ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ತನಿಖಾ ವರದಿ ನೀಡುವಂತೆ ಸರ್ಕಾರ ಮತ್ತು ತನಿಖಾ ತಂಡಗಳಿಗೆ ಸುಪ್ರೀಂ ಕೋರ್ಟ್ ಕೇಳಿದೆ. ತನಿಖೆ ಎಲ್ಲಿಯವರೆಗೆ ತಲುಪಿದೆ, ಯಾವುದಾದರೂ ಪ್ರಕರಣದಲ್ಲಿ ಚಾರ್ಜ್‌ಶೀಟ್ ಫೈಲ್ ಮಾಡಲಾಗಿದೆಯೇ ಎಂದು ಸರ್ಕಾರ, ಎನ್‌ಐಎ ಮತ್ತು ಸಿಬಿಐಗೆ ಪ್ರಶ್ನಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಎನ್‌ಐಎ ಮುಖ್ಯವಾಗಿ ಎರಡು ವಿಚಾರಗಳಲ್ಲಿ ಸ್ಪಷ್ಟಣೆಯನ್ನು ಕೇಳಿದೆ. “ಆರೋಪಪಟ್ಟಿ ಸಲ್ಲಿಸಿದ ನಂತರ ಅಸ್ಸಾಂನಲ್ಲಿ ವಿಚಾರಣೆ ನಡೆಸಬೇಕೆ ಮತ್ತು ಅಪರಾಧದ ದಿನಾಂಕದಂದು ಬಾಲಾಪರಾಧಿ ಎಂದು ಕಂಡುಬಂದ ಆರೋಪಿಯ ಪ್ರಕರಣದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಎನ್‌ಐಎಗೆ ಸೂಚಿಸಿದೆ.
“ನಾವು ಎಷ್ಟು ಪ್ರಕರಣಗಳನ್ನು ಎದುರಿಸುತ್ತಿದ್ದೇವೆ ಎಂಬುದರ ಕುರಿತು ಸ್ವಲ್ಪ ವಿಚಾರ ಮಾಡೋಣ. ಅಸ್ಸಾಂನಲ್ಲಿ ವಿಚಾರಣೆ ನಡೆಯಬೇಕೆ ಎಂಬುದರ ಕುರಿತು ಸ್ವಲ್ಪ ನೆರವು ನೀಡುವಂತೆ ನಾವು ಅವರಿಗೆ ಮನವಿ ಮಾಡುತ್ತೇವೆ” ಎಂದು ಮಣಿಪುರ ಅಡ್ವೊಕೇಟ್ ಜನರಲ್‌ಗೆ ಪೀಠವು ಹೇಳಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲಾಧಿಕಾರಿ ನಿವಾಸದ ಮೇಲಿನ ದಾಳಿ ಸೇರಿ ಹಲವು ಹಿಂಸಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಥವಾ ಕಾನೂನು ಜಾರಿ ಸಂಸ್ಥೆಗಳಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ರಕ್ಷಣೆ ಕುರಿತಾಗಿ ನಿರ್ದೇಶನವನ್ನು ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನಾಗರಿಕ ಸಮಾಜದ ಸಂಘಟನೆಗಳಿಗೆ ನಾವು ಈ ಕುರಿತಾಗಿ ನಿರ್ದೇಶ ನೀಡಲಾಗುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗಾಗಿಯೇ ರಾಜ್ಯ ಸರ್ಕಾರವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದಾರೆ.
ಮಣಿಪುರ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿ ಆದೇಶ ನೀಡಲು ಸುಪ್ರೀಂ ಕೋರ್ಟ್, ನ್ಯಾಯಮೂರ್ತಿ ಮಿತ್ತಲ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು.