- ಜಮ್ಮು ಮತ್ತು ಕಾಶ್ಮೀರ ರಾಜ್ಯದ ದೋಡಾದಲ್ಲಿ ನಡುಗಿದ ಭೂಮಿ
- ಹಿಮಾಚಲ ಪ್ರದೇಶ, ಚಂಡೀಗಢ, ಪಂಜಾಬ್‌ನಲ್ಲಿ ಕಂಪನ ಅನುಭವ
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮಂಗಳವಾರ (ಜೂನ್ 13) 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ವರದಿಯಾಗಿದೆ.
ಕಂಪನದ ಕೇಂದ್ರ ಬಿಂದು ಜಮ್ಮು-ಕಾಶ್ಮೀರದ ದೋಡಾದಲ್ಲಿ ಪತ್ತೆಯಾಗಿದೆ. ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
“ಮಧ್ಯಾಹ್ನ 1.33ರ ಸುಮಾರಿಗೆ ಭೂಮಿಯು ನಡುಗಿದ ಅನುಭವವಾಗಿದ್ದು ಜಮ್ಮು ಮತ್ತು ಕಾಶ್ಮೀರದ ರಾಜ್ಯದ ದೋಡಾ ಜಿಲ್ಲೆಯ ಗಂಡೋ ಭಲೆಸ್ಸಾ ಗ್ರಾಮದಲ್ಲಿ ಅದರ ಬಿಂದು ಕಂಡು ಬಂದಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಮಿ ಕಂಪನದಿಂದ ಶಾಲೆಗಳಲ್ಲಿ ಮಕ್ಕಳನ್ನು ಭಯಭೀತರನ್ನಾಗಿಸಿತು. ಅಂಗಡಿ, ಮನೆಗಳಲ್ಲಿ ಇದ್ದವರು ಹೊರಗೆ ಓಡಿ ಬಂದರು ಎಂದು ಮಾಧ್ಯಮಗಳು ವರದಿ ಮಾಡಿವೆ.
“ಮಧ್ಯಾಹ್ನ ಭೂಮಿ ನಡುಕದ ಅನುಭವವಾಯಿತು. ಕೂಡಲೇ ನಾವು ಮನೆಯಿಂದ ಓಡಿ ಬಂದೆವು” ಎಂದು ಶ್ರೀನಗರದ ಸ್ಥಳೀಯ ನಿವಾಸಿ ಬಶೀರ್ ಹೇಳಿದ್ದಾರೆ.
“ಹಿಮಾಚಲ ಪ್ರದೇಶ, ಚಂಡೀಗಢ, ಪಂಜಾಬ್ ಮತ್ತು ಹತ್ತಿರದ ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದೆ. ಇದು ಲಘು ಪ್ರಮಾಣದ ಕಂಪನವಾಗಿದೆ” ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ಒ.ಪಿ. ಮಿಶ್ರಾ ಹೇಳಿದರು.
ಭೂಕಂಪ ಕೇಂದ್ರವು ಈ ಬಗ್ಗೆ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬೆಲೆ ಹೆಚ್ಚಳ: ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ
ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಆಗ್ನೇಯಕ್ಕೆ 30 ಕಿ.ಮೀ ದೂರದ ಕಿಶ್ತ್ವಾರ ಬಳಿ ಭೂಕಂಪ ಉಂಟಾಗಿದೆ ಎಂದು ಐರೋಪ್ಯ ಮೆಡಿಟರೇನಿಯನ್ ಭೂಕಂಪ ಕೇಂದ್ರ ತಿಳಿಸಿದೆ.
ಭೂಕಂಪವು 60 ಕಿ.ಮೀ (37.28 ಮೈಲು) ಆಳದಲ್ಲಿತ್ತು. ಇದರ ಕೇಂದ್ರಬಿಂದು ಪಠಾಣ್ಕೊಟ್‌ನಿಂದ ಉತ್ತರಕ್ಕೆ 99 ಕಿ.ಮೀ ದೂರದಲ್ಲಿತ್ತು ಎಂದು ಕೇಂದ್ರ ಹೇಳಿದೆ.