ಮಣಿಪುರದ ಇಂಫಾಲ್ ಜಿಲ್ಲೆಯ ಚಿಂಗಾರೆಲ್ ತೇಜ್‌ಪುರದಲ್ಲಿರುವ 5ನೇ ಭಾರತೀಯ ರಿಸರ್ವ್ ಬೆಟಾಲಿಯನ್ ಸ್ಟೇಷನ್ ಮೇಲೆ ಗಲಭೆಕೋರ ಗುಂಪೊಂದು ಮಂಗಳವಾರ ರಾತ್ರಿ ದಾಳಿ ನಡೆಸಿದೆ. ದಾಳಿಯಲ್ಲಿ ಸ್ವಯಂಸೇವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಬೆಟಾಲಿಯನ್ ಟ್ರೂಫ್ ಮೇಲೆ ದಾಳಿ ನಡೆಸಿರುವ ದಾಳಿಕೋರರು ಅಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದೆ ಎಂದು ಹೇಳಲಾಗಿದೆ.
ಮೃತನನ್ನು 24 ವರ್ಷ ವಯಸ್ಸಿನ ಓಕ್ರಮ್ ಸನಾಟನ್ ಎಂದು ಗುರುತಿಸಲಾಗಿದೆ. ಓಕ್ರಮ್ ಅವರು ಇಂಫಾಲ್ ಜಿಲ್ಲೆಯ ಪಂಗೇ ಒಕ್ರಾಮ್ ಲೈಕೇಯ್ ಪ್ರದೇಶದವರು. ದಾಳಿಯ ವೇಳೆ ಗಾಯಗೊಂಡು ಅವರು ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ದಾಳಿಕೋರರು ಲೂಟಿ ಮಾಡಿದ ಶಸ್ತ್ರಾಸ್ತ್ರಗಳಲ್ಲಿ ಆರು AK-47 ಗನ್‌ಗಳು, ನಾಲ್ಕು ಕಾರ್ಬೈನ್‌ಗಳು, ಮೂರು ರೈಫಲ್‌ಗಳು ಮತ್ತು ಎರಡು ಲಘು ಮೆಷಿನ್ ಗನ್‌ಗಳು ಮತ್ತು ಮದ್ದುಗುಂಡುಗಳಿದ್ದವು ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ವರ್ಷ ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದಾಗಿನಿಂದ ಚಿಂಗಾರೆಲ್ ತೇಜ್‌ಪುರ ಪ್ರದೇಶವು ಗುಂಪು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.
ಇದುವರೆಗೆ, ಮಣಿಪುರದ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಯಲ್ಲಿ ಕನಿಷ್ಠ 180 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೈಥೇಯಿಗಳು ರಾಜ್ಯದ ಜನಸಂಖ್ಯೆಯ 50%ಕ್ಕಿಂತ ಹೆಚ್ಚು ಜನರನ್ನು ಹೊಂದಿದ್ದಾರೆ. ಮಂಗಳವಾರ ರಾತ್ರಿ ಗುಂಪು ದಾಳಿ ನಡೆದ ಇಂಫಾಲ್ ಜಿಲ್ಲೆ ಸೇರಿದಂತೆ ಕಣಿವೆ ಜಿಲ್ಲೆಗಳಲ್ಲಿ ಅವರೇ ಬಹುಸಂಖ್ಯಾತರಾಗಿದ್ದಾರೆ.
ಗುಂಪು ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಬಿರೇನ್ ಸಿಂಗ್ ಅವರ ಸರ್ಕಾರವು ಜನರನ್ನು ಒತ್ತಾಯಿಸಿದೆ. ಆದರೆ, ಇದುವರೆಗೆ ರಾಜ್ಯ ಪೊಲೀಸರು ವಶಪಡಿಸಿಕೊಂಡಿರುವುದು ಲೂಟಿಯಾದ ಶಸ್ತ್ರಾಸ್ತ್ರಗಳ ಪೈಕಿ ಕೇವಲ 1% ಶಸ್ತ್ರಾಸ್ತ್ರಗಳು ಮಾತ್ರ.