ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಕನಿಷ್ಠ 20 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅವರಲ್ಲಿ ಕರ್ನಾಟಕದ ಇಬ್ಬರು ಬಲಿಯಾಗಿದ್ದಾರೆ. ಹತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕನಿಷ್ಠ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಸರನ್‌ನಲ್ಲಿ ಇಬ್ಬರು-ಮೂರು ಉಗ್ರರು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಭಯೋತ್ಪಾದಕ ದಾಳಿ; ವೈದ್ಯ ಸೇರಿ 7 ಕಾರ್ಮಿಕರ ಸಾವು
ಬೈಸರನ್ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಕಾಲ್ನಡಿಗೆಯಲ್ಲಿ ಮಾತ್ರ ಸಾಗಬಹುದಾಗಿದೆ. ಇಲ್ಲಿ ಉಗ್ರರ ದಾಳಿ ನಡೆದ ತಕ್ಷಣ ಪೊಲೀಸ್ ತಂಡವು ಸೇನೆ ಮತ್ತು ಅರೆಸೈನಿಕ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿದೆ. ಪ್ರವಾಸಿಗರನ್ನು ಸ್ಥಳಾಂತರಿಸುವ ಕಾರ್ಯವನ್ನು ಮೊದಲು ಮಾಡಿದೆ. ಹಾಗೆಯೇ ದಾಳಿಯ ಹಿಂದಿನ ಉಗ್ರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಈ ವರ್ಷ ಪ್ರವಾಸಿಗರ ಮೇಲೆ ನಡೆದ ಮೊದಲ ಉಗ್ರಗಾಮಿ ದಾಳಿ ಇದಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು, ಆಗ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದರು. ಆ ಘಟನೆ ಪಹಲ್ಗಾಮ್‌ನಲ್ಲಿಯೇ ನಡೆದಿತ್ತು.
