ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಹಳ್ಳಿಗಳ ಜನರಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದ ಗ್ರಾಮೀಣ ಬ್ಯಾಂಕ್‌ಗಳನ್ನು ಕೇಂದ್ರ ಸರ್ಕಾರವು ವಿಲೀನಗೊಳಿಸಿದೆ. 11 ರಾಜ್ಯಗಳಲ್ಲಿರುವ ಹಲವಾರು ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗಿದೆ. ದೇಶಾದ್ಯಂತ ಹಲವು ಬ್ಯಾಂಕ್‌ಗಳ ವಿಲೀನದಿಂದಾಗಿ ಸದ್ಯ 28 ಗ್ರಾಮೀಣ ಬ್ಯಾಂಕ್‌ಗಳು ಅಸ್ಥಿತ್ವದಲ್ಲಿ ಉಳಿದಿವೆ.
ಎಲ್ಲ ಕ್ಷೇತ್ರಗಳಲ್ಲೂ ‘ಒಂದು’ ಎಂಬುದನ್ನೇ ಹೇಳುತ್ತಿರುವ ಮೋದಿ ಸರ್ಕಾರವು, ‘ಒಂದು ರಾಜ್ಯ – ಒಂದು ಗ್ರಾಮೀಣ ಬ್ಯಾಂಕ್’ ಎಂಬ ಸೂತ್ರದಡಿ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದೆ. ಮೇ 1ರಿಂದಲೇ ಜಾರಿಗೆ ಬರುವಂತೆ ಬ್ಯಾಂಕ್‌ಗಳ ವಿಲೀನ ನಡೆದಿದೆ. “ಬ್ಯಾಂಕ್‌ಗಳ ವಿಲೀನದೊಂದಿಗೆ ಪ್ರಬಲ ಗ್ರಾಮೀಣ ಬ್ಯಾಂಕ್, ಉತ್ತಮ ಆಡಳಿತ, ಸುಧಾರಿತ ಸಾಲ, ಹಣಕಾಸು ಒಳಗೊಳ್ಳುವಿಕೆ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕದಲ್ಲಿ ಪ್ರಸ್ತುತ ಎರಡು ರೀತಿಯ ಗ್ರಾಮೀಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. 1. ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ಮತ್ತು 2. ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ). ಇದೀಗ, ಈ ಎರಡೂ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಆಗಿ ಮಾಡಲಾಗಿದೆ. ಈ ಬ್ಯಾಂಕ್‌ನ ಕೇಂದ್ರ ಕಚೇರಿಯು ಬಳ್ಳಾರಿಯಲ್ಲಿ ಇರಲಿದೆ.
ಗಮನಾರ್ಹವಾಗಿ, 1970ರ ದಶಕದಲ್ಲಿ ರಾಜ್ಯದಲ್ಲಿ 13 ರೀತಿಯ ಗ್ರಾಮೀಣ ಬ್ಯಾಂಕ್‌ಗಳು ಇದ್ದವು. ಆದರೆ, ಹವುಗಳನ್ನು ಹಂತ-ಹಂತವಾಗಿ ವಿಲೀನಗೊಳಿಸಲಾಗಿತ್ತು. ಅಂತಿಮವಾಗಿ ಎರಡು ಗ್ರಾಮೀಣ ಬ್ಯಾಂಕ್‌ಗಳು ಉಳಿದಿದ್ದವು. ಇದೀಗ, ಅವುಗಳನ್ನು ವಿಲೀನಗೊಳಿಸಲಾಗಿದೆ.
ಈ ವರದಿ ಓದಿದ್ದೀರಾ?: ಗೋಮೂತ್ರ ರೋಗ ಪರಿಹಾರಕವೇ? ಸಂಶೋಧನೆಗಳು ಏನು ಹೇಳಿವೆ?
ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ರಾಜ್ಯದ 9 ಜಿಲ್ಲೆಗಳಲ್ಲಿ 629 ಶಾಖೆ ಹೊಂದಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕ್ ರಾಜ್ಯದ 22 ಜಿಲ್ಲೆಗಳಲ್ಲಿ 1,122 ಶಾಖೆಗಳನ್ನು ಹೊಂದಿತ್ತು. ಇದಗೀ, ಎರಡು ಬ್ಯಾಂಕ್‌ಗಳು ವಿಲೀನಗೊಂಡಿವೆ. ವಿಲೀನದೊಂದಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ದೇಶದ ಎರಡನೇ ಅತೀದೊಡ್ಡ ಗ್ರಾಮೀಣ ಬ್ಯಾಂಕ್ ಎನ್ನಿಸಿಕೊಂಡಿದೆ.
ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿದ್ದ ಗ್ರಾಮೀಣ ಬ್ಯಾಂಕ್‌ಗಳನ್ನೂ ವಿಲೀನ ಮಾಡಲಾಗಿದೆ.