ್ನಾದರೂ ಖರ್ಚು ಮಾಡಲು ಬೇಸರ ವ್ಯಕ್ತಪಡಿಸುತ್ತಿರುವುದು ಏಕೆ ಎಂದು ರಾಹುಲ್ ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ
ಎಂಎಸ್‌ಪಿ ಕಾನೂನು ಖಾತರಿಯಿಂದ ಕೃಷಿಯಲ್ಲಿನ ರೈತರ ಹೂಡಿಕೆ ಹೆಚ್ಚುತ್ತದೆ. ಗ್ರಾಮೀಣ ಭಾರತದಲ್ಲಿ ಬೇಡಿಕೆ ಹೆಚ್ಚಾಗಿ ರೈತರು ವಿವಿಧ ರೀತಿಯ ಬೆಳೆಯನ್ನು ಬೆಳೆಯಲು ಆತ್ಮವಿಶ್ವಾಸ ಹೊಂದುತ್ತಾರೆ. ಇದು ದೇಶದ ಸಮೃದ್ಧಿಯ ಖಾತರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
“ಎಂಎಸ್‌ಪಿಯ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವವರು ಡಾ. ಸ್ವಾಮಿನಾಥನ್ ಹಾಗೂ ಅವರ ಕನಸುಗಳಿಗೆ ಅವಮಾನ ಮಾಡುತ್ತಿದ್ದಾರೆ. ಎಂಎಸ್‌ಪಿ ಜಾರಿ ಭಾರತೀಯ ಬಜೆಟ್‌ನಲ್ಲಿ ಕೊರತೆಯುಂಟಾಗದೆ ಜಿಡಿಪಿ ಹೆಚ್ಚಾಗುತ್ತದೆ” ಎಂದು ರಾಹುಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ ನೀಡಿರುವ ಎಂಎಸ್‌ಪಿ ಖಾತರಿ ಪ್ರಸ್ತಾಪವನ್ನು ರೈತ ಸಂಘಟನೆಗಳ ನಾಯಕರು ತಿರಸ್ಕರಿಸಿದ್ದು, ಫೆ.21ರಿಂದ ದೆಹಲಿ ಚಲೋ ಪುನಃ ಆರಂಭಿಸುವುದಾಗಿ ತಿಳಿಸಿದ್ದಾರೆ.