ಲಾರ್ಸೆನ್ & ಟೂಬ್ರೊ (ಎಲ್&ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಹಿಂದೆ “ಉದ್ಯೋಗಿಗಳು ವಾರದಲ್ಲಿ 90 ಗಂಟೆಗಳ ಕಾಲ ಕೆಲಸ ಮಾಡಬೇಕು, ಎಷ್ಟು ಹೊತ್ತು ಪತಿ, ಪತ್ನಿ ಮುಖವನ್ನು ನೋಡಿಕೊಂಡು ಕುಳಿತಿರುತ್ತೀರಿ” ಎಂದು ಹೇಳುವ ಮೂಲಕ ಸುಬ್ರಹ್ಮಣ್ಯನ್ ವಿವಾದದಲ್ಲಿ ಸಿಲುಕಿದ್ದರು.
“ದೇಶದಲ್ಲಿ ಕಾರ್ಮಿಕರು ಕೆಲಸ ಮಾಡಲು ಇಚ್ಛಿಸುತ್ತಿಲ್ಲ. ಕಲ್ಯಾಣ ಯೋಜನೆಗಳಿಂದಾಗಿ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಗೊಳ್ಳಲು ಹಿಂಜರಿಯುತ್ತಿದ್ದಾರೆ” ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ವಾರಕ್ಕೆ 90 ಗಂಟೆ ಕೆಲಸ ಅವೈಜ್ಞಾನಿಕ ಹಾಗೂ ಅಮಾನವೀಯ; ಸೈಯ್ಯದ್ ಮುಜೀಬ್
ಮಂಗಳವಾರ ಚೆನ್ನೈನಲ್ಲಿ ನಡೆದ ಸಿಐಐನ ಮಿಸ್ಟಿಕ್ ಸೌತ್ ಗ್ಲೋಬಲ್ ಲಿಂಕೇಜಸ್ ಶೃಂಗಸಭೆ 2025ರಲ್ಲಿ ಮಾತನಾಡಿದ ಸುಬ್ರಹ್ಮಣ್ಯನ್, “ಕಾರ್ಮಿಕರಿಗೆ ತಮ್ಮ ಊರಿನಲ್ಲಿ ಸೌಕರ್ಯಗಳು ಇರುವ ಕಾರಣದಿಂದಾಗಿ ಮತ್ತೊಂದು ಕಡೆ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ನಿರ್ಮಾಣ ಉದ್ಯಮದಲ್ಲಿ ಕಾರ್ಮಿಕರನ್ನು ಪಡೆಯುವುದು ಕಷ್ಟವಾಗಿದೆ. ನರೇಗಾ (ಎಂಜಿಎನ್‌ಆರ್‌ಇಜಿಎ), ನೇರ ಹಣ ವರ್ಗಾವಣೆ ಮತ್ತು ಜನಧನ್ ಖಾತೆಗಳಂತಹ ಯೋಜನೆಗಳಿಂದಾಗಿ ಕಾರ್ಮಿಕರನ್ನು ಪಡೆಯುವುದು ಈಗ ಕಷ್ಟವಾಗಿದೆ” ಎಂದು ಹೇಳಿರುವುದಾಗಿ ಎನ್‌ಡಿ ಟಿವಿ ವರದಿ ಮಾಡಿದೆ.
“ಕಾರ್ಮಿಕರು ಈಗ ಉದ್ಯೋಗವಕಾಶ ಇದ್ದಾಗಲೂ ಸ್ಥಳಾಂತರಗೊಂಡು ಕೆಲಸ ಮಾಡಲು ಇಚ್ಛಿಸಲ್ಲ. ಬಹುಶಃ ಅವರ ಸ್ಥಳೀಯ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಅದಕ್ಕೆ ಕಾರಣವಾಗಿರಬಹುದು. ಬಹುಶಃ ವಿವಿಧ ಸರ್ಕಾರಿ ಯೋಜನೆಗಳು ಇದಕ್ಕೆ ಕಾರಣವಾಗಿರಬಹುದು. ಇವೆಲ್ಲವುದರಿಂದಾಗಿ ದೇಶದ ಮೂಲಸೌಕರ್ಯ ನಿರ್ಮಾಣದ ಮೇಲೆ ಕಾರ್ಮಿಕರ ಕೊರತೆಯ ಪರಿಣಾಮ ಬೀರುತ್ತಿದೆ” ಎಂದರು.
“ಹಣದುಬ್ಬರದ ಕಾರಣದಿಂದಾಗಿ ಕಾರ್ಮಿಕರ ವೇತನವನ್ನು ಕೂಡಾ ಪರಿಷ್ಕರಿಸುವ ಅಗತ್ಯವಿದೆ. ದೇಶದಲ್ಲಿ ಕಾರ್ಮಿಕರು ಪಡೆಯುವ ವೇತನಕ್ಕಿಂತ 3.5 ಪಟ್ಟು ಹೆಚ್ಚು ವೇತನ ನೀಡುವ ಮೂಲಕ ಮಧ್ಯಪ್ರಾಚ್ಯವು ಭಾರತದ ಕಾರ್ಮಿಕರನ್ನು ಆಕರ್ಷಿಸುತ್ತಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು
ಈ ಹಿಂದೆ ಎಸ್.ಎನ್. ಸುಬ್ರಹ್ಮಣ್ಯನ್ ಅವರು, “ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಪತ್ನಿಯನ್ನು ಎಷ್ಟು ಹೊತ್ತು ನೋಡಬಹುದು? ಬನ್ನಿ, ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ. ನಾನು ಭಾನುವಾರವೂ ಕೂಡಾ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದರು.
ಈ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈಗಾಗಲೇ ಜನರು ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಲವು ಮಂದಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಿರುವಾಗ ಇನ್ನೂ ಅಧಿಕ ಅವಧಿ ಕೆಲಸ ಮಾಡಿ ಮಾನಸಿಕ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ ಎಂದು ನೆಟ್ಟಿಗರು ಹೇಳಿದ್ದರು.
