ಮತ್ತೊಂದು ಜಾತಿಯ ಯುವಕನನ್ನು ಪ್ರೀತಿಸಿ, ಆತನೊಂದಿಗೆ ದೆಹಲಿಗೆ ತೆರಳಿದ್ದ ಯುವತಿಯನ್ನು ಆಕೆಯ ತಂದೆ ಹತ್ಯೆಗೈದಿರುವ ಹೃದಯವಿದ್ರಾವಕ, ಅಮಾನುಷ ಮರ್ಯಾದೆಗೇಡು ಹತ್ಯೆ ಘಟನೆ ಬಿಹಾರದಲ್ಲಿ ನಡೆದಿದೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಸಮಷ್ಟಿಪುರ ಪ್ರದೇಶದ ನಿವಾಸಿ ಸಾಕ್ಷಿ ಅವರನ್ನು ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಏಪ್ರಿಲ್ 7ರಂದು ಕೃತ್ಯ ಎಸಗಲಾಗಿದ್ದು, ಆಕೆಯ ಮೃತದೇಹವು ಮನೆಯ ಶೌಚಾಲಯದಲ್ಲಿ ಗುರುವಾರ ಪತ್ತೆಯಾಗಿದೆ.
ಯುವತಿಯ ತಂದೆ, ಆರೋಪಿ ಮುಖೇಶ್ ಸಿಂಗ್ಅನ್ನು ಬಂಧಿಸಲಾಗಿದೆ. ಆತ ಯುವತಿಯ ಸ್ನೇಹಿತನನ್ನೂ ಕೊಲ್ಲಲು ಯತ್ನಿಸಿದ್ದಾನೆ. ಆದರೆ, ಯುವಕ ಆರೋಪಿಯ ಕೈಗೆ ಸಿಕ್ಕಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಸಾಕ್ಷಿ ಅವರು ಮತ್ತೊಂದು ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಾಕ್ಷಿ ತನ್ನ ಸ್ನೇಹಿತನೊಂದಿಗೆ ಮಾರ್ಚ್ 4ರಂದು ದೆಹಲಿ ತೆರಳಿದ್ದರು ಎಂದು ಸಾಕ್ಷಿ ಅವರ ಸೋದರ ಮಾವ ವಿಪಿನ್ ಕುಮಾರ್ ಹೇಳಿದ್ದಾರೆ.
ಒಂದು ವಾರದ ಹಿಂದೆ ದೆಹಲಿಗೆ ಹೋಗಿದ್ದ ಮುಖೇಶ್ ಸಿಂಗ್ ತನ್ನ ಮಗಳ ಮನವೊಲಿಸಿ ತಮ್ಮೂರಿಗೆ (ಸಮಷ್ಟಿಪುರ) ಮರಳಿ ಕರೆತಂದಿದ್ದರು. ಆದರೆ, ಕಲ ದಿನಗಳ ಬಳಿಕ, ಆಕೆ ನಾಪತ್ತೆಯಾಗಿದ್ದರು. ಸಾಕ್ಷಿ ಬಗ್ಗೆ ಆಕೆಯ ತಾಯಿ ಪ್ರಶ್ನಿಸಿದಾಗ, ಮತ್ತೆ ಮನೆ ತೊರೆದು ಹೋಗಿದ್ದಾಳೆ ಎಂದು ಆರೋಪಿ ಸಿಂಗ್ ಹೇಳಿದ್ದರು. ಆದರೆ, ಅನುಮಾನಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಂಗ್ ಅವರ ನಿವಾಸದಲ್ಲಿ ಬೀಗ ಹಾಕಿದ್ದ ಶೌಚಾಲಯದಲ್ಲಿ ಕೆಟ್ಟ ವಾಸನ ಬರುತ್ತಿರುವುದನ್ನು ಗಮನಿಸಿದ ಪೊಲೀಸರು, ಶೌಚಾಲಯವನ್ನು ಪರಿಶೀಲಿಸಿದ್ದಾರೆ. ಆಗ, ಆಕೆಯ ಮೃತದೇಹ ದೊರೆತಿದೆ. ಸಿಂಗ್ ಅವರನ್ನು ವಿಚಾರಣೆ ಒಳಪಡಿಸಿದಾಗ ತಾನೇ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.