ಮಹಾರಾಷ್ಟ್ರ ಭಾರತದ ರಾಜಕೀಯ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಲೋಕಸಭೆಯಲ್ಲಿ ಎರಡನೇ ಅತೀ ಹೆಚ್ಚು ಸದಸ್ಯರಿರುವ ರಾಜ್ಯವಾದರೆ, ವಿಧಾನಸಭೆಯಲ್ಲಿ ದೇಶದಲ್ಲಿಯೇ ಮೂರನೇ ಅತಿ ಹೆಚ್ಚು ಸದಸ್ಯರಿದ್ದಾರೆ. ಭೂಪ್ರದೇಶದಲ್ಲಿ ಪಶ್ಚಿಮ ಹಾಗೂ ಮಧ್ಯ ಭಾರತದಲ್ಲಿ ಪಾಲು ಹೊಂದಿರುವ ರಾಜ್ಯವಾಗಿದೆ. ಮುಂದಿನ ಮೂರು ತಿಂಗಳೊಳಗೆ ವಿಧಾನಸಭೆ ಚುನಾವಣೆ ನಡೆದು ನೂತನ ಸರ್ಕಾರ ಕೂಡ ರಚನೆಯಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಬೆಂಬಲದೊಂದಿಗೆ ಮಹಾ ವಿಕಾಸ್ ಅಘಾಡಿ ಮೈತ್ರಿ ರಚಿಸಿಕೊಂಡು ಸರ್ಕಾರ ರಚಿಸಿದ್ದ ಶಿವಸೇನೆ ಎರಡೂವರೆ ವರ್ಷಗಳಲ್ಲಿಯೇ ಹಲವು ರಾಜಕೀಯ ಬದಲಾವಣೆಗಳಿಂದಾಗಿ ಉದ್ಧವ್ ಠಾಕ್ರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸದ್ಯ ಶಿವಸೇನೆಯಲ್ಲಿ ಏಕನಾಥ್ ಶಿಂದೆ ಬಣ ಹಾಗೂ ಎನ್‌ಸಿಪಿಯಲ್ಲಿ ಅಜಿತ್ ಪವಾರ್ ಬಣ ಶಾಸಕರು ಎರಡು ವರ್ಷದ ಹಿಂದೆ ಹೊರಬಂದು ಬಿಜೆಪಿಯೊಂದಿಗೆ ಬೆಂಬಲ ನೀಡಿ ಸರ್ಕಾರ ರಚಿಸಿದ್ದಾರೆ.
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ರಾಜ್ಯದ ರಾಜಕೀಯ ಹಲವು ಏರಿಳಿತಗಳನ್ನು ಕಂಡಿದೆ. ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿಯು ತಲಾ ಮೂರು ಪ್ರಮುಖ ಪಕ್ಷಗಳನ್ನು ಹೊಂದಿದ್ದು, ಉಭಯ ಪಕ್ಷಗಳ ಜೊತೆಗೆ ತಲಾ 4 ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿವೆ. ಎರಡೂ ಬಣಗಳೊಂದಿಗೆ ಗುರುತಿಸಿಕೊಳ್ಳದೆ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ ಹಾಗೂ ಪ್ರಕಾಶ್ ಅಂಬೇಡ್ಕರ್ ಅವರ ವಚನ್ ಬಹುಜನ್ ಅಘಾಡಿ ಸೇರಿ 6 ಪಕ್ಷಗಳಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಖಾಲಿ ಇಲ್ಲದ ಸಿಎಂ ಸ್ಥಾನ ಮತ್ತು ವ್ಯರ್ಥ ಕಾಲಹರಣ
ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಭಾರತೀಯ ಜನತಾ ಪಕ್ಷ ಮತ್ತು ಮತ್ತೊಬ್ಬ ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮೈತ್ರಿಯ ಮಹಾಯುತಿ ಹಿನ್ನಡೆ ಅನುಭವಿಸಿದವು. ಒಟ್ಟು 48 ಲೋಕಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ 17 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತು ಎನ್‌ಸಿಪಿ (ಶರದ್ ಪವಾರ್) ಒಳಗೊಂಡ ಮಹಾ ವಿಕಾಸ್ ಅಘಾಡಿ ರಾಜ್ಯದಿಂದ 31 ಲೋಕಸಭಾ ಸ್ಥಾನಗಳನ್ನು ಗೆದ್ದು ಮುನ್ನಡೆ ಸಾಧಿಸಿತು.
ಮಹಾವಿಕಾಸ್ ಅಘಾಡಿಗೂ ತಲೆನೋವು ಸಾಧ್ಯತೆ
ಅಧಿಕಾರಕ್ಕಾಗಿ ಪಕ್ಷಗಳನ್ನು ಕಿತ್ತುಕೊಂಡು ಬಂದ ಕಾರಣ ಜನರು ತಮ್ಮನ್ನು ಸರಿಯಾಗಿ ಬೆಂಬಲಿಸಲಿಲ್ಲ ಎಂಬುದು ಮಹಾಯುತಿ ನಾಯಕರಿಗೆ ಅರಿವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟಸಾಧ್ಯವೆಂಬುದು ಬಿಜೆಪಿ ನೇತೃತ್ವದ ಮುಖಂಡರು ಮನದಟ್ಟು ಮಾಡಿಕೊಂಡಿದ್ದಾರೆ.
ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ(ಎಂವಿಎ)ಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಮೈತ್ರಿಯಲ್ಲಿ ಯಾವುದೇ ವಿವಾದವಿಲ್ಲದೆ ಒಕ್ಕೂಟವನ್ನು ಮುಂದುವರಿಸಿಕೊಂಡು ಬಂದಿವೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಗೆಲುವು ಕೂಡ ವಿಪಕ್ಷಗಳ ಮೈತ್ರಿಕೂಟಕ್ಕೆ ಹುರುಪು ನೀಡಿದೆ.
ಇತ್ತೀಚೆಗೆ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಕುಸಿದು ಬಿದ್ದ ಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಭಾರಿ ಮುಜುಗರವನ್ನು ಉಂಟುಮಾಡಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರೆ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಪ್ರತಿಪಕ್ಷ ಎಂವಿಎ ಈ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿ ಪ್ರತಿಮೆಯ ವಿಷಯವು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಅಂತಿಮವಾಗಿ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆಯ ಒಪ್ಪಂದಗಳು ಮಹಾಯುತಿ ಮತ್ತು ಮಹಾ ವಿಕಾಶ್ ಅಘಾಡಿ ಎರಡರಲ್ಲೂ ಹಲವಾರು ನಾಯಕರನ್ನು ಅತೃಪ್ತಿಗೊಳಿಸಬಹುದು ಹಾಗೂ ಅವರೆಲ್ಲರೂ ಪಕ್ಷಗಳನ್ನು ಬದಲಾಯಿಸಲೂಬಹುದು.
ಇದರ ನಡುವೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ರಾಜ್ಯಾದ್ಯಂತ 200 ರಿಂದ 225 ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ. ಇದು ಹೆಚ್ಚಾಗಿ ಮಹಾಯುತಿ ಮೈತ್ರಿಗೆ ತಲೆನೋವಾಗುವ ಸಾಧ್ಯತೆಯಿದೆ. ವಂಚಿತ್ ಬಹುಜನ ಅಘಾಡಿ ಪಕ್ಷವನ್ನು ಮುನ್ನಡೆಸುತ್ತಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ‘ಇಂಡಿಯಾ’ ಒಕ್ಕೂಟದೊಂದಿಗೆ ಸಖ್ಯ ಕಳೆದುಕೊಂಡಿದ್ದು, ಸ್ವತಂತ್ರವಾಗಿ ತಮ್ಮ ಪಕ್ಷ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷವು ಮುಂಬೈನ ಎಲ್ಲ 36 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ. ಎಐಎಂಐಎಂ ಪಕ್ಷ ಕೂಡ 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗುತ್ತಿದೆ.
ಮಹಾಯುತಿಯಲ್ಲಿ ಬಿರುಕು?
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಆಡಳಿತಾರೂಢ ಮಹಾಯುತಿ ಮೈತ್ರಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ಈಗಾಗಲೇ ಬಿಜೆಪಿ ಹಾಗೂ ಏಕನಾಥ್ ಶಿಂದೆ ಬಣದ ಶಿವಸೇನಾದೊಂದಿಗೆ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ. ಅಜಿತ್ ಪವಾರ್ ಸೇರಿದಂತೆ ಎನ್‌ಸಿಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ಏಕನಾಥ್ ಶಿಂದೆ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವೀಸ್ ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚಿನ ಸಂಪುಟ ಸಭೆಯಲ್ಲಿ ಎನ್‌ಸಿಪಿ ಸದಸ್ಯರ ಹತ್ತಿರ ಕುಳಿತುಕೊಳ್ಳುವುದು ನನಗೆ ವಾಕರಿಕೆ ತರುತ್ತದೆ ಎಂದು ಶಿವಸೇನೆಯ ಸಚಿವರೊಬ್ಬರು ಹೇಳಿದ್ದರು. ಲೋಕಸಭೆ ಚುನಾವಣೆಯ ಸೋಲಿಗೆ ಅಜಿತ್ ಪವಾರ್ ಗುಂಪೇ ಕಾರಣ ಎಂದು ಬಿಜೆಪಿಯ ಹಲವರು ಆರೋಪಿಸಿದ್ದರು. ಎನ್‌ಸಿಪಿಯ ಅಜಿತ್ ಪವಾರ್ ಕೂಡ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋದರ ಸಂಬಂಧಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಅವರನ್ನು ಕಣಕ್ಕಿಳಿಸಿದ್ದು ತಪ್ಪು ಎಂದು ಹೇಳುವ ಮೂಲಕ ಮೈತ್ರಿ ನಾಯಕರಿಗೆ ಇರುಸುಮುರುಸು ಉಂಟುಮಾಡಿದ್ದರು. ಇವೆಲ್ಲ ಘಟನೆಗಳು ಅಜಿತ್ ಪವಾರ್ ಬಣ ವಿಧಾನಸಭಾ ಚುನಾವಣೆಯಲ್ಲಿ ಶರದ್ ಪವಾರ್ ಬಣಕ್ಕೆ ಮತ್ತೆ ವಾಪಸಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕಳೆದ ಐದು ವರ್ಷಗಳಿಂದ ಮರಾಠರ ಮೀಸಲಾತಿಗಾಗಿ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದ ಆಂದೋಲನ ರಾಜ್ಯಮಟ್ಟದಲ್ಲಿ ಹೆಚ್ಚು ತಿರುವುಗಳನ್ನು ಪಡೆದಿದೆ. ಮೀಸಲಾತಿಗಾಗಿ ಮನೋಜ್ ಜಾರಂಗೆ ಪಾಟೀಲ್ ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮ ರಾಜ್ಯ ಸರ್ಕಾರವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮಹಾರಾಷ್ಟ್ರ ರಾಜ್ಯ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಿತ್ತು. ಆದರೆ ಈ ಮಸೂದೆಯೂ ಮರಾಠಿಗರಿಗೆ ನ್ಯಾಯ ತಂದುಕೊಟ್ಟಿಲ್ಲ ಎಂದು ಮನೋಜ್ ಜಾರಂಗೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಜಾರಂಗೆ ಕೂಡ ಹೊಸ ಪಕ್ಷದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮಹಾಯುತಿಗೆ ಮತ್ತಷ್ಟು ತಲೆನೋವಾಗಬಹುದು.
ರೈತರ ಆತ್ಮಹತ್ಯೆ ಸೇರಿ ಹಲವು ಸಮಸ್ಯೆಗಳು
ರೈತರ ಆತ್ಮಹತ್ಯೆ, ನೀರಿನ ಸಮಸ್ಯೆ, ಬರ ಸೇರಿದಂತೆ ಹಲವು ಸಮಸ್ಯೆಗಳು ರಾಜ್ಯದ ರೈತರ ಕಷ್ಟಗಳನ್ನು ಹೆಚ್ಚಿಸಿದೆ. ಈರುಳ್ಳಿ ರಫ್ತು ನಿಷೇಧ ಮತ್ತು ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವುದು ರೈತರ ಮೇಲೆ ಪರಿಣಾಮ ಬೀರಿದೆ. ಕಳೆದೆರಡು ವರ್ಷಗಳಲ್ಲಿ, ರಾಜ್ಯದಲ್ಲಿ ವಿಶೇಷವಾಗಿ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಲ್ಲಿ 2,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ರೈತ ಸಮುದಾಯವು ತಿರುಗಿಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿರುದ್ಯೋಗ ಹಾಗೂ ಅಭಿವೃದ್ಧಿ ಕುಂಠಿತ ರಾಜ್ಯದ ಪ್ರಮುಖ ಸಮಸ್ಯೆಗಳಾಗಿವೆ. ಇದು ಆಡಳಿತ ಹಾಗೂ ವಿಪಕ್ಷ ಮೈತ್ರಿಕೂಟಕ್ಕೆ ಅಗ್ನಿ ಪರೀಕ್ಷೆಯನ್ನು ಒಡ್ಡಲಿದೆ.
ಹಲವು ಮುಖ್ಯಮಂತ್ರಿ ಮುಖಗಳು
ವಿಪಕ್ಷ ಮಹಾವಿಕಾಸ್ ಅಘಾಡಿ ಹಾಗೂ ಆಡಳಿತ ಪಕ್ಷ ಮಹಾಯುತಿ ಎರಡೂ ಮೈತ್ರಿ ಪಕ್ಷಗಳಲ್ಲೂ ಹಲವು ಮುಖ್ಯಮಂತ್ರಿ ಮುಖಗಳಿವೆ. ಶರದ್ ಪವಾರ್ ಬಣದ ಎನ್‌ಸಿಪಿಯಿಂದ ಸುಪ್ರಿಯಾ ಸುಳೆ, ಜಯಂತ್ ಪವಾರ್, ಕಾಂಗ್ರೆಸ್‌ನಿಂದ ನಾನಾ ಪಟೋಲೆ, ಪೃಥ್ವಿರಾಜ್ ಚೌಹಾಣ್, ವಿಪಕ್ಷ ಶಿವಸೇನೆಯಿಂದ ಉದ್ಧವ್ ಠಾಕ್ರೆ, ಮಹಾಯುತಿ ಶಿವಸೇನೆಯಿಂದ ಏಕನಾಥ್ ಶಿಂಧೆ, ಮಹಾಯುತಿ ಎನ್‌ಸಿಪಿಯಿಂದ ಅಜಿತ್ ಪವಾರ್, ಬಿಜೆಪಿಯಿಂದ ದೇವೇಂದ್ರ ಫಡ್ನವೀಸ್ ಸೇರಿದಂತೆ ಹತ್ತಾರು ನಾಯಕರು ಸಿಎಂ ರೇಸ್‌ನಲ್ಲಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರ, ಈಗಾಗಲೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಬೇಕಿತ್ತು. ಆದರೆ, ಅವರಿಗೆ ಅನುಕೂಲಕರವಾದ ವಾತಾವರಣ ರಾಜ್ಯದಲ್ಲಿ ಇಲ್ಲದಿರುವುದರಿಂದ, ಮುಂದಕ್ಕೆ ಹಾಕುವಂತೆ ಆಯೋಗದ ಮೇಲೆ ಒತ್ತಡ ತಂದಿರಬಹುದೆಂಬ ಅನುಮಾನಗಳೂ ಇವೆ.
ಒಟ್ಟಿನಲ್ಲಿ, ಮಹಾರಾಷ್ಟ್ರದಲ್ಲಿ ಹಲವು ಪಕ್ಷಗಳು, ಹಲವು ನಾಯಕರು ಒಮ್ಮೆಲೆ ಮತದಾರರ ಮೇಲೆ ಅಮರಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಮಹಾರಾಷ್ಟ್ರ ಜನತೆಯ ಸಮಸ್ಯೆಗಳಿಗೆ ನಿಜವಾಗಲೂ ಕಿವಿಯಾಗುವ ಪಕ್ಷ ಯಾವುದು, ನಾಯಕ ಯಾರು ಎನ್ನುವುದಕ್ಕೆ ಕಾದು ನೋಡಬೇಕಿದೆ.