ಮಿಜೋರಾಂನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಬಳಿ ತನ್ನ ಸಹಪಾಠಿಯಿಂದ ಇರಿತಕ್ಕೊಳಗಾಗಿ ಮೃತಪಟ್ಟಿದ್ದು, ಆರೋಪಿ ಸಹಪಾಠಿ ಕೂಡಾ ಈಶಾನ್ಯ ರಾಜ್ಯದ ವಿದ್ಯಾರ್ಥಿಯಾಗಿದ್ದಾನೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ವಿ.ಎಲ್. ವ್ಯಾಲೆಂಟೈನ್ (23) ಎಂದು ಗುರುತಿಸಲಾಗಿದ್ದು, ನಾಗರೂರ್ ನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೆ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದನು. ಈ ಸಂಬಂಧ ಆರೋಪಿ ಸಹಪಾಠಿ ಲಾಮ್ಸಾಂಗ್ ಸ್ವಾಲಾ (23) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು
ಪೊಲೀಸರ ಪ್ರಕಾರ, ಈ ಘಟನೆ ಶನಿವಾರ ಬೆಳಗ್ಗೆ ಸುಮಾರು 10.45 ಗಂಟೆಗೆ ಕಾಲೇಜಿನ ಬಳಿ ನಡೆದಿದೆ.
ವಿದ್ಯಾರ್ಥಿಗಳ ಗುಂಪೊಂದು ಮದ್ಯ ಸೇವಿಸುತ್ತಿದ್ದಾಗ ಅವರ ನಡುವೆ ವಾಗ್ವಾದ ಸ್ಫೋಟಗೊಂಡು, ಈ ಘರ್ಷಣೆಯ ಸಂದರ್ಭದಲ್ಲಿ ವ್ಯಾಲೆಂಟೈನ್ ಗೆ ಚಾಕುವಿನಿಂದ ಇರಿಯಲಾಗಿದೆ. ತಕ್ಷಣವೇ ಗಾಯಗೊಂಡ ವಿದ್ಯಾರ್ಥಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ನಂತರ, ಆತನನ್ನು ತಿರುವನಂತಪುರಂನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಆತ ಬದುಕುಳಿಯಲಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.
