ವಿಪಕ್ಷಗಳು ವಿರೋಧಿಸುತ್ತಾ ಬಂದಿರುವ ಕ್ಷೇತ್ರ ಮರುವಿಂಗಡಣೆಯನ್ನು ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಜೋಡಿಸಿದ ಕಾರಣದಿಂದಾಗಿ ಲೋಕಸಭೆಯಲ್ಲಿ ಮಸೂದೆಯು ವಿಫಲಗೊಂಡಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಭಾಷಣವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. “ಪ್ರಧಾನಿ ಮೋದಿ ಭಾಷಣದಲ್ಲಿ ಮಹಿಳೆಯರನ್ನು ಉಲ್ಲೇಖಿಸುವುದಕ್ಕಿಂತ ಅಧಿಕ ಕಾಂಗ್ರೆಸ್ ಅನ್ನು ಉಲ್ಲೇಖಿಸಿದ್ದಾರೆ. ಭಾಷಣದಲ್ಲಿ ಕಾಂಗ್ರೆಸ್ ಅನ್ನು 59 ಬಾರಿ ಪ್ರಸ್ತಾಪಿಸಿದ್ದಾರೆ” ಎಂದು ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಲಾದ ಮಹಿಳಾ ಮೀಸಲಾತಿ ಮಸೂದೆಯು ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿದೆ. ಮಸೂದೆಯ ಪರವಾಗಿ 298 ಮತಗಳು ಬಂದರೆ, ವಿರುದ್ಧವಾಗಿ 230 ಮತಗಳು ಬಿದ್ದವು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಪಕ್ಷಗಳನ್ನು ಟೀಕಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಇದನ್ನು ಓದಿದ್ದೀರಾ? ಪ್ರಧಾನಿ ಮೋದಿ ವಚನ ಭ್ರಷ್ಟರಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಕಳೆದ 12 ವರ್ಷಗಳಿಂದ ಅರ್ಥಪೂರ್ಣವಾದ ಯಾವುದೇ ಕಾರ್ಯವನ್ನು ಮಾಡದ ಹತಾಶ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಅಧಿಕೃತ ಭಾಷಣ ಮಾಡಿದ್ದಾರೆ. ಆದರೆ ಈ ಭಾಷಣ ಬರೀ ಕೆಸರೆರಚಾಟ ಮತ್ತು ಸಂಪೂರ್ಣ ಸುಳ್ಳುಗಳಿಂದ ತುಂಬಿದ ರಾಜಕೀಯ ಭಾಷಣ” ಎಂದು ಹೇಳಿದ್ದಾರೆ.
“ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಆದರೆ ಎರಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಪ್ರಧಾನಿ ಅಧಿಕೃತ ಆಡಳಿತದ ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಸ್ಪಷ್ಟವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನದ ವಿಡಂಬನೆಯಾಗಿದೆ” ಎಂದರು.
“ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿಯನ್ನು ಬೆಂಬಲಿಸಿದೆ. 2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಪಕ್ಷ ನಮ್ಮದು. ಆದ್ದರಿಂದ ಅದು ರದ್ದಾಗಬಾರದು. ಬಿಜೆಪಿಗೆ ಆ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಸಾಧ್ಯವಾಗಲಿಲ್ಲ. 2023ರಲ್ಲಿ ಮತ್ತೊಂದು ಮಸೂದೆಯನ್ನು ತಂದರು. ಕಾಂಗ್ರೆಸ್ ಪಕ್ಷ ಅದನ್ನೂ ಬೆಂಬಲಿಸಿತು” ಎಂದು ತಿಳಿಸಿದ್ದಾರೆ.
“ಆ ಮಸೂದೆ ಇನ್ನೂ ಅಸ್ತಿತ್ವದಲ್ಲಿದೆ. ಬಿಜೆಪಿ ತನ್ನದೇ ಆದ ಮಸೂದೆಯನ್ನು ಜಾರಿಗೆ ತರಲು 3 ವರ್ಷಗಳನ್ನು ತೆಗೆದುಕೊಂಡಿತು ಎಂಬುದು ಭಾರತದ ನಾರಿ ಶಕ್ತಿಗೆ ಅವರ ಬದ್ಧತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ! ಮೋದಿಜಿ ದೇಶಕ್ಕೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜನಸಂಖ್ಯೆಯ ಆಧಾರದಲ್ಲಿ ನಡೆಯುವ ಕ್ಷೇತ್ರ ಮರುವಿಂಗಡಣೆಗೆ ದಕ್ಷಿಣ ಭಾರತದ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ಕರ್ನಾಟಕ, ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಭೀತಿ ಉಂಟಾಗಿದೆ. ವಿರೋಧವಿರುವ ಈ ಮಸೂದೆಯ ಜತೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಜೋಡಿಸಿ ಮಂಡಿಸುವ ಕೇಂದ್ರದ ನಿಲುವಿಗೆ ವಿರೋಧ ಪಕ್ಷಗಳ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಸೆಪ್ಟೆಂಬರ್ 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ವಿಪಕ್ಷಗಳು ಬೆಂಬಲವಾಗಿ ನಿಂತಿತ್ತು. ಆದರೆ ಈಗ ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದರೆ ಕ್ಷೇತ್ರ ಮರುವಿಂಗಡಣೆಯನ್ನೂ ಅಂಗೀಕರಿಸಿದಂತೆ. ಈ ಕಾರಣದಿಂದಾಗಿ ವಿಪಕ್ಷಗಳು ಈ ಸಂವಿಧಾನ ತಿದ್ದುಪಡಿ ವಿರುದ್ಧವಾಗಿ ನಿಂತಿತು. ಚುನಾವಣಾ ಸಮಯದಲ್ಲಿ ಲಾಭಕ್ಕಾಗಿಯೇ ಈ ತಂತ್ರ ರೂಪಿಸಿದ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈಗ ವಿಪಕ್ಷಗಳನ್ನು ಮಹಿಳಾ ವಿರೋಧಿ ಎಂದು ಬಿಂಬಿಸುವ ಯತ್ನ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿಯೇ ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.





