ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹರಿಯಾಣದ ಕಾನೂರೈ ಗಡಿಯಲ್ಲಿ ಪೊಲೀಸರ ಗುಂಡಿನ ದಾಳಿಯಿಂದ ಮೃತಪಟ್ಟ 21 ವರ್ಷದ ರೈತ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರ 1 ಕೋಟಿ ರೂ. ಪರಿಹಾರ ನೀಡಿದೆ. ಜೊತೆಗೆ ರೈತನ ಸಹೋದರಿಯೊಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಸರ್ಕಾರ ತಿಳಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ತಿಳಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ “ರೈತರ ಪ್ರತಿಭಟನೆ ಸಂದರ್ಭದಲ್ಲಿ ಹುತಾತ್ಮರಾದ ಶುಭಕರನ್ ಸಿಂಗ್ ಅವರಿಗೆ ಪಂಜಾಬ್ ಸರ್ಕಾರದ ವತಿಯಿಂದ 1 ಕೋಟಿ ರೂ. ನೆರವು ನೀಡಲಾಗುವುದು ಹಾಗೂ ರೈತನ ಕಿರಿಯ ಸಹೋದರಿಗೆ ಸರ್ಕಾರಿ ಕೆಲಸ ನೀಡಲಾಗುವುದು. ಅಲ್ಲದೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ” ತಿಳಿಸಿದ್ದಾರೆ.
ರೈತ ನಾಯಕರು ಸಹ ಮೃತನ ಕುಟುಂಬಕ್ಕೆ ಹಣಕಾಸು ನೆರವು, ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಹಾಗೂ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.
ಶುಭಕರನ್ ಸಿಂಗ್ ಕುಟುಂಬಕ್ಕೆ ಹುತಾತ್ಮ ಸ್ಥಾನಮಾನ ನೀಡುವಂತೆ ರೈತ ನಾಯಕರು ಬೇಡಿಕೆಯಿಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮೃತ ರೈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಪಾಟಿಯಾಲದ ರಾಜೇಂದ್ರ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು.
ಮರಣೋತ್ತರ ಪರೀಕ್ಷೆಯ ನಂತರ ದೂರನ್ನು ದಾಖಲಿಸಲಾಗಿದೆ. ಮೃತನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಸಿಎಂ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ(ಕೆಎಂಎಂ) ಸಂಘಟನೆಗಳು ಎಂಎಸ್‌ಪಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿವೆ. ರೈತನ ಸಾವಿನಿಂದಾಗಿ ಎರಡು ದಿನ ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ರೈತ ನಾಯಕರು ನಿರ್ಧರಿಸಿದ್ದಾರೆ.

BJP is an anti-farmer government…
waste bjp…