ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪ ದ್ವೀಪ ಸಮೂಹಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿದ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿದೆ
ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಲಕ್ಷದ್ವೀಪದಲ್ಲಿ ಹಲವಾರು ಯೋಜನೆಗಳಿಗೆ ಹಸಿರು ನಿಶಾನೆ ತೋರಲು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು.
ಈ ಕುರಿತು ಪೋಸ್ಟ್ ಮಾಡಿದ್ದ ಮಾಲ್ಡೀವ್ಸ್ ಸಚಿವರೊಬ್ಬರು, ಭಾರತವು ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ. ಆದರೆ, ಸಮುದ್ರ ತೀರದ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ನೊಂದಿಗೆ ಸ್ಪರ್ಧಿಸಲು ಭಾರತವು ಸವಾಲುಗಳನ್ನು ಎದುರಿಸಲಿದೆ ಎಂದು ಹೇಳಿದ್ದರು.
ಲಕ್ಷದ್ವೀಪದಲ್ಲಿ ಸಮುದ್ರ ತೀರದ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು ಎಂಬ ಇತ್ತೀಚಿನ ಪೋಸ್ಟ್ ಗಳ ಹಿನ್ನೆಲೆಯಲ್ಲಿ ಸಚಿವರ ಈ ಪೋಸ್ಟ್ ಪ್ರಕಟವಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಕೆಲವು ತಿಂಗಳ ಹಿಂದೆ ಮಾಲ್ದೀವ್ಸ್ ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮುಯಿಝು ಆಯ್ಕೆಯಾದಾಗಿನಿಂದ ಭಾರತ ಹಾಗೂ ಮಾಲ್ದೀವ್ಸ್ ನಡುವಿನ ಸಂಬಂಧ ಹಂತಹಂತವಾಗಿ ಹದಗೆಡುತ್ತಿದೆ.
ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಮಾಲ್ದೀವ್ಸ್ ಚುನಾವಣೆಯ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರಾದ ಮುಹಮ್ಮದ್ ಮುಯಿಝು 75 ಭಾರತೀಯ ಸೇನಾ ಸಿಬ್ಬಂದಿಗಳ ತುಕಡಿಯನ್ನು ಮಾಲ್ದೀವ್ಸ್ ನಿಂದ ತೆರವುಗೊಳಿಸಲಾಗುವುದು ಹಾಗೂ ಮಾಲ್ದೀವ್ಸ್ ನ ‘ಭಾರತ ಮೊದಲು’ ಎಂಬ ವಿದೇಶಾಂಗ ನೀತಿಯನ್ನು ಮಾರ್ಪಾಡು ಮಾಡಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗಿದೆ.