ಕೆಲವೊಂದಿಷ್ಟು ತಿಂಗಳ ಕಾಲ ಸಂಘರ್ಷವಿಲ್ಲದಿದ್ದರೂ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಶಾಂತಿಸ್ಥಾಪನೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದಾದ್ಯಂತ ಇಂಟರ್‌ನೆಟ್ ಸಂಪರ್ಕ ಸೇವೆಯನ್ನು 5 ದಿನ ಸ್ಥಗಿತಗೊಳಿಸಲಾಗಿದೆ. ರಾಜ್ಯದ ಎರಡು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಳೆದ ವರ್ಷ ಮೇ 3ರಂದು ಮೀಸಲಾತಿ ವಿಚಾರವಾಗಿ ಶುರುವಾದ ಕುಕಿ ಹಾಗೂ ಮೈತೇಯಿ ನಡುವಿನ ಸಂಘರ್ಷ ಸುಮಾರು 6 ತಿಂಗಳು ನಿರಂತರವಾಗಿ ಮುಂದುವರಿದಿತ್ತು.
ಒಂದೂವರೆ ವರ್ಷದ ಹಿಂದೆ ಇದ್ದ ವಾತಾವರಣ ಬದಲಾಗದೆ ಈಗಲೂ ಹಾಗೆ ಉಳಿದಿದೆ. ಸಾವಿರಾರು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರೂ ತಮ್ಮ ಸ್ವಂತ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಮಕ್ಕಳು ಮತ್ತು ಮಹಿಳೆಯರು ಉತ್ತರವಿಲ್ಲದ ಪ್ರಶ್ನೆಗಳನ್ನು ಹೊತ್ತುಕೊಂಡು ಚಿಂತಾಕ್ರಾಂತರಾಗಿದ್ದಾರೆ. ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದ ಜೊತೆ, ಬಡತನ, ಶಿಕ್ಷಣದ ಕೊರತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗವು ಸಹ ಈಶಾನ್ಯ ರಾಜ್ಯದಲ್ಲಿ ಆಳವಾಗಿ ಬೇರೂರಿದೆ. ಈ ಕಾರಣಗಳು ಸಹ ಮಣಿಪುರದಲ್ಲಿ ವ್ಯಾಪಕವಾದ ಹಿಂಸೆ, ತಾರತಮ್ಯ, ಪ್ರತ್ಯೇಕತೆ ಸೇರಿದಂತೆ ಹಲವು ಬಿಕ್ಕಟ್ಟುಗಳಿಗೆ ಕಾರಣವಾಗುತ್ತದೆ.
ಜನಾಂಗೀಯ ಸಂಘರ್ಷ ಮತ್ತೆ ಸರಿಪಡಿಸಲಾಗದಷ್ಟು ಮಿತಿಮೀರಿದ ಸ್ಥಿತಿಗೆ ತಲುಪಿದೆ. ಮಣಿಪುರಕ್ಕೆ ಏನಾಗಿದೆ ಎಂಬುದೇ ಚರ್ಚೆಯಾಗುತ್ತಿದೆ ವಿನಾ ಸಮಸ್ಯೆ ಪರಿಹಾರಕ್ಕೆ ಏನು ಮಾಡಬೇಕೆಂದು ಜವಾಬ್ದಾರಿ ಹೊತ್ತ ಕೇಂದ್ರ, ರಾಜ್ಯ ಸರ್ಕಾರಗಳು ಮಾಡುತ್ತಿಲ್ಲ. ಮಣಿಪುರದ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲವೇ ಕೆಲವು ಹೊತ್ತು ಮಾತನಾಡಿದ್ದು ಬಿಟ್ಟರೆ ಸಂಘರ್ಷವನ್ನು ಇತ್ಯರ್ಥಪಡಿಸಲು ಯಾವ ಕೆಲಸವನ್ನು ಮಾಡಿಲ್ಲ. ಹತ್ತಾರು ದೇಶಗಳನ್ನು ಸುತ್ತಿದರೂ ಒಮ್ಮೆಯೂ ಸಂಘರ್ಷಪೀಡಿತ ರಾಜ್ಯಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮನಸ್ಸು ಮಾಡಿಲ್ಲ. ಮಣಿಪುರದಲ್ಲಿ ಉಂಟಾಗಿರುವ ನೂರಾರು ಸಾವುನೋವುಗಳು ಕೇವಲ ಅಂಕಿಅಂಶಗಳು ಮಾತ್ರವಲ್ಲ. ಅನಾಥರಾಗಿರುವ ಮಕ್ಕಳು ಒಳಗೊಂಡು ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿರುವ ಸಾವಿರಾರು ಮಕ್ಕಳಿದ್ದಾರೆ. ಏನಾಗುತ್ತದೊ ಎಂದು ಒಂದಷ್ಟು ದೂರ ಸಾಗಲು ಭಯಪಡುವ ಮಹಿಳೆಯರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ದ್ವೇಷ ಭಾಷಣ’ದ ಆಪಾದಿತರು ಹೈಕೋರ್ಟ್ ಜಡ್ಜ್ ಆಗಬಹುದೇ?
ಕೇಂದ್ರವೂ ಒಳಗೊಂಡಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾರೊಬ್ಬರೂ ಸಮಸ್ಯೆ ಪರಿಹಾರಕ್ಕೆ ಯಾವ ಕಾಳಜಿಯನ್ನು ತೋರಿಸುತ್ತಿಲ್ಲ ಎಂಬುದು ಎಲ್ಲರೂ ಕೇಳುವ ಪ್ರಶ್ನೆಯಾಗಿದೆ. ಮಣಿಪುರಿಗಳು ಕೂಡ ಭಾರತದ ನಾಗರಿಕರು. ತೊಂದರೆ ಕಷ್ಟಗಳಾದರೆ ಕೇಳಬೇಕಾದುದು, ಪರಿಹರಿಸಬೇಕಾದ್ದು ಸರ್ಕಾರಗಳ ಕರ್ತವ್ಯ. ನಮ್ಮ ಮಣಿಪುರಿ ಸೋದರರು ಹಿಂಸಾಚಾರ ಮತ್ತು ಅಂತ್ಯವಿಲ್ಲದ ಸಮಸ್ಯೆಗಳಲ್ಲಿ ಸಿಲುಕಿರುವಾಗ ಏಕಿಷ್ಟು ಮೌನ? ಸರ್ಕಾರಗಳು ಅವರ ಸಂಕಟದ ಬಗ್ಗೆ ಕಾಳಜಿ ವಹಿಸದಿರುವಷ್ಟು ಸಂಪರ್ಕ ಕಡಿತಗೊಂಡಿದೆಯೇ? ಅಥವಾ ಅಲ್ಲೇನು ನಡೆಯುತ್ತಿಲ್ಲ ಎಂದು ತೋರಿಸಲು ಅವರಿಂದ ದೂರವಿದೆಯೇ? ಸರ್ಕಾರಗಳು ನಿರ್ಲಿಪ್ತ ಮನೋಭಾವನೆಯನ್ನು ಬಿಟ್ಟು, ಮಣಿಪುರವು ಕೂಡ ತಮ್ಮ ಒಕ್ಕೂಟದ ರಾಜ್ಯವೆಂದು ಪರಿಗಣಿಸಿ ಜವಾಬ್ದಾರಿವಹಿಸಿಕೊಳ್ಳುವುದು ಯಾವಾಗ? ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ನೋಡಿದರೆ ಮಣಿಪುರಿಗಳು ನಮ್ಮವರೆಲ್ಲವೆಂಬ ಭಾವನೆ ಮೂಡಿದಂತಿದೆ. ಸರ್ಕಾರಗಳ ಈ ನಡವಳಿಕೆ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸುತ್ತದೆ ಎಂಬುದು ಭಾರತದ ಇತರ ರಾಜ್ಯಗಳ ಪ್ರಜೆಗಳಿಗೆ ಅನಿಸತೊಡಗಿದೆ. ನಮ್ಮದೆ ದೇಶದ ಜನರ ಸಂಕಟ ಯಾರಿಗೂ ಕಾಣುತ್ತಿಲ್ಲ. ಸರ್ಕಾರ ಕಣ್ಣಿದ್ದು ಕುರುಡಾಗಿದೆ.
ಹತ್ತಾರು ಶಿಬಿರಗಳಲ್ಲಿರುವ ಯುವಕರು ಹಾಗೂ ಮಕ್ಕಳು ಅವರ ಮುಂದಿನ ಭವಿಷ್ಯದಲ್ಲಿ ತಾವು ವೈದ್ಯರು, ಯೋಧರು, ಶಿಕ್ಷಕ ವೃತ್ತಿ ಸೇರಿದಂತೆ ಹಲವು ಸ್ಥಾನಮಾನ ಹೊಂದುವ ಕನಸುಗಳನ್ನು ಹೊಂದಿದ್ದಾರೆ. ಆದರೆ ಈಗಿರುವ ವಾತಾವರಣವನ್ನು ನೋಡಿದರೆ ಭಯ ಅವರೆಲ್ಲರನ್ನು ಹಿಡಿದಿಟ್ಟುಕೊಂಡಿದೆ. ಅವರು ಕನಸು ಕಾಣಲು ಹೆದರುತ್ತಿದ್ದಾರೆ. ಏಕೆಂದರೆ ನಾಳೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಸದ್ಯ ಅವರು ಬದುಕುಳಿಯುವ ಭರವಸೆಯನ್ನು ಮಾತ್ರ ಹೊಂದಿದ್ದಾರೆ. ಆದರೆ ಅವರ ಬದುಕುಳಿಯುವ ಭರವಸೆ ಮಕ್ಕಳ, ಯುವಕರ ಕನಸುಗಳಿಗೆ ಪರಿಹಾರವಲ್ಲ.
ಸಮಾನತೆ ಮತ್ತು ಸ್ವಾತಂತ್ರ್ಯದ ಕುರಿತಾದ ನಮ್ಮ ನೀತಿ, ಪರಿಕಲ್ಪನೆಗಳಿಗೆ ಏನಾಗಿದೆ? ಯಾವುದೇ ರೀತಿಯಲ್ಲಿ ಗಂಡಾಂತರ ಸಂಭವಿಸಿದಾಗ ನಾವು ಸಾಂವಿಧಾನಿಕ ರಕ್ಷಣೆಗಳು ಮತ್ತು ಜಾಗತಿಕ ಬದ್ಧತೆಗಳನ್ನು ಹೊಂದಿದ್ದೇವೆ. ಆದರೆ ಮಣಿಪುರದಲ್ಲಿ ಇವೆಲ್ಲವೂ ದೂರದಲ್ಲಿವೆ ಅಥವಾ ಯಾರಿಗೂ ಸಿಗುತ್ತಿಲ್ಲ. ಉಳ್ಳವರು ಮಾತ್ರ ಎಲ್ಲವನ್ನು ಪಡೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ಅಮಾಯಕರು ನೋವಿನಲ್ಲಿ ನರಳುತ್ತಿದ್ದಾರೆ. ಕುಕಿ ಹಾಗೂ ಮೈತೇಯಿ ಸಮುದಾಯಗಳಿಗೆ ಉಂಟಾಗಿರುವ ಕಂದಕವನ್ನು ಶಾಶ್ವತವಾಗಿ ದೂರ ಮಾಡಬೇಕಾದ ಅಗತ್ಯವಿದೆ. ಅದೇ ರೀತಿ ನಿಜಕ್ಕೂ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯವನ್ನೂ ದೊರಕಿಸಬೇಕಿದೆ. ನೂರಾರು ವರುಷಗಳಿಂದ ಎಲ್ಲಿಂದಲೋ ಬಂದು ನೆಲೆಸಿ ಬದುಕು ಕಟ್ಟಿಕೊಂಡಿರುವವರು ಹಾಗೂ ಇಲ್ಲಿಯೇ ನೆಲೆಸಿರುವವರು ಎಲ್ಲರೂ ಮಣಿಪುರಿಗಳಾಗಿದ್ದಾರೆ. ಇಲ್ಲಿ ಯಾರೂ ಹೊರಗಿನವರಲ್ಲ, ಎಲ್ಲ ಸಮುದಾಯಗಳು ತಮ್ಮ ಅಗತ್ಯಕ್ಕೆ ಅನುಸಾರವಾಗಿ ಹಕ್ಕುಗಳನ್ನು ಹೊಂದಿದ್ದಾರೆ. ಅಧಿಕಾರದಲ್ಲಿರುವವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಣಿಪುರ ರಾಜ್ಯದ ಜನರ ನೋವುಗಳನ್ನು ಶಾಶ್ವತವಾಗಿ ದೂರಮಾಡಬೇಕಿದೆ.
ಭೂಮಿ ಹಕ್ಕಿಗಾಗಿ ಆರಂಭಗೊಂಡಿದ್ದ ಕಲಹ
ಮಣಿಪುರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯ ಹೆಚ್ಚಾಗಿದ್ದಾರೆ. ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯ ಕೂಡ. ಈ ಸಮುದಾಯವನ್ನು ಹೊರತುಪಡಿಸಿದರೆ ನಾಗಾ ಹಾಗೂ ಕುಕು ಬುಡಕಟ್ಟು ಸಮುದಾಯಗಳು ಮಣಿಪುರ ರಾಜ್ಯದ ಗುಡ್ಡಗಾಡು ಭಾಗದಲ್ಲಿ ನೆಲೆಸಿದ್ದಾರೆ. ಬುಡಕಟ್ಟು ಸಮುದಾಯ ನೆಲೆಸಿರುವ ಭೂ ಪ್ರದೇಶದಲ್ಲಿ ಅಭಿವೃದ್ದಿ ಕಡಿಮೆ. ಅಭಿವೃದ್ದಿ ಹೊಂದಿರುವ ಕಣಿವೆ ಭಾಗದಲ್ಲಿ ನೆಲೆಸಿರುವ ಮೈತೇಯಿ ಸಮುದಾಯ, ತಮ್ಮ ಪ್ರದೇಶದ ಆಚೆಗೆ ಗುಡ್ಡಗಾಡು ಭಾಗದಲ್ಲೂ ಭೂಮಿ ಖರೀದಿ ಮಾಡುವ ಮನಸ್ಸು ಮಾಡಿತ್ತು. ತಮ್ಮ ಜನಸಂಖ್ಯೆ ಹೆಚ್ಚಾಗಿರುವ ಕಾರಣ, ಪ್ರದೇಶ ವಿಸ್ತರಣೆ ಮಾಡಲು ಮುಂದಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಜೊತೆಗೆ ಈ ಸಮುದಾಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನೂ ಕೇಳುತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಮಣಿಪುರ ಹೈಕೋರ್ಟ್ ಮೈತೇಯಿ ಸಮುದಾಯದ ಪರವಾಗಿ ನಿಂತಿತ್ತು. ಕಳೆದ ವರ್ಷದ ಮೇ ಮಧ್ಯ ಭಾಗದೊಳಗೆ ಮೈತೇಯಿ ಸಮುದಾಯಕ್ಕೆ ವಿಶೇಷ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಗಡುವು ನೀಡಲಾಗಿತ್ತು.

ಅಂದಿನಿಂದಲೇ ಎರಡೂ ಸಮುದಾಯಗಳ ನಡುವೆ ಘರ್ಷಣೆ ಶುರುವಾಯಿತು. ಮೈತೇಯಿ ಸಮುದಾಯದ ಜನರು ಕುಕಿ ಸಮುದಾಯ ಹೆಚ್ಚಾಗಿರುವ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಖರೀದಿಗೆ ಮುಂದಾದರೆ ಕುಕಿ ಸಮುದಾಯಕ್ಕೆ ಹಿನ್ನಡೆಯಾಗುತ್ತದೆ. ಜೊತೆಯಲ್ಲೇ ಸರ್ಕಾರಿ ಉದ್ಯೋಗದಲ್ಲೂ ವಿಶೇಷ ಮೀಸಲಾತಿ ಸಿಕ್ಕರೆ, ಕುಕಿ ಹಾಗೂ ನಾಗಾ ಸಮುದಾಯದ ಪಾಲನ್ನು ಕಿತ್ತುಕೊಂಡಂತೆ ಆಗುತ್ತದೆ. ಆದರೆ, ಬಹುಸಂಖ್ಯಾತರಾಗಿರುವ ಮೈತೇಯಿ ಸಮುದಾಯದ ಜನರಿಗೆ ಸೂಕ್ತ ಶಿಕ್ಷಣ, ಉದ್ಯೋಗ ಹಾಗೂ ಭೂಮಿಯ ಅಗತ್ಯತೆ ಇರುವ ಕಾರಣ ಅವರಿಗೆ ಸೌಲಭ್ಯ ಸಿಗಬೇಕು ಎಂಬ ನಿಲುವನ್ನ ಕೋರ್ಟ್ ತಿಳಿಸಿತ್ತು. ಈ ಆದೇಶ ಕುಕಿ ಸಮುದಾಯವನ್ನು ಕೆರಳಿಸಿತ್ತು.
ಸರ್ಕಾರ ಕೋರ್ಟ್ ಆದೇಶಗಳನ್ನು ಪಾಲಿಸಬೇಕೆಂದು 2023 ಮೇ 3ರಂದು ಮೈತೇಯಿ ಸಮುದಾಯದ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಆಫ್ ಮಣಿಪುರ ರಾಜ್ಯದಾದ್ಯಂತ ಟ್ರೈಬಲ್ ಸಾಲಿಡಾರಿಟಿ ಮಾರ್ಚ್ ನಡೆಸಲು ಕರೆ ನೀಡಿತ್ತು. ಇದಕ್ಕೆ ಸುಮಾರು 60 ಸಾವಿರ ಮಂದಿ ಸೇರಿದ್ದರು. ರ್‍ಯಾಲಿಯ ವೇಳೆಯಲ್ಲಿ ತೋರ್ಬಂಗ್ ಹಾಗೂ ಚುರಾಚಂದ್‌ಪುರ ಪ್ರದೇಶದಲ್ಲಿ ಗಲಭೆ ಉಂಟಾಯಿತು. 11 ಮಂದಿ ಗಾಯಗೊಂಡರು, ಕಾಂಗ್ಪೋಕಿ ಜಿಲ್ಲೆಯಲ್ಲಿ ಗುಂಡೇಟಿಗೆ ಇಬ್ಬರು ಮೃತಪಟ್ಟರು. ಪ್ರತಿಭಟನೆ ನಡೆಸಿದವರು ನಿಷೇಧಿತ ಕುಕಿ ಬಂಡುಕೋರರು ಎಂಬ ವದಂತಿ ಹಬ್ಬಿತು. ನಂತರದಲ್ಲಿ ಎರಡೂ ಸಮುದಾಯಗಳ ನಡುವೆ ತಿಂಗಳಾನುಗಟ್ಟಲೆ ನಡೆದ ಹಿಂಸಾಚಾರದಿಂದ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಹಲವು ಸಾವಿರ ಜನ ರಾಜ್ಯ, ದೇಶವನ್ನು ಬಿಟ್ಟಿದ್ದರೆ, ಹತ್ತಾರು ಸಾವಿರ ಮಂದಿ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿದ್ದಾರೆ.
ಮಣಿಪುರ ಎರಡೂವರೆ ತಿಂಗಳು ಹೊತ್ತಿ ಉರಿದರೂ ದೇಶದಲ್ಲಿ ತಲ್ಲಣವನ್ನು ಉಂಟು ಮಾಡಿದ್ದು ಮಾತ್ರ ಬೆತ್ತಲೆ ವಿಡಿಯೊ ವೈರಲ್ ಆದ ಬಳಿಕ. ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ದೇಶವನ್ನು ಬೆಚ್ಚಿ ಬೀಳಿಸಿತ್ತು. ಮೇ 4ರಂದು ನಡೆದ ಈ ಘಟನೆ ಹೊರ ಜಗತ್ತಿಗೆ ಬರಲು ಕೆಲವು ತಿಂಗಳುಗಳೇ ಬೇಕಾಯಿತು. ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡು ಆರೋಪಪಟ್ಟಿ ಕೂಡ ಸಲ್ಲಿಸಿತ್ತು.
ಕೆಲವು ತಿಂಗಳು ಕಾಲ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಈಗಲಾದರೂ ಪ್ರಧಾನಿ ಮೋದಿಯವರು ಮಣಿಪುರದತ್ತ ಪಾದ ಬೆಳೆಸಬೇಕಾಗಿದೆ. ಸಮಸ್ಯೆಗೆ ಪರಿಹಾರ ಹುಡುಕಿ ಶಾಂತಿ ಸಹಬಾಳ್ವೆಗೆ ಒತ್ತುಕೊಡಬೇಕಾಗಿದೆ. ಇಲ್ಲದಿದ್ದರೆ, ಇವರಿಗಿಂತ ಕೆಟ್ಟ ಪ್ರಧಾನಿ ಮತ್ತೊಬ್ಬರಿಲ್ಲ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಇತಿಹಾಸದ ಪುಟಗಳಲ್ಲಿ ದಾಖಲಾಗುವುದು ನಿಶ್ಚಿತ.