ಭಾರೀ ಭದ್ರತಾ ಲೋಪದೊಂದಿಗೆ ಬುಧವಾರ ಲೋಕಸಭೆ ಗ್ಯಾಲರಿಯಿಂದ ಕಲಾಪ ನಡೆಯುವ ಸದನಕ್ಕೆ ಜಿಗಿದು ಆತಂಕ ಸೃಷ್ಟಿಸಿದ್ದ ಇಬ್ಬರಲ್ಲಿ ಮೈಸೂರಿನ ಮನೋರಂಜನ್ ಎಂಬಾತ ಕಳೆದ ಮೂರು ತಿಂಗಳಿಂದ ಪಾಸ್‌ಗಾಗಿ ದುಂಬಾಲು ಬೀಳುತ್ತಿದ್ದ ಎನ್ನಲಾಗಿದೆ.
ಮೂಲಗಳ ಪ್ರಕಾರ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಲೋಕಸಭೆಯ ಗ್ಯಾಲರಿಯಲ್ಲಿ ಸದನ ವೀಕ್ಷಿಸಲು ಮೂವರಿಗೆ ಪಾಸ್ ನೀಡಲಾಗಿತ್ತು. ಒಬ್ಬಾತ ಮೈಸೂರಿನ ಡಿ ಮನೋರಂಜನ್, ಮತ್ತೊಬ್ಬ ಮನೋರಂಜನ್ ಸ್ನೇಹಿತ ಉತ್ತರ ಪ್ರದೇಶದ ಸಾಗರ್ ಶರ್ಮಾ.
ಮನೋರಂಜನ್ ನೂತನ ಸಂಸತ್ ವೀಕ್ಷಿಸುವ ಸಲುವಾಗಿ ಕಳೆದ ಮೂರು ತಿಂಗಳಿಂದ ಸಂಸದರ ಕಚೇರಿಯಲ್ಲಿ ಸಿಬ್ಬಂದಿಯ ದುಂಬಾಲು ಬಿದ್ದಿದ್ದ. ಅಲ್ಲದೆ ಸಾಗರ್ ಶರ್ಮಾನನ್ನು ತನ್ನ ಸ್ನೇಹಿತ ಎಂದು ಕೂಡ ಪರಿಚಯಿಸಿದ್ದ.
ಪಾಸ್‌ಗಳನ್ನು ನೀಡುವ ಸಂದರ್ಭದಲ್ಲಿ ಇವರಿಬ್ಬರು ಸೇರಿದಂತೆ ಒಬ್ಬ ಮಹಿಳೆಯೊಬ್ಬರಿಗೂ ಅಧಿಕೃತ ಪಾಸ್ ನೀಡಲಾಗಿತ್ತು. ಪಾಸ್ ಪಡೆದ ಮಹಿಳೆಯು ತನ್ನ ಮಗುವಿನೊಂದಿಗೆ ಬಂದಿದ್ದರು. ಆದರೆ ಪಾಸ್‌ನಲ್ಲಿ ಮಗುವಿನ ಹೆಸರನ್ನು ನಮೂದಿಸದ ಕಾರಣ ಭದ್ರತಾ ಸಿಬ್ಬಂದಿ ಮಹಿಳೆಯನ್ನು ವಾಪಸ್ ಕಳುಹಿಸಿದ್ದರು. ಮುಖ್ಯ ಸಂಗತಿಯಂದರೆ ಇಬ್ಬರು ಆರೋಪಿಗಳೊಂದಿಗೆ ಮಹಿಳೆಗೆ ಯಾವುದೇ ಸಂಬಂಧವಿರಲಿಲ್ಲ.
ಭದ್ರತಾ ಲೋಪವಾದರೂ ಸಂಸದ ಪ್ರತಾಪ್ ಸಿಂಹ ಕಚೇರಿ ಸಿಬ್ಬಂದಿ ಸಂಸದರನ್ನು ಸಮರ್ಥಿಸಿಕೊಂಡಿದೆ. ಸಂಸದರು ಸಾಮಾನ್ಯವಾಗಿ ತಮ್ಮ ಕ್ಷೇತ್ರದಿಂದ ಬರುವ ಇಂತಹ ವಿನಂತಿಗಳನ್ನು ಪ್ರೋತ್ಸಾಹ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 2016ರಲ್ಲೂ ನೋಟು ಅಮಾನ್ಯೀಕರಣ ವಿರುದ್ಧ ಪ್ರತಿಭಟಿಸಲು ಲೋಕಸಭೆಗೆ ಜಿಗಿದಿದ್ದ ಅಪರಿಚಿತ !
ಭಾರೀ ಭದ್ರತಾ ಲೋಪವಾದ ನಂತರ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂದರ್ಶಕರ ಪಾಸ್‌ಅನ್ನು ರದ್ದುಗೊಳಿಸಿದ್ದಾರೆ. 2001ರ ಸಂಸತ್ ದಾಳಿಯ 22 ನೇ ವಾರ್ಷಿಕೋತ್ಸವದಂದು ಈ ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ವಿವರವಾದ ವರದಿಯನ್ನು ಲೋಕಸಭೆ ಸ್ಪೀಕರ್ ಕೇಳಿದ್ದಾರೆ. 2001 ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದು ಭಯ ಹರಡುವ ಹಳದಿ ಅನಿಲವನ್ನು ಸಿಂಪಡಿಸುತ್ತಾ ಸದನದೊಳಗೆ ಓಡಾಡಿದ್ದರು.
ನಂತರ ಸದನದಲ್ಲಿದ್ದ ಕೆಲ ಸಂಸದರು ಇಬ್ಬರು ಯುವಕರನ್ನು ಹಿಡಿದು ಥಳಿಸಿದ ನಂತರ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು.
ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಘಟನೆಯ ಬಗ್ಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ,” ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯವಾದುದು ಮಾತ್ರವಲ್ಲ, ಅತ್ಯಂತ ಆಘಾತಕಾರಿಯಾದುದು. ಸಂಸದರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನುವುದು ಸಮಾಧಾನದ ಸಂಗತಿ. ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರ, ಬಹಳ ಪ್ರಮುಖವಾಗಿ ದೇಶದ ಗೃಹ ಸಚಿವರ ಕರ್ತವ್ಯವಾಗಿದೆ” ಎಂದು ಒತ್ತಾಯಿಸಿದ್ದಾರೆ.