ಹೆರಿಗೆ ರಜೆಯು ಹೆರಿಗೆ ಸೌಲಭ್ಯಗಳ ಅವಿಭಾಗ್ಯ ಅಂಗವಾಗಿದೆ. ಮಾತ್ರವಲ್ಲ, ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಪ್ರಮುಖ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಹೆರಿಗೆ ರಜೆಯ ಕುರಿತಾಗಿ ತಮಿಳುನಾಡಿನ ಸರ್ಕಾರಿ ಶಿಕ್ಷಕಿಯೊಬ್ಬರು ಎರಡನೇ ಮದುವೆಯಾಗಿ, ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅವರಿಗೆ ಹೆರಿಗೆ ರಜೆ ನೀಡಲು ನಿರಾಕರಿಸಲಾಗಿತ್ತು.
“ಶಿಕ್ಷಕಿಯು ಮೊದಲ ಮದುವೆಯಾಗಿದ್ದಾಗ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಈಗ, ಎರಡನೇ ವಿವಾಹವಾದ ಬಳಿಕ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ರಜೆ ನೀಡಲು ಸಾಧ್ಯವಿಲ್ಲ” ಎಂದಿದ್ದ ಶಿಕ್ಷಣ ಇಲಾಖೆ, ಹೆರಿಗೆ ರಜೆ ನೀಡಲು ನಿರಾಕರಿಸಿತ್ತು ಎಂದು ಆರೋಪಿಸಲಾಗಿದೆ.
ಶಿಕ್ಷಣ ಇಲಾಖೆಯ ಧೋರಣೆಯ ವಿರುದ್ಧ ಶಿಕ್ಷಕಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯಾನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. “ಯಾವುದೇ ಸಂಸ್ಥೆಯು ಮಹಿಳೆಯರ ಹೆರಿಗೆ ರಜೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದೆ.
ಅರ್ಜಿಯಲ್ಲಿ ಶಿಕ್ಷಕಿ, “ಮೊದಲ ಎರಡು ಮಕ್ಕಳನ್ನು ಹಡೆದ ಸಮಯದಲ್ಲಿ ತಾವು ನೌಕರಿಯಲ್ಲಿ ಇರಲಿಲ್ಲ. ಆಗ ಯಾವುದೇ ಹೆರಿಗೆ ರಜೆ ಅಥವಾ ಹೆರಿಗೆಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆದಿಲ್ಲ. 2ನೇ ವಿವಾಹವಾದ ಬಳಿಕ ನಾನು ನೌಕರಿಗೆ ಸೇರಿದೆ. ಈಗ ಹೆರಿಗೆ ರಜೆಯನ್ನು ಪಡೆಯುವ ಹಕ್ಕು ನನಗಿದೆ. ಆದರೆ, ಇಲಾಖೆ ಹೆರಿಗೆ ರಜೆ ನೀಡಲು ನಿರಾಕರಿಸುತ್ತಿದೆ” ಎಂದು ವಾದಿಸಿದ್ದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಕೆ.ವಿ. ಮುತ್ತುಕುಮಾರ್, “ತಮಿಳುನಾಡಿನ ಹೆರಿಗೆ ಸೌಲಭ್ಯಗಳಿಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಶಿಕ್ಷಕಿ ಈ ಹಿಂದೆ ಯಾವುದೇ ಸೌಲಭ್ಯಗಳನ್ನು ಪಡೆದಿಲ್ಲ. ಈಗ, ಅವರಿಗೆ ಹೆರಿಗೆ ರಜೆ ನೀಡದಿರುವ ಸರ್ಕಾರದ ನಿರ್ಧಾರವು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆಯಾಗಿದೆ” ಎಂದು ನ್ಯಾಯಾಲಯದ ಗಮನ ಸೆಳೆದರು.
ಈ ಲೇಖನ ಓದಿದ್ದೀರಾ?:ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳು: ಆಗಿದ್ದೇನು, ಆಗಬೇಕಿರುವುದೇನು?
ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೆರಿಗೆ ಸೌಲಭ್ಯಗಳ ವ್ಯಾಪ್ತಿಯನ್ನು ವಿಸ್ತರಿಸಿದೆ. ಹೆರಿಗೆ ರಜೆಯನ್ನು ಈಗ ಮೂಲಭೂತ ಸಂತಾನೋತ್ಪತ್ತಿ ಹಕ್ಕುಗಳ ಭಾಗವಾಗಿ ಗುರುತಿಸಲಾಗುತ್ತದೆ ಎಂದು ಹೇಳಿದೆ.
ಈ ಹಿಂದೆ, ಹೆರಿಗೆ ರಜೆ ನೀತಿಯಡಿಯಲ್ಲಿ, ಯಾವುದೇ ಮಹಿಳೆ ಮಗುವನ್ನು ಹೆತ್ತ ನಂತರ 12 ವಾರಗಳವರೆಗೆ ಪಾವತಿಸಿದ ಹೆರಿಗೆ ರಜೆಯನ್ನು ಪಡೆಯಲು ಅವಕಾಶವಿತ್ತು. 2017ರಲ್ಲಿ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಹೆರಿಗೆ ಸೌಲಭ್ಯ ಕಾಯ್ದೆಗೆ ಗಮನಾರ್ಹ ತಿದ್ದುಪಡಿಗಳನ್ನು ಮಾಡಲಾಗಿದ್ದು, ಎಲ್ಲ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲಾಗಿದೆ. ಮಾತ್ರವಲ್ಲದೆ, ಮಗುವನ್ನು ದತ್ತು ಪಡೆದ ಮಹಿಳೆಯರು ಕೂಡ 12 ವಾರಗಳ ಹೆರಿಗೆ ರಜೆಯನ್ನು ಪಡೆಯಲು ಅವಕಾಶವಿದೆ.