30 ವರ್ಷದ ವ್ಯಕ್ತಿಯೊಬ್ಬ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಳಸಿ, ಶಿಕ್ಷಕಿಯಾಗಿ ಬಿಂಬಿಸಿಕೊಂಡು, ಏಳು ಮಂದಿ ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಪ್ರಕರಣ ಮಧ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆದೇಶದಂತೆ ಒಂಬತ್ತು ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು,7 ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶಿಸಲಾಗಿದೆ.
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ಬಾಲಕಿಯರಿಗೆ ಆರೋಪಿ ಬೃಜೇಶ್ ಪ್ರಜಾಪತಿ ಬಲೆ ಬೀಸುತ್ತಿದ್ದ ಎಂದು ಹೇಳಲಾಗಿದೆ. ಧ್ವನಿ ಬದಲಾವಣೆ ಆ್ಯಪ್ ಬಳಸಿಕೊಂಡು ತಾನು ಶಿಕ್ಷಕಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಸ್ಕಾಲರ್ ಶಿಪ್ ಅರ್ಜಿಗಳ ಸಮಸ್ಯೆ ಬಗೆಹರಿಸುವ ಸಲುವಾಗಿ ತನ್ನನ್ನು ಭೇಟಿ ಮಾಡುವಂತೆ ಹೇಳುತ್ತಿದ್ದ. ಈ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಅವರ ಮೊಬೈಲ್ ಮೊಬೈಲ್ ಗಳನ್ನು ಕಸಿದುಕೊಂಡು ಅವರು ನೆರವಿಗಾಗಿ ಕರೆ ಮಾಡದಂತೆ ತಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಣೆಯಾದ ಮಹಿಳೆಯರು ಮತ್ತು ಸಾಮಾಜಿಕ ವಿಡಂಬನೆ
ಆರೋಪಿಯಿಂದ ಇದುವರೆಗೆ 16 ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇವಲ ನಾಲ್ಕು ಮಂದಿಯಿಂದ ಮಾತ್ರ ಅಧಿಕೃತ ದೂರು ಬಂದಿದೆ. ಒಬ್ಬಾಕೆ ಯುವತಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಈತನನ್ನು ಭೇಟಿ ಮಾಡಿದ್ದು, ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ಸಿಂಧಿ ಎಸ್ಪಿ ರವೀಂದ್ರ ವರ್ಮಾ ತಿಳಿಸಿದ್ದಾರೆ. ಇತರ ಆರು ಮಂದಿ ಕಾಲೇಜು ವಿದ್ಯಾರ್ಥಿನಿಯರಾಗಿದ್ದು, 19 ರಿಂದ 20 ವರ್ಷದವರು.
ನಿರುದ್ಯೋಗಿಯಾಗಿರುವ ಪ್ರಜಾಪತಿಯ ಈ ದಂಧೆ ಈ ವರ್ಷದ ಏಪ್ರಿಲ್ ನಿಂದ ಆರಂಭವಾಗಿದ್ದರೂ, ಈತನ ವಿರುದ್ಧ ದೂರು ನೀಡಲು ವಿದ್ಯಾರ್ಥಿನಿಯರು ಹೆದರಿದ್ದರು. ಮೇ 16ರಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಮಜೂಲಿ ಠಾಣೆಗೆ ಬಂದು ದೂರು ನೀಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
