ಪ್ರಧಾನಿ ನರೇಂದ್ರ ಮೋದಿಯವರು ನವರಾತ್ರಿ ಗರ್ಬಾ ನೃತ್ಯಕ್ಕಾಗಿ ಸಾಹಿತ್ಯ ಬರೆದಿರುವುದು ಭಾರೀ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ ಪ್ರಧಾನಿಯವರ ಆದ್ಯತೆ ಯಾವುದೆಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಮೇ 3ರಂದು ಮಣಿಪುರದಲ್ಲಿ ಆರಂಭವಾದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಕಲಹಕ್ಕೆ ಮದ್ದು ಅರೆಯಲು ಮೋದಿಯವರಿಗೆ ಸಾಧ್ಯವಾಗಿಲ್ಲ. ಆದರೆ ಗರ್ಬಾ ನೃತ್ಯಕ್ಕೆ ಭಾರೀ ಆಸಕ್ತಿ ತೋರಿಸಿರುವುದು ಯೋಚಿಸುವಂತಾಗಿದೆ.
ಶನಿವಾರ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ವರ್ಷಗಳ ಹಿಂದೆ ನಾನು ಬರೆದ ಗರ್ಬಾದ ಈ ಹಾಡಿಗೆ ಸುಂದರ ಸಂಯೋಜನೆ ಮಾಡಿರುವ ಧ್ವನಿ ಭಾನುಶಾಲಿ, ತನಿಷ್ಕ್ ಬಾಗ್ಚಿ ಮತ್ತು ಜುಸ್ಟ್ ಮ್ಯೂಸಿಕ್ ತಂಡಕ್ಕೆ ಧನ್ಯವಾದಗಳು. ಇದು ಹಲವು ನೆನಪುಗಳನ್ನು ತರುತ್ತದೆ” ಎಂದಿದ್ದರು.
’ಮಾಡಿ’ ಎಂಬ ಈ ಹಾಡು ಭಾನುವಾರ ಬಿಡುಗಡೆಯಾಗಿದೆ. ಇದನ್ನು ದಿವ್ಯಾ ಕುಮಾರ್ ಹಾಡಿದ್ದಾರೆ ಮತ್ತು ಮೀಟ್ ಬ್ರೋಸ್ ಸಂಯೋಜಿಸಿದ್ದಾರೆ.
As the auspicious Navratri dawns upon us, I am delighted to share a Garba penned by me during the past week. Let the festive rhythms embrace everyone!
I thank @MeetBros, Divya Kumar for giving voice and music to this Garba.https://t.co/WqnlUFJTXm
— Narendra Modi (@narendramodi) October 15, 2023
ಇತ್ತ ಕಳೆದ ಐದು ತಿಂಗಳಿಂದ ಮಣಿಪುರ ರಾಜ್ಯದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿದೆ. ಹಿಂಸಾಚಾರ ತಣ್ಣಗಾಗಿದ್ದರೂ ಕುಕಿ ಮತ್ತು ಮೈತೇಯಿಗಳ ನಡುವಿನ ಬಿರುಕು ಮಾತ್ರ ಹಾಗೆಯೇ ಉಳಿದಿದೆ. ಬಫರ್ ಜೋನ್‌ಗಳು ತೆರವಾಗಿಲ್ಲ. ಕಾಡು ಮತ್ತು ಕಣಿವೆಯ ನಡುವೆ ಮಾತುಕತೆಗಳು ದೂರವೇ ಉಳಿದಿವೆ.
ಮಣಿಪುರದಲ್ಲಿನ ಸದ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಮೈತೇಯಿ ಸಮುದಾಯದ ಹೋರಾಟಗಾರ ರಾಮ್ ವಾಂಕ್‌ಕೈರಪ್ಪಮ್, “ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ಭಾರೀ ಕಾಳಜಿ ಮೋದಿಯವರಿಗಿದೆ. ಹೀಗಾಗಿ ಇಸ್ರೇಲ್- ಪ್ಯಾಲೇಸ್ತೀನ್ ಕುರಿತು ಮಾತನಾಡುತ್ತಾರೆ. ಆದರೆ ಇದೇ ಕಾಳಜಿಯನ್ನು ಮಣಿಪುರದ ಬಗ್ಗೆ ಈವರೆಗೂ ಪ್ರದರ್ಶಿಸಿಲ್ಲ. ಈಗಲೂ ಇಂಟರ್‌ನೆಟ್ ಬ್ಯಾನ್ ಮುಂದುವರಿದಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮೊದಲಿಗೆ ಹೋಲಿಸಿದರೆ ಪರಿಸ್ಥಿತಿ ಸದ್ಯ ತಿಳಿಯಾಗಿದೆ. ಮುಖಂಡರುಗಳನ್ನು ಬಂಧಿಸುವುದು ನಡೆಯುತ್ತಿದೆ. ಕುಕಿ- ಮೈತೇಯಿ ಗಡಿ ಭಾಗಗಳಲ್ಲಿ ಬಫರ್ ಜೋನ್ ಈಗಲೂ ಇವೆ. ಕುಕಿ ಪ್ರದೇಶಗಳಿಗೆ ಮೈತೇಯಿಗಳು, ಮೈತೇಯಿ ಪ್ರದೇಶಗಳಿಗೆ ಕುಕಿಗಳು ಪ್ರವೇಶಿಸಲು ಸಾಧ್ಯವೇ ಇಲ್ಲ” ಎಂದು ತಿಳಿಸಿದರು.
ಇದನ್ನೂ ಓದಿರಿ: ಮಣಿಪುರ | ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ; ಪ್ರಮುಖ ಆರೋಪಿಗಳ ಬಂಧನ
ಇಂಫಾಲ ಮೂಲದ ಮೈತೇಯಿ ಪತ್ರಕರ್ತ ಚೌಬಾ ಮಾತನಾಡಿ, “ಇಲ್ಲಿನ ಜನರ ಮನದ ಮಾತನ್ನು ಅವರು ಕೇಳುತ್ತಿಲ್ಲ. ಮಣಿಪುರದ ಬಗ್ಗೆ ಮೋದಿಯವರು ತಲೆ ಕೆಡಿಸಿಕೊಂಡೇ ಇಲ್ಲ. ನಮ್ಮ ಬಗ್ಗೆ ಗಂಭೀರವಾಗಿ ಯೋಚಿಸಿದ್ದರೆ ಮಣಿಪುರದ ಬಗ್ಗೆ ಮಾತನಾಡುತ್ತಿದ್ದರಲ್ಲವೇ? ಅಮಿತ್ ಷಾ ಅವರು ಪಾಕಿಸ್ತಾನ- ಇಂಡಿಯಾ ಕ್ರಿಕೆಟ್ ಮ್ಯಾಚ್ ನೋಡಲು ಹೋಗ್ತಾರೆ. ಮಣಿಪುರದಲ್ಲಿ ಎರಡು ಸಮುದಾಯಗಳ ನಡುವಿನ ಬಿಕ್ಕಟ್ಟು ಅವರಿಗೆ ಮುಖ್ಯವೇ ಅಲ್ಲ” ಎಂದು ಟೀಕಿಸಿದರು.
’ಈದಿನ.ಕಾಂ’ನೊಂದಿಗೆ ಮಾತನಾಡಿದ ಕುಕಿ ವಿದ್ಯಾರ್ಥಿ ಸಂಘಟನೆಯ ಜೆರ್‍ರಿ, “ಎನ್‌ಐಎ, ಸಿಬಿಐ ತಂಡಗಳು ಕುಕಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಕೆಲವು ಮುಖಂಡರನ್ನು ತನಿಖೆಗೆ ಒಳಪಡಿಸುತ್ತಿವೆ. ಸುಮಾರು 40,000 ಜನರು ಈಗಲೂ ಚೂರಾಚಾದ್ಪುರದ (ಲಮ್ಕಾ) ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿದ್ದಾರೆ. ಸೂಕ್ತ ಪರಿಹಾರ ದೊರಕುತ್ತಿಲ್ಲ” ಎಂದರು.
ಅಂದಹಾಗೆ, ಗರ್ಬಾ ಎಂಬುದು ಗುಜರಾತ್ ಮತ್ತು ಇತರ ಕೆಲವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನೃತ್ಯ ರೂಪವಾಗಿದೆ. ನವರಾತ್ರಿ ಉತ್ಸವದ ವೇಳೆ ದುರ್ಗೆಯನ್ನು ಈ ಮೂಲಕ ಪೂಜಿಸಲಾಗುತ್ತದೆ. ಗರ್ಬಾ ನೃತ್ಯದ ವೇಳೆ ಹಲವು ಘರ್ಷಣೆಗಳು ನಡೆದ ಉದಾಹರಣೆಗಳಿವೆ.