ಬಿಹಾರದಲ್ಲಿ ನಡೆದ ‘ಜೀವಿತ್‌ಪುತ್ರಿಕ’ ಹಬ್ಬದಂದು ಪ್ರತ್ಯೇಕ ಘಟನೆಗಳಲ್ಲಿ ‘ಪವಿತ್ರ ಸ್ನಾನ’ ಮಾಡಲು ನದಿಗಳು ಮತ್ತು ಕೊಳಗಳಿಗೆ ಇಳಿದಿದ್ದ 43 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರಲ್ಲಿ, 37 ಮಂದಿ ಅಪ್ತಾಪ್ತ ವಯಸ್ಸಿನ ಮಕ್ಕಳು ಎಂದು ಬಿಹಾರ ಸರ್ಕಾರ ಗುರುವಾರ ಹೇಳಿದೆ.
ಬುಧವಾರ, ರಾಜ್ಯಾದ್ಯಂತ ಜೀವಿತ್‌ಪುತ್ರಿಕ ಹಬ್ಬದ ಆಚರಣೆ ನಡೆದಿದೆ. ಈ ವೇಳೆ, ರಾಜ್ಯದ 15 ಜಿಲ್ಲೆಗಳಲ್ಲಿ ಒಟ್ಟು 43 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ವರದಿ ಹೇಳಿದೆ.
‘ಜೀವಿತ್‌ಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಒಳಿತಾಗಲೆಂದು ಉಪವಾಸ ವ್ರತ ಮಾಡುತ್ತಾರೆ. ಬಳಿಕ, ನದಿ, ಕೊಳಗಳಿಗೆ ಇಳಿದು ‘ಸ್ಥಾನ’ ಮಾಡುತ್ತಾರೆ.
ಬಿಹಾರದಲ್ಲಿ ಕಳೆದ ಅಕ್ಟೋಬರ್‌ನಲ್ಲಿಯೂ ಇದೇ ಹಬ್ಬ ನಡೆದಿತ್ತು. ಆಗಲೂ, ಪ್ರತ್ಯೇಕ ಘಟನೆಗಳಲ್ಲಿ 15 ಮಕ್ಕಳು ಸೇರಿದಂತೆ 22 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಬುಧವಾರ ನಡೆದ ದುರಂತ ಘಟನೆ ಬಳಿಕ, ಬಿಹಾರ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ.