ವಿಧಾನಸಭೆ ವಿಪಕ್ಷ ನಾಯಕರಾಗಿ ಶಾಸಕರಾಗಿ ಬೆಂಗಳೂರಿನ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್. ಅಶೋಕ್ ಆಯ್ಕೆ ಮಾಡಲಾಗಿದೆ.
ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಐಟಿಸಿ ಹೊಟೇಲ್‌ನಲ್ಲಿ ಬಿಜೆಪಿ ಶಾಸಕಾಂಗ ಸಭೆಯನ್ನು ಆಯೋಜಿಸಲಾಗಿತ್ತು.
ಶಾಸಕರನ್ನು ಉದ್ದೇಶಿಸಿ ಭಾಷಣದ ವೇಳೆ ವಿಪಕ್ಷ ನಾಯಕರ ವಿಚಾರವಾಗಿ ಹೈಕಮಾಂಡ್ ಸೂಚನೆಯನ್ನು ಸೂಚ್ಯವಾಗಿ ದುಶ್ಯಂತ್ ಕುಮಾರ್ ಗೌತಮ್ ಮತ್ತು ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿಸಿದರು. ಅಶೋಕ್ ಹೆಸರು ಘೋಷಣೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರೆ, ಮಾಜಿ ಸಚಿವ ಸುನೀಲ್ ಕುಮಾರ್ ಅನುಮೋದನೆ ಮಾಡಿದರು.
ಸಭೆಯಲ್ಲಿ ಬಹುತೇಕ ಶಾಸಕರು ಭಾಗಿಯಾಗಿದ್ದರು,. ಆದರೆ, ಬಿಜೆಪಿ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಬಿಜೆಪಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಹಾಗೂ ರಮೇಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ತೆರಳಿ ಸಭೆಯನ್ನು ತಿರಸ್ಕರಿಸಿದ್ದಾರೆ.
ಇದೇ ವೇಳೆ ಕಳೆದ ಕೆಲದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಶಾಸಕ ಎಸ್‌ಟಿ ಸೋಮಶೇಖರ್ ಸಭೆಗೆ ಗೈರಾಗಿ, ದೆಹಲಿಗೆ ತೆರಳಿದ್ದಾರೆಂದು ವರದಿಯಾಗಿದೆ.