ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಅಧಿಕಾರಕ್ಕೆ ಬಂದರೆ ಬಾಹ್ಯ ಬೆಂಬಲ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದ ನಾಯಕತ್ವಕ್ಕೆ ನಾವು ಬೆಂಬಲ ನೀಡಲಿದ್ದು, ಪ್ರತಿ ಹಂತದಲ್ಲೂ ಬಾಹ್ಯವಾಗಿ ಬೆಂಬಲ ನೀಡುತ್ತೇವೆ. ನಾವು ಸರ್ಕಾರ ರಚಿಸಲಿದ್ದು,ಬಂಗಾಳದ ತಾಯಿ ಮತ್ತು ಸೋದರಿಯರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು. ಅವರು ವಾರ್ಷಿಕ 100 ದಿನಗಳ ಉದ್ಯೋಗ ಪಡೆಯಬೇಕು. ಯಾವುದೇ ಸಮಸ್ಯೆಗಳನ್ನು ಹೊಂದಬಾರದು” ಎಂದು ಹೇಳಿದರು.
ಇಂಡಿಯಾ ಒಕ್ಕೂಟದಲ್ಲಿ ಬಂಗಾಳ ಕಾಂಗ್ರೆಸ್ ಹಾಗೂ ಸಿಪಿಐಎಂ ಇದ್ದರೂ ನಾವು ಅದನ್ನು ಲೆಕ್ಕಿಸುವುದಿಲ್ಲ. ಅವರು ರಾಜ್ಯದಲ್ಲಿ ನಮ್ಮೊಂದಿಗಿಲ್ಲ. ಅವರು ಬಿಜೆಪಿಯೊಂದಿಗಿದ್ದಾರೆ. ನಾನು ಮಾತನಾಡುತ್ತಿರುವುದು ದೆಹಲಿಯ ಬಗ್ಗೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ದೇಶದ ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಶೇ.70 ರಷ್ಟು ಕ್ಷೇತ್ರಗಳ ಮತದಾನ ಮುಗಿದಿದೆ. ಇನ್ನೂ ಬಾಕಿಯಿರುವ ಮೂರು ಹಂತಗಳ ಮತದಾನದಲ್ಲೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
ಇಂದು ಕೋಲ್ಕತ್ತಾದಿಂದ 78 ಕಿ.ಮೀ ದೂರವಿರುವ ಉತ್ತರ 24 ಪರಗಣದ ಪಟ್ಟಣದ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಇಂಡಿಯಾ ಒಕ್ಕೂಟ 315 ಸೀಟುಗಳನ್ನು ಗೆದ್ದರೆ, ಬಿಜೆಪಿ ಹೆಚ್ಚಿಗೆ ಎಂದರೆ 195 ಸ್ಥಾನ ಗಳಿಸಬಹುದು. ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ನನಗೆ ಖಚಿತವಿದೆ. ಮೋದಿ ದೆಹಲಿಯಲ್ಲಿ ಇರುವುದಿಲ್ಲ. ನನಗೆ ಬಂದ ಅಂಕಿಅಂಶಗಳ ಮಾಹಿತಿಯ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಮೋದಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ.ನಾಲ್ಕು ಹಂತದ ಮತದಾನವಾದ ನಂತರ ಬಿಜೆಪಿ ಪರವಾಗಿ ಮತದಾನ ಎಷ್ಟು ಚೆನ್ನಾಗಿ ನಡೆದಿಲ್ಲ. ಈ ಕಾರಣದಿಂದ ಕೇಂದ್ರದಲ್ಲಿರುವ ಆಡಳಿತ ಪಕ್ಷ ಭಯಗೊಂಡಿದೆ. ಅದಕ್ಕಾಗಿಯೇ ಅವರು 400 ಸೀಟು ಎಂದು ಬೊಗಳುತ್ತಿದ್ದಾರೆ ಎಂದು ಮಮತಾ ಹೇಳಿದರು.
“ಸಂದೇಶ್‌ಖಾಲಿ ಸಮಸ್ಯೆಯ ಬಗ್ಗೆ ಬಿಜೆಪಿ ಹಾಗೂ ಪ್ರಧಾನಿ ಸುಳ್ಳುಗಳನ್ನು ಹರಡುತ್ತಿದ್ದಾರೆ. ಗ್ಯಾರಂಟಿ ನಾಯಕ ಪಶ್ಚಿಮ ಬಂಗಾಳದಲ್ಲಿ ಆರೋಪ ಮಾಡುತ್ತಿದ್ದಾರೆ.ಈಗ ವಿಡಿಯೋಗಳ ಮೂಲಕ ಸತ್ಯ ಬಹಿರಂಗಗೊಂಡಿದೆ. ಅವುಗಳನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಅವರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ರಾಜ್ಯದ ಮಹಿಳೆಯರ ಘನತೆಯನ್ನು ಹಾಳು ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
