ಮಧ್ಯ ಪ್ರದೇಶದ 230 ಕ್ಷೇತ್ರಗಳಿಗೆ ನಡೆದ ಏಕ ಹಂತ ಹಾಗೂ ಛತ್ತೀಸ್‌ಗಢದ 70 ಸ್ಥಾನಗಳಿಗೆ ನಡೆದ ಕೊನೆಯ ಹಂತದ ಮತದಾನ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ವರದಿ ಪ್ರಕಾರ ಸಂಜೆ 6 ಗಂಟೆ ವೇಳೆಗೆ ಮಧ್ಯ ಪ್ರದೇಶದಲ್ಲಿ ಶೇ. 71.16, ಛತ್ತೀಸ್‌ಗಢದಲ್ಲಿ ಶೇ. 68.15 ರಷ್ಟು ಮತದಾನವಾಗಿದೆ.
ಎರಡೂ ರಾಜ್ಯದ ಸಂಪೂರ್ಣ ಶೇಕಡವಾರು ಮತದಾನ ಏರಿಕೆಯಾಗುವ ಸಾಧ್ಯತೆಯಿದೆ. ಮತದಾನದ ಅವಧಿ ಮುಗಿಯುವವರೆಗೆ ಮತಗಟ್ಟೆಗಳನ್ನು ತಲುಪುವ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಮತದಾನಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯ ನಂತರ ಅಂತಿಮ ಅಂಕಿಅಂಶಗಳನ್ನು ಶನಿವಾರದೊಳಗೆ ತಿಳಿಯಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಛತ್ತೀಸ್‌ಗಢದ ಬಿಂದ್ರನವಗಢ ಪ್ರದೇಶದಲ್ಲಿ ಶುಕ್ರವಾರ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಒಬ್ಬ ಯೋಧ ಹುತಾತ್ಮರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಖಾಸಗಿ ವಲಯದಲ್ಲಿ ಶೇ.75 ಮೀಸಲಾತಿ ಅಸಂವಿಧಾನಿಕ ಎಂದ ಹರಿಯಾಣ ಹೈಕೋರ್ಟ್
ಬಡೆ ಗೋಬ್ರಾ ಮತಗಟ್ಟೆಯಿಂದ ವಾಪಸಾಗುತ್ತಿದ್ದಾಗ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಿದ್ದಾರೆ. ಐಟಿಬಿಪಿ ಹೆಡ್ ಕಾನ್‌ಸ್ಟೆಬಲ್ ಜೋಗಿಂದರ್ ಸಿಂಗ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಮತಗಟ್ಟೆ ಮತ್ತು ಇವಿಎಂ ಯಂತ್ರವು ಗರಿಯಾಬಂದ್‌ಗೆ ಸುರಕ್ಷಿತವಾಗಿ ತಲುಪಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
230 ವಿಧಾನಸಭೆ ಸ್ಥಾನಗಳಲ್ಲಿ ಮತದಾನ ಮಾಡಲು ಚುನಾವಣಾ ಆಯೋಗ 64,626 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 17,032 ಸೂಕ್ಷ್ಮ ಮತಗಟ್ಟೆಗಳಿವೆ. ರಾಜ್ಯದ ಒಟ್ಟು 230 ವಿಧಾನಸಭಾ ಸ್ಥಾನಗಳಿಗೆ 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಛತ್ತೀಸ್‌ಗಢದ ಎರಡನೇ ಹಂತದ ಚುನಾವಣೆಯಲ್ಲಿ 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 7 ರಂದು ನಡೆದ ಮೊದಲ ಹಂತದಲ್ಲಿ ರಾಜ್ಯದ 20 ಸ್ಥಾನಗಳಿಗೆ ಮತದಾನವಾಗಿ ಶೇ. 78 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.