ಅಂಗಡಿಯಿಂದ ಸಿಗರೇಟ್ ತಂದುಕೊಡಲು ನಿರಾಕರಿಸಿದ್ದಕ್ಕೆ 8 ವರ್ಷದ ಬಾಲಕನ ಹಣೆಗೆ ದುಷ್ಟನೊಬ್ಬ ಗುಂಡು ಹಾರಿಸಿರುವ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.
ಮುಂಗೇರ್ ಜಿಲ್ಲೆಯ ಗೋವಿಂದಪುರ ಗ್ರಾಮದ ಬಾಲಕ ವಿಪರೀತ ಚಳಿಯಿದ್ದ ಕಾರಣ ತನ್ನ ಮನೆಗೆ ಹೊರಗೆ ಬೆಂಕಿ ಹಚ್ಚಿ, ಬೆಂಕಿ ಕಾಯುತ್ತಾ ಕುಳಿತಿದ್ದ. ಈ ವೇಳೆ, ಅಲ್ಲಿಗೆ ಅದೇ ಗ್ರಾಮದ ನಿತೀಶ್ ಕುಮಾರ್ ಎಂಬಾತ ಬಂದಿದ್ದಾನೆ. ಅಂಗಡಿಯಿಂದ ಸಿಗರೇಟ್ ತಂದುಕೊಡುವಂತೆ ಬಾಲಕನನ್ನು ಕೇಳಿದ್ದಾನೆ. ಆದರೆ, ವಿಪರೀತ ಚಳಿ ಇದೆ, ಅಂಗಡಿಗೆ ಹೋಗುವುದಿಲ್ಲ ಎಂದು ಬಾಲಕ ಹೇಳಿದ್ದಾರೆ.
ತನ್ನ ಮಾತನ್ನು ಬಾಲಕ ನಿರಾಕರಿಸಿದ್ದಕ್ಕೆ ಕುಪಿತಕೊಂಡ ದುಷ್ಕರ್ಮಿ ನಿತೀಶ್ ಕುಮಾರ್, ಪಿಸ್ತೂಲ್ನಿಂದ ಬಾಲಕನ ಹಣೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಬಾಲಕನ ಕುಟುಂಬಸ್ಥರು ಮತ್ತು ನರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ.
ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯು ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಮುಂಗೇರ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕನ ಪರಿಸ್ಥಿತಿ ಬಗ್ಗೆ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯಿಸಿದ್ದು, “ಬಾಲಕನ ಹಣೆಯಲ್ಲಿ ಮೂಗಿನ ಬಳಿ ಗುಂಡು ಸಕ್ಕಿಕೊಂಡಿತ್ತು. ಗುಂಡನ್ನು ತೆಗೆಯಲಾಗಿದೆ. ಬಾಲಕನ ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಆರೋಪಿ ನಿತೀಶ್ ಕುಮಾರ್ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆತ ಮತ್ತೊಂದು ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ರಾಜ್ಯ ಬಿಜೆಪಿ-ಜೆಡಿಯು ಸರ್ಕಾರದ ವಿರುದ್ಧ ಆರ್ಜೆಡಿ ನಾಯಕ ಜಯಪ್ರಕಾಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. “ಇದು ಬಿಹಾರದ ಅರಾಜಕತೆಗೆ ಉದಾಹರಣೆಯಾಗಿದೆ. ಹೆಚ್ಚುತ್ತಿರುವ ಅಪರಾಧಗಳು ಆಡಳಿತದ ವೈಫಲ್ಯವನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದ್ದಾರೆ.