ಮಣಿಪುರ ಹಿಂಸಾಚಾರಕ್ಕೆ 2 ವರ್ಷ; ನಿಲ್ಲದ ಸಂಘರ್ಷ

Date:

Advertisements
 ಕುಕಿ ಝೋ ಸಮುದಾಯವು ಕಾಂಗ್‌ಪೋಕ್ಪಿ ಜಿಲ್ಲೆಯ ಸದರ್ ಹಿಲ್ಸ್‌ನಲ್ಲಿ 'ಸಪರೇಷನ್ ಡೇ' ಆಚರಿಸಿದೆ. ಮತ್ತೊಂದೆಡೆ ಮೈತೇಯಿ ಪೀಪಲ್ಸ್‌ ಕಾನ್ಫರೆನ್ಸ್ ಕೂಡ ನಡೆದಿದೆ

ಮೈತೇಯಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕೊಡುವ ನಿರ್ಧಾರವನ್ನು ಮಣಿಪುರ ಹೈಕೋರ್ಟ್ ಪ್ರಕಟಿಸಿದ ಬಳಿಕ ಹೊತ್ತಿಕೊಂಡ ಜನಾಂಗೀಯ ಸಂಘರ್ಷ ಮಣಿಪುರವನ್ನು ಇಬ್ಭಾಗ ಮಾಡಿ ಎರಡು ವರ್ಷಗಳು ತುಂಬಿವೆ. ಈಶಾನ್ಯ ಭಾರತದ ರಾಜ್ಯವೊಂದು ಮತ್ತೆ ಸಹಜ ಸ್ಥಿತಿಗೆ ಬಾರದೆ ಇನ್ನೂ ನರಳಾಡುತ್ತಲೇ ಇದೆ. ಮೈತೇಯಿ ಮತ್ತು ಕುಕಿ- ಝೋ ಸಮುದಾಯಗಳ ನಡುವಿನ ಬಿಕ್ಕಟ್ಟಿನಿಂದಾಗಿ ಮಣಿಪುರ ರಾಜ್ಯ ಭೌತಿಕವಾಗಿ ಮತ್ತು ಮಾನಸಿಕವಾಗಿ ಇಬ್ಭಾಗವಾಗಿವೆ. ಒಡೆದ ಮನಸ್ಸುಗಳನ್ನು ಮೆಲುಕು ಹಾಕುತ್ತಾ ಹೋದರೆ, ನಮ್ಮ ಆಳುವ ಸರ್ಕಾರಗಳಿಗೆ ಈಶಾನ್ಯ ರಾಜ್ಯಗಳ ಮೇಲೆ ಎಂತಹ ನಿರ್ಲಕ್ಷ್ಯ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಹೈಕೋರ್ಟ್ ಆದೇಶ ಮತ್ತು ಅದಕ್ಕೆ ಪೂರಕವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಖಂಡಿಸಿ 2023ನೇ ಇಸವಿಯ ಮೇ 3ನೇ ತಾರೀಕು ಬುಡಕಟ್ಟು ಸಮುದಾಯಗಳ ಗುಂಪುಗಳು ಶಾಂತಿಯುತ ಪ್ರತಿಭಟನೆಗಿಳಿದರು. ಚೂರಾಚಾಂದ್ಪುರ ಜಿಲ್ಲೆಯ ತೋರ್ಬಂಗ್ ಪ್ರದೇಶದಲ್ಲಿ ಅಂದು ಪ್ರಚೋದಿತವಾದ ಹಿಂಸಾಚಾರ ಈವರೆಗೆ 200ಕ್ಕೂ ಹೆಚ್ಚು ಜನರ ಜೀವಗಳ ಬಲಿ ಪಡೆದಿದೆ. ಬುಸುಗುಡುತ್ತಲೇ ಇರುವ ರಾಜ್ಯದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆಯನ್ನು ಒಂದು ಮುಕ್ಕಾಲು ವರ್ಷಗಳ ಬಳಿಕ ಪಡೆಯಲಾಯಿತು. ಈಗ ರಾಷ್ಟ್ರಪತಿ ಆಳ್ವಿಕೆ ಶುರುವಾಗಿದೆ.

ಎರಡು ವರ್ಷಗಳ ಈ ಹಿಂಸಾಚಾರವನ್ನು ಮೈತೇಯಿ ಮತ್ತು ಕುಕಿ ಸಮುದಾಯಗಳೆರಡೂ ತಮ್ಮದೇ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿವೆ. ಕಣಿವೆ ಭಾಗದಲ್ಲಿ ಮೈತೇಯಿಗಳು, ಗುಡ್ಡಗಾಡು ಪ್ರದೇಶದಲ್ಲಿ ಕುಕಿಗಳು ಮೇ 3ರಂದು ಪ್ರತಿಭಟನೆಗಳನ್ನು ನಡೆಸಿವೆ.

Advertisements

ಇಂಫಾಲದಲ್ಲಿ ಮಣಿಪುರ ಪೀಪಲ್ಸ್ ಕಾನ್ಫರೆನ್ಸ್ ನಡೆದಿದ್ದು, ಸರ್ಕಾರದ ವೈಫಲ್ಯವನ್ನು ಖಂಡಿಸಿ 10 ನಿರ್ಣಯಗಳನ್ನು ಹೊರಡಿಸಲಾಗಿದೆ.

1. ರಾಜ್ಯವು ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು.

2. ಹೊಣೆಗಾರಿಕೆಯನ್ನು ಹೊತ್ತಿಕೊಳ್ಳಬೇಕು.

3. ಸರ್ಕಾರದ ನೆರಟಿವ್‌ಗಳಿಗೆ ನಮ್ಮ ಒಪ್ಪಿಗೆ ಇಲ್ಲ.

4. ಪರೋಕ್ಷವಾಗಿ ಯುದ್ಧಕ್ಕೆ ಪ್ರೋತ್ಸಾಹಿಸುವುದು ಮತ್ತು ಅಕ್ರಮವಾಗಿ ಪ್ರೋತ್ಸಾಹ ನೀಡುವುದು ಅಂತ್ಯವಾಗಬೇಕು.

5. ಮೂಲಭೂತ ಹಕ್ಕುಗಳನ್ನು ಪುನರ್ ಸ್ಥಾಪಿಸಬೇಕು.

6. ಮುಕ್ತವಾಗಿ ಮತ್ತು ಸುರಕ್ಷಿತವಾಗಿ ರಾಜ್ಯದಾದ್ಯಂತ ಸಂಚರಿಸಲು ಅವಕಾಶ ದೊರೆಯಬೇಕು ಹಾಗೂ ಭದ್ರತೆ ನೀಡಬೇಕು.

7. ಕಾನೂನುಬಾಹಿರ ಮತ್ತು ಶಾಂತಿ ವಿರೋಧಿ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

8. ಅರಣ್ಯಗಳ ರಕ್ಷಣೆ ಮಾಡಬೇಕು. ಅಫೀಮು ಬೆಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.

9. ಅಕ್ರಮವಾಗಿ ನೆಲೆಸಿರುವವರ ದಾಖಲೀಕರಣ ಆಗಬೇಕು.

10. ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಜಾರಿಗೊಳಿಸಬೇಕು.

-ಇವಿಷ್ಟು ಸಮಾವೇಶದ ಪ್ರಮುಖ ಆಗ್ರಹಗಳು.

ಮಣಿಪುರ ಪೀಪಲ್ಸ್ ಸಮಾವೇಶವು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಈ ಬೇಡಿಕೆಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಈಡೇರಿಸದಿದ್ದರೆ, ಮಣಿಪುರದ ಜನರನ್ನು ಪರಕೀಯತೆಗೆ ಸಂಪೂರ್ಣವಾಗಿ ದೂಡಿದಂತಾಗುತ್ತದೆ, ಅದು ಮಾಗದ ನೋವಿಗೆ ಸಮನಾಗಿರುತ್ತದೆ. ಅಂತಹ ಸನ್ನಿವೇಶದಲ್ಲಿ, ಮಣಿಪುರದ ಜನರು ಮತ್ತು ಭಾರತ ಸರ್ಕಾರದ ನಡುವಿನ ಪರಸ್ಪರ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಮೂಹಿಕ ಕ್ರಮಗಳಿಗಾಗಿ ತಮ್ಮದೇ ಆದ ಹಾದಿಯನ್ನು ಹಿಡಿಯಲು ಜನರು ಬಯಸುತ್ತಾರೆ” ಎಂದು ತಿಳಿಸಲಾಗಿದೆ.

ಇದನ್ನೂ ಓದಿರಿ: ಅಂಬೇಡ್ಕರ್ ಸೋಲಿಗಾಗಿ ಕೆಲಸ ಮಾಡಿದ್ದ ಸಾವರ್ಕರ್: ಬಾಬಾಸಾಹೇಬರ ಪತ್ರದಲ್ಲೇನಿದೆ?

ಇದಕ್ಕೆ ಪ್ರತಿಯಾಗಿ ಕುಕಿ ಝೋ ಸಮುದಾಯವು ಕಾಂಗ್‌ಪೋಕ್ಪಿ ಜಿಲ್ಲೆಯ ಸದರ್ ಹಿಲ್ಸ್‌ನಲ್ಲಿ ‘ಸಪರೇಷನ್ ಡೇ’ ಆಚರಿಸಿದೆ. ಜಿಲ್ಲೆಯಾದ್ಯಂತ ಸಾವಿರಾರು ಜನರು ಒಟ್ಟುಗೂಡಿದ್ದರು. ತಮ್ಮ ಮನೆಗಳನ್ನು ಕಳೆದುಕೊಂಡ, ಸಾವಿರಾರು ಜನರ ಸ್ಥಳಾಂತರಕ್ಕೆ ಕಾರಣವಾದ, ರಾಜ್ಯದ ಸಾಮಾಜಿಕ ರಚನೆಯಲ್ಲಿ ಶಾಶ್ವತ ಬಿರುಕು ಸೃಷ್ಟಿಸಿದ ಹಿಂಸಾಚಾರವನ್ನು ಮೆಲುಕು ಹಾಕಿದ್ದಾರೆ.

ಬುಡಕಟ್ಟು ಏಕತೆ ಸಮಿತಿಯ ಉಪಾಧ್ಯಕ್ಷ ಅಮಂಗ್ ಚೊಂಗ್ಲೋಯ್ ಭಾವುಕರಾಗಿ ಮಾತನಾಡುತ್ತಾ, “ಈ ಎರಡು ವರ್ಷಗಳಲ್ಲಿ ಪ್ರಪಂಚ ಸಾಕಷ್ಟು ಮುಂದುವರಿದರೂ ನಾವು ಹಿಂದೆಯೇ ಉಳಿದಿದ್ದೇವೆ. ಮೇ 3, 2023ರ ಗಾಯಗಳು ಹಸಿಯಾಗಿಯೇ ಉಳಿದಿವೆ” ಎಂದಿದ್ದಾರೆ.

“ನಮಗೆ ಅಂತಹ ನೋವನ್ನು ಉಂಟು ಮಾಡಿದವರೊಂದಿಗೆ ಸಹಬಾಳ್ವೆ ಇನ್ನು ಮುಂದೆ ಸಾಧ್ಯವಿಲ್ಲ ಎಂದು ಜಗತ್ತಿಗೆ ಘೋಷಿಸುವ ದಿನ ಇದಾಗಿದೆ. ನಾವು ಸಹಿಸಿಕೊಂಡ ಕ್ರೌರ್ಯದ ಪ್ರಮಾಣದಿಂದಾಗಿ ಮೈತೇಯಿ ಸಮುದಾಯದೊಂದಿಗೆ ಸಮನ್ವಯದ ಯಾವುದೇ ಭರವಸೆ ನಾಶವಾಗಿದೆ” ಎಂದು ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಮಾದರಿಯ ಪ್ರತ್ಯೇಕ ಆಡಳಿತವನ್ನು ಕುಕಿ ಭಾಗದಲ್ಲಿ ಜಾರಿಗೆ ತರಬೇಕು ಎಂದು ಕುಕಿಗಳು ಪಟ್ಟು ಹಿಡಿದಿದ್ದಾರೆ. ಹಿಂಸಾಚಾರದ ಸಂದರ್ಭದಲ್ಲಿ ಸರ್ಕಾರಿ ಶಸ್ತ್ರಾಗಾರಗಳಿಂದ ಲೂಟಿ ಹೊಡೆದಿರುವ ಶಸ್ತ್ರಗಳನ್ನು ನಾಗರಿಕರಿಂದ ಹಿಂಪಡೆಯುವ ಕೆಲಸಗಳನ್ನು ಸರ್ಕಾರವೇನೋ ಮಾಡಿದೆ. ಆದರೆ ನಿರೀಕ್ಷಿತ ಯಶಸ್ಸು ಕಂಡಂತೆ ತೋರುತ್ತಿಲ್ಲ.

ಇದನ್ನೂ ಓದಿರಿ: ಸಂಸ್ಕೃತದ ಬಗ್ಗೆ ಇರುವ ಸುಳ್ಳುಗಳು: ಅವುಗಳನ್ನೇ ಸಾರುತ್ತಿರುವ ಬಿಜೆಪಿ ನಾಯಕರು

ಈ ಹಿಂಸಾಚಾರದಿಂದಾಗಿ ರಾಜ್ಯದೊಳಗೆಯೇ ಸ್ಥಳಾಂತರಗೊಂಡ ಜನರ ಬವಣೆ ಹೇಳತೀರದಾಗಿದೆ. ಸುಮಾರು 60,000 ಜನ ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಸಂಘರ್ಷ ನಡೆದು ಎರಡು ವರ್ಷಗಳು ಕಳೆದರೂ, ಸ್ಥಳಾಂತರಗೊಂಡವರು ಜನದಟ್ಟಣೆಯಿಂದ ಕೂಡಿದ, ನೈರ್ಮಲ್ಯವಿಲ್ಲದ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆಹಾರ, ನೀರು ಮತ್ತು ಆರೋಗ್ಯ ಸೇವೆ ಅಷ್ಟಕ್ಕಷ್ಟೇ. ಮಾನವ ಹಕ್ಕುಗಳ ಸಂಘಟನೆಯ ಪ್ರಯತ್ನಗಳ ಹೊರತಾಗಿಯೂ ನಿರಾಶ್ರಿತರು ನಿರ್ಲಕ್ಷ್ಯಗಳನ್ನು ಎದುರಿಸುತ್ತಲೇ ಇದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ತಮ್ಮ ಸ್ಥಳಗಳಿಗೆ ಮರಳುವ ಯಾವುದೇ ಭರವಸೆ ಅವರಿಗಿಲ್ಲ. ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ತಮ್ಮ ಮಕ್ಕಳ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ತಮ್ಮದೇ ನೆಲದಲ್ಲಿ ಪರಕೀಯರಂತೆ ಉಳಿಯುವಂತಾಗಿದೆ.

ಕುಕಿ ಮಹಿಳೆಯರ ಅತ್ಯಾಚಾರ ಮಾಡಿ, ಸಾವಿರಾರು ಜನರ ನಡುವೆ ಬೆತ್ತಲೆ ಮೆರವಣಿಗೆ ಮಾಡಿದ್ದ ಘಟನೆಗೆ ಸಂಬಂಧಿಸಿದ ವಿಡಿಯೊ ಹೊರಬಿದ್ದ ಬಳಿಕವಷ್ಟೇ (ಹಿಂಸಾಚಾರದ 78 ದಿನಗಳ ನಂತರ) ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದರು. ಇಷ್ಟಾದರೂ ಈವರೆಗೂ ಮಣಿಪುರಕ್ಕೆ ಹೋಗಲೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಮಣಿಪುರ ರಾಜ್ಯ ನಿತ್ಯವೂ ಬೇಯುತ್ತಲೇ ಇದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X