ಉತ್ತರ ಪ್ರದೇಶದ ಅಮೇಥಿಯಲ್ಲಿ ದಲಿತ ಕುಟುಂಬದ ನಾಲ್ವರನ್ನು ಕೂಡಾ ಗುಂಡಿಕ್ಕಿ ಕೊಂದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. 27 ವರ್ಷದ ಆರೋಪಿ ಚಂದನ್ ವರ್ಮಾ ದಲಿತ ಸಮುದಾಯದ ಇಡೀ ಕುಟುಂಬವನ್ನೇ ಹತ್ಯೆಗೈಯಲು ಬಳಸಿದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಶಿವತಂಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮದನ್ ಕುಮಾರ್ ಸಿಂಗ್ ಅವರು ಕಾಲುವೆಯ ಟ್ರ್ಯಾಕ್ ಬಳಿ ಸಿಕ್ಕ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳುವಾಗ ಈ ಘಟನೆ ಸಂಭವಿಸಿದೆ. ಮದನ್ ಕುಮಾರ್ ಪಿಸ್ತೂಲ್ ಅನ್ನು ಪರಿಶೀಲಿಸುತ್ತಿದ್ದಾಗ, ಆರೋಪಿ ಚಂದನ್ ವರ್ಮಾ, ಮದನ್ ಕುಮಾರ್ ಅವರ ಬಂದೂಕನ್ನು ಕಸಿದುಕೊಂಡು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಕ್ಷಣೆಗಾಗಿ, ಇನ್ಸ್‌ಪೆಕ್ಟರ್ ಸಚ್ಚಿದಾನಂದ ರೈ ಅವರು ಗುಂಡು ಹಾರಿಸಿದ್ದು, ಅದು ಆರೋಪಿಯ ಚಂದನ್ ವರ್ಮಾ ಬಲಗಾಲಿಗೆ ತಗುಲಿದೆ ಎಂದು ವರದಿಯಾಗಿದೆ. ದೆಹಲಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಶುಕ್ರವಾರ ರಾತ್ರಿ ನೋಯ್ಡಾದ ಟೋಲ್ ಪ್ಲಾಜಾ ಬಳಿ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ದಲಿತ ದೌರ್ಜನ್ಯ | ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದ ಕುಟುಂಬದ ನಾಲ್ವರ ಹತ್ಯೆ
ಚಂದನ್ ವರ್ಮಾ ಅಮೇಥಿಯ ಅಹೋರ್ವಾ ಭವಾನಿ ಪ್ರದೇಶದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಸುನಿಲ್ ಕುಮಾರ್ (35), ಅವರ 32 ವರ್ಷದ ಪತ್ನಿ ಪೂನಂ ಮತ್ತು ದಂಪತಿಯ ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಹಿಂದೆಯೇ ಚಂದನ್ ವರ್ಮಾ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೂನಂ ದೂರು ದಾಖಲಿಸಿದ್ದರು.
ಅಪರಾಧ ಕೃತ್ಯಕ್ಕೆ ಬಳಸಿದ್ದ ಕಂಟ್ರಿ ನಿರ್ಮಿತ ಪಿಸ್ತೂಲ್ ಹಾಗೂ ಕಪ್ಪು ಬಣ್ಣದ ಎನ್‌ಫೀಲ್ಡ್ ಬುಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಸುನೀಲ್ ಅವರ ಬಲಿಷ್ಠ ಜಾತಿಯ ವ್ಯಕ್ತಿಯೊಬ್ಬನ ವಿರುದ್ಧ ದಲಿತ ದೌರ್ಜನ್ಯದ ಆರೋಪದ ಮೇಲೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಿತ್ತು. ಆ ಕಾರಣಕ್ಕಾಗಿಯೇ, ಅವರ ಕುಟುಂಬವನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.
ಆದರೆ ಆರೋಪಿಯ ಬಂಧನದ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪೊಲೀಸ್ ಅಧೀಕ್ಷಕ ಅನೂಪ್ ಕುಮಾರ್ ಸಿಂಗ್, ಪೂನಂ ಜೊತೆ ಈ ಹಿಂದೆ ದೈಹಿಕ ಸಂಬಂಧ ಹೊಂದಿದ್ದ ವಿಚಾರದಲ್ಲಿ ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
