ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ-ಯುವಜನರ ಪ್ರತಿಭಟನೆ ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧದ ಆಕ್ರೋಶವಲ್ಲ. ಅದು ಸರ್ಕಾರದ ಉತ್ತರದಾಯಿತ್ವದ ಬಗ್ಗೆ ದೇಶ ಕೇಳುತ್ತಿರುವ ಮೂಲಭೂತ ಪ್ರಶ್ನೆ. ಸಾವಿರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ವಿವಿಧ ರಾಜ್ಯಗಳಿಂದ ಬಂದಿರುವ ಪ್ರತಿಭಟನಾಕಾರರು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಒತ್ತಾಯಿಸಿದ್ದಾರೆ. ಪರೀಕ್ಷಾ ಅಕ್ರಮ ಮತ್ತು ಸತತ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ನಿರ್ಲಜ್ಜತನದಿಂದ ವರ್ತಿಸುತ್ತಿದೆ. ಮಾತ್ರವಲ್ಲ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆಯೇ ಕ್ರೂರ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದೆ. ಈಗ, ಸಚಿವನೊಬ್ಬರ ರಾಜೀನಾಮೆಗೆ ಕೇಳಿದ್ದಕ್ಕೆ ಇಷ್ಟೊಂದು ದೌರ್ಜನ್ಯ ನಡೆಸಬೇಕೇ ಎಂಬ ಪ್ರಶ್ನೆ ದೇಶಾದ್ಯಂತ ವ್ಯಾಪಿಸಿದೆ.
ಅಂದಹಾಗೆ, ರಾಜಕೀಯದಲ್ಲಿ ರಾಜೀನಾಮೆ ಎಂದರೆ ಅಪರಾಧ ಸಾಬೀತಾದ ನಂತರ ನೀಡುವ ಶಿಕ್ಷೆಯಲ್ಲ. ತನಿಖೆ ಪಾರದರ್ಶಕವಾಗಿ ನಡೆಯಲು, ಸಾರ್ವಜನಿಕ ನಂಬಿಕೆ ಉಳಿಸಿಕೊಳ್ಳಲು ಹಾಗೂ ನೈತಿಕ ಹೊಣೆಹೊರುವ ಪ್ರಜಾತಂತ್ರಿಕ ಕ್ರಮ. ಇದು ಭಾರತೀಯ ಪ್ರಜಾಪ್ರಭುತ್ವದಲ್ಲಿ ನಡೆದುಬಂದಿರುವ ಐತಿಹಾಸಿಕ ಹೊಣೆಗಾರಿಕೆ ಮತ್ತು ಪರಂಪರೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಈ ರಾಜಕೀಯ ಸಂಸ್ಕೃತಿಯೇ ಬಹುತೇಕ ಕಾಣೆಯಾಗಿದೆ. ನೈತಿಕ ಹೊಣೆಗಾರಿಕೆ ಎಂಬ ಕಲ್ಪನೆಯೇ ಕುಸಿದುಬಿದ್ದಿದೆ. ಬದಲಾಗಿ, ಸರ್ವಾಧಿಕಾರಿ ಧೋರಣೆ ಉತ್ತುಂಗಕ್ಕೇರಿದೆ.
ಧರ್ಮೇಂದ್ರ ಪ್ರಧಾನ್ ವಿರುದ್ಧದ ಆರೋಪ ಕೇವಲ ಒಂದು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸೀಮಿತವಾಗಿಲ್ಲ. ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶ್ವಾಸಾರ್ಹತೆ ಕುಸಿದಿರುವುದು, ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆ ಕುಂದಿರುವುದು ಹಾಗೂ ಲಕ್ಷಾಂತರ ಕುಟುಂಬಗಳಲ್ಲಿ ಮೂಡಿರುವ ಆತಂಕದ ಕಪ್ಪುಛಾಯೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ನಾಗರಿಕ ಸಮಾಜಕ್ಕೆ ಉತ್ತರದಾಯಿ ಆಗಬೇಕಾದ್ದು ಧರ್ಮೇಂದ್ರ ಪ್ರಧಾನ್ ಅವರ ಬಾಧ್ಯತೆ. ಆದರೂ, ಅವರನ್ನು ಮೋದಿ ಸರ್ಕಾರ ರಕ್ಷಿಸುವ ನಿಲುವು ತೆಗೆದುಕೊಂಡಿದೆ.
ವಿಶ್ವಗುರು ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಮೋದಿ ಮತ್ತು ಅವರ ಸರ್ಕಾರ ತನ್ನನ್ನು ತಾನು ನಿರ್ಧಾರಗಳಲ್ಲಿ ಎಂದಿಗೂ ಮಣಿಯದ, ಒತ್ತಡಕ್ಕೆ ತಲೆಬಾಗದ ಆಡಳಿತ ಎಂಬ ಭ್ರಾಂತಿಯಲ್ಲಿದೆ. ಪ್ರತಿಭಟನೆಗಳ ಒತ್ತಡಕ್ಕೆ ಸಚಿವರನ್ನು ರಾಜೀನಾಮೆ ಕೊಡಿಸಿದರೆ, ಸರ್ಕಾರ ಮೊದಲ ಬಾರಿಗೆ ಬೀದಿಯ ಒತ್ತಡಕ್ಕೆ ಮಣಿದಂತಾಗುತ್ತದೆ ಮತ್ತು ತನ್ನ ದೌರ್ಬಲ್ಯವಾಗಿ ಕಾಣುತ್ತದೆ ಎಂಬ ಮನೋಭಾವ ಮೋದಿ ಸರ್ಕಾರದಲ್ಲಿದೆ.
ಅಂತೆಯೇ, ಒಂದು ಬೇಡಿಕೆಯನ್ನು ಒಪ್ಪಿಕೊಂಡರೆ, ಮುಂದೆಯೂ ಪ್ರತಿಭಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಬಹುದು. ಇಂದು ಶಿಕ್ಷಣ ಸಚಿವ ರಾಜೀನಾಮೆ ಕೊಟ್ಟರೆ, ನಾಳೆ ಮತ್ತೊಬ್ಬ ಸಚಿವನ ರಾಜೀನಾಮೆಗೂ ಒತ್ತಡ ಹೆಚ್ಚಬಹುದು. ರೈಲು ಅಪಘಾತ, ಆಡಳಿತ ವೈಫಲ್ಯ, ಕಾನೂನು ಸುವ್ಯವಸ್ಥೆ ಅಥವಾ ಇತರ ರಾಷ್ಟ್ರೀಯ ಪ್ರಶ್ನೆಗಳ ಸಂದರ್ಭದಲ್ಲೂ ಸಚಿವರ ಹೊಣೆಗಾರಿಕೆಯ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸಬಹುದು. ಸರ್ಕಾರವು ನಿರಂತರವಾಗಿ ಹೋರಾಟಗಳಿಗೆ ಮಣಿಯಬೇಕಾಗಬಹುದು ಎಂಬ ಆತಂಕ ಸರ್ಕಾರದಲ್ಲಿದೆ. ಇದೇ ಒಣ ಪ್ರತಿಷ್ಠೆಯಿಂದಾಗಿ, ಯಾವುದೇ ಕಾರಣಕ್ಕೂ ಮೊದಲ ರಾಜೀನಾಮೆಗೆ ಅವಕಾಶ ನೀಡಬಾರದು ಎಂಬ ಮನೋರೋಗ ಮೋದಿ-ಶಾರನ್ನು ಆವರಿಸಿದೆ.
ಮಿಗಿಲಾಗಿ, ಒಂದು ವೇಳೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರೆ, ಅದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಪರೋಕ್ಷ ಒಪ್ಪಿಗೆಯಾಗಿ ವ್ಯಾಖ್ಯಾನಗೊಳ್ಳಬಹುದು. ಇದರಿಂದ ವಿರೋಧ ಪಕ್ಷಗಳು ಮಾತ್ರವಲ್ಲ, ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಗಳಿಗೂ ಹೊಸ ರಾಜಕೀಯ ಬಲ ಸಿಗಬಹುದು. ಅಂತಹ ಅವಕಾಶಗಳಿಗೆ ಆಸ್ಪದ ನೀಡಬಾರದು ಎಂಬ ಧೋರಣೆಯೂ ಮೋದಿ ಸರ್ಕಾರಕ್ಕಿದೆ.
ಈ ಲೇಖನ ಓದಿದ್ದೀರಾ?: ಜೆನ್ ಝೀʼ | ಇದು ಹಣೆಪಟ್ಟಿಗಳ ಸೀಳಿ ಟಿಸಿಲೊಡೆದ ಹೊಸ ಪೀಳಿಗೆ!
ಅದರೆ, ಫ್ಯಾಸಿಸ್ಟ್ ಧೋರಣೆ ಹೊಂದಿರುವ ಮೋದಿ ಸರ್ಕಾರವು ಪ್ರಜಾಪ್ರಭುತ್ವದಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ರಾಜೀನಾಮೆ ಎಂದರೆ ಯಾವಾಗಲೂ ಸೋಲು ಅಲ್ಲ. ಹಲವಾರು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಚಿವರು ನೈತಿಕ ಹೊಣೆಗಾರಿಕೆ ಹೊತ್ತು ಸ್ಥಾನ ತ್ಯಜಿಸಿ, ತನಿಖೆಯ ನಂತರ ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳಿದ ಉದಾಹರಣೆಗಳಿವೆ. ಅದು ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಬಲಪಡಿಸುತ್ತದೆ. ಹುದ್ದೆಗಿಂತ ಸಂಸ್ಥೆಗಳ ವಿಶ್ವಾಸಾರ್ಹತೆಯೇ ಮುಖ್ಯ ಎಂಬ ಸಂದೇಶವನ್ನು ನೀಡುತ್ತದೆ. ಆದರೆ, ಸರ್ವಾಧಿಕಾರಿ ಆಡಳಿತ ನಡೆಸಬೇಕೆಂಬ ಮೋದಿ-ಶಾ ಜೋಡಿಗೆ ಈ ಸಾಮಾನ್ಯ ಅಂಶ ಎಲ್ಲಿಂದ ಅರ್ಥವಾಗಬೇಕು.
ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಕೇಳುತ್ತಿರುವುದು ಕೇವಲ ಒಬ್ಬ ಸಚಿವನ ರಾಜೀನಾಮೆಯಲ್ಲ. ‘ತಪ್ಪು ನಡೆದರೆ ಅದರ ರಾಜಕೀಯ ಹೊಣೆ ಯಾರು ಹೊರುತ್ತಾರೆ?’ ಎಂಬ ಪ್ರಶ್ನೆಗೆ ಉತ್ತರವನ್ನು, ಉತ್ತರದಾಯಿತ್ವವನ್ನು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷಾ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಗಂಭೀರ ಆರೋಪಗಳು ಕೇಳಿಬಂದಾಗಲೂ ಯಾರೂ ನೈತಿಕ ಹೊಣೆ ಹೊರುವುದಿಲ್ಲ ಎಂದಾದರೆ, ಈ ವ್ಯವಸ್ಥೆಯಲ್ಲಿನ ಲೋಪಗಳನ್ನು ತಿದ್ದುವವರಾರು? ಸರಿಪಡಿಸುವವಾರು? ಉತ್ತರದಾಯಿತ್ವ ಇಲ್ಲವಾದರೆ, ಅದು ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನೂ ಕುಂದಿಸುತ್ತದೆ. ಮೋದಿ ಸರ್ಕಾರವು ಧರ್ಮೇಂದ್ರ ಪ್ರಧಾನ್‌ರಿಂದ ರಾಜೀನಾಮೆ ಪಡೆಯಬೇಕು. ತಮ್ಮ ಸರ್ಕಾರದ ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕು. ಅದೇ, ಪ್ರಜಾಪ್ರಭುತ್ವಕ್ಕೂ-ವ್ಯವಸ್ಥೆಗೂ ಶೋಭೆ!





