ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ ಕೇಂದ್ರ ಸರ್ಕಾರದ ತಂಡ ಮತ್ತು ರೈತ ಪ್ರತಿನಿಧಿಗಳ ನಡುವೆ ಶುಕ್ರವಾರ ಸಂಜೆ ಮೊದಲ ಸುತ್ತಿನ ಸಭೆ ನಡೆದಿದೆ. ಇದು ಸೌಹಾರ್ದಯುತವಾಗಿ ನಡೆದಿದೆ ಎಂದು ಸಭೆಯಲ್ಲಿ ಭಾಗಿಯಾಗಿದ್ದವರು ಹೇಳಿದ್ದಾರೆ. ಮುಂದಿನ ಸುತ್ತಿನ ಸಭೆಯು ಫೆಬ್ರವರಿ 22ರಂದು ನಡೆಸಲು ರೈತರು ಮತ್ತು ಕೇಂದ್ರದ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.
ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನುಬದ್ಧ ಖಾತ್ರಿಯೊಂದಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರೈತರು ಹಲವಾರು ತಿಂಗಳುಗಳಿಂದ ಪಂಬಾಜ್-ಹರಿಯಾಣದ ಶಂಭು ಮತ್ತು ಖನೌರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರು 60ಕ್ಕೂ ಹೆಚ್ಚು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇದೀಗ, ರೈತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಪ್ರತಿಭಟನಾನಿರತ ರೈತರೊಂದಿಗೆ ಸಭೆ ನಡೆಸುತ್ತಿದೆ. ಮೊದಲ ಸಭೆ ಚಂಡೀಗಢದಲ್ಲಿ ನಡೆದಿದೆ. ಸಭೆಯಲ್ಲಿ ರೈತ ಹೋರಾಟದ ನೇತೃತ್ವ ವಹಿಸಿದ್ದ ರೈತ ನಾಯಕರು, ಪಂಜಾಬ್ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುಡಿಯನ್, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಲಾಲ್ ಚಂದ್ ಕಟರುಚಕ್ ಮತ್ತು ಇತರ ರಾಜ್ಯ ಸರ್ಕಾರಿ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಇದ್ದರು.
“ಬೆಳೆಗಳಿಗೆ ಎಂಎಸ್‌ಪಿ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ರೈತರ ಸಮಸ್ಯೆಗಳ ಕುರಿತು ನಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದೇವೆ. ಕೇಂದ್ರ ತಂಡ ಎಣ್ಣೆಬೀಜಗಳು ಮತ್ತು ದ್ವಿದಳ ಧಾನ್ಯಗಳ ಬಗ್ಗೆಯೂ ಮಾತನಾಡಿದೆ” ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
“ಬೆಳೆ ಖರೀದಿ ಮತ್ತು ಕೃಷಿ ವಲಯಕ್ಕೆ ಬಜೆಟ್‌ನಲ್ಲಿ ಅನುದಾನ ಹೆಚ್ಚಳದ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದೇವೆ. ರೈತರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ವಿವರಗಳನ್ನು ಹಂಚಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
“ಫೆಬ್ರವರಿ 22 ರಂದು ರೈತ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಆ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಿಂಗ್ ಭಾಗವಹಿಸಲಿದ್ದಾರೆ” ಎಂದು ಜೋಶಿ ಹೇಳಿದ್ದಾರೆ. ಮುಂದಿನ ಸಭೆಯು ದೆಹಲಿಯಲ್ಲಿ ನಡೆಸಬೇಕು ಎಂದು ರೈತ ನಾಯಕ ದಲ್ಲೇವಾಲ್ ಒತ್ತಾಯಿಸಿದ್ದಾರೆ.
ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, “ರೈತ ಹೋರಾಟ ಆರಂಭವಾಗಿ ಒಂದು ವರ್ಷದ ನಂತರ ಕೇಂದ್ರ ಸರ್ಕಾರವು ರೈತರನ್ನು ಭೇಟಿಯಾಗಲು ಮುಂದಾಗಿದೆ. ಇದು ಅವರು (ಕೇಂದ್ರ) ಪಂಜಾಬಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ರೈತರು ಉಪವಾಸ ಸತ್ಯಾಗ್ರಹ ಮಾಡಬಹುದು ಅಥವಾ ಕಷ್ಟಗಳನ್ನು ಎದುರಿಸಬಹುದು. ಆದರೂ, ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.