ಕೇಂದ್ರ ಸರ್ಕಾರ ಕೂಡಲೇ ಅಮಾಯಕ ವಿದ್ಯಾರ್ಥಿಗಳ ಮೇಲಿನ ಅಮಾನುಷ ದೌರ್ಜನ್ಯಕ್ಕೆ ನೇರ ಕಾರಣರಾದ ಪೊಲೀಸ್ ಅಧಿಕಾರಿಗಳು ಮತ್ತು ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ, ನೀಟ್ ಮಹಾ ವೈಫಲ್ಯದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲವಾದರೆ, ದೆಹಲಿ ಬೀದಿಗಳಲ್ಲಿ ಚೆಲ್ಲಿದ ವಿದ್ಯಾರ್ಥಿಗಳ ರಕ್ತ, ನೆರೆಯ ದೇಶಗಳಂತೆ, ಭಾರತದಲ್ಲೂ ಯುವಕ್ರಾಂತಿಗೆ ನಾಂದಿ ಹಾಡೀತು.
ಅಧಿಕಾರದಲ್ಲಿದ್ದವರ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುವುದು, ಶಾಂತಿಯುತವಾಗಿ- ಸಂವಿಧಾನಾತ್ಮಕವಾಗಿ ಪ್ರತಿಭಟಿಸುವುದನ್ನು ಮಹಾಪರಾಧವೆಂದು ಮೋದಿ ಸರ್ಕಾರ ಬಿಂಬಿಸಿದೆ. ದೇಶದ ರಾಜಧಾನಿ ನವದೆಹಲಿಯ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದ ಪೊಲೀಸರ ವರ್ತನೆ ಮೃಗೀಯ. ಮತ್ತು ಅದನ್ನು ಮೂಕಪ್ರೇಕ್ಷಕನಂತೆ ನೋಡಿಕೊಂಡು ಸುಮ್ಮನಿರುವ ಈ ದೇಶದ ನಾಯಕತ್ವ ಹಾಗೂ ನ್ಯಾಯಾಂಗದ ನಡೆ ಭಾರತದಲ್ಲಿ ಮಾನವ ಹಕ್ಕುಗಳು, ಪ್ರಜಾಪ್ರಭುತ್ವದ ಸ್ಥಿತಿಗತಿಗಳು ಎಂತಹ ದುಸ್ಥಿತಿಯನ್ನು ತಲುಪಿವೆ ಎಂಬುದನ್ನು ತೋರಿಸುತ್ತಿವೆ. ಯುವಜನರ ನೆತ್ತರಿನಿಂದ ಪಾರ್ಲಿಮೆಂಟ್ ಸುತ್ತಮುತ್ತಲ ಮಣ್ಣು ಕೆಂಪಾದರೂ ಕಟುಕ ಖಾಕಿ ಮನಸುಗಳು ಕರಗಲಿಲ್ಲ. ಈಗಾಗಲೆ ಮೋಸ ಹೋಗಿರುವ ದೇಶದ ಯುವ ಶಕ್ತಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ತಮ್ಮ ಬದುಕನ್ನು ನರಕ ಮಾಡಿರುವ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದರೆ, ಪೊಲೀಸರ ಲಾಠಿಗಳು ಕೆಕ್ಕರಿಸಿ ಘರ್ಜಿಸಿವೆ. ಈ ಲಾಠಿಗಳಿಗೆ ಬಾಯಿಕೊಟ್ಟು, ಘರ್ಜಿಸುವ ಅಧಿಕಾರ ನೀಡವರಾದರೂ ಯಾರು? ಯಾವಾಗ ಮತ್ತು ಯಾಕೆ?
ದೇಶದ ಭವಿಷ್ಯದ ರೂವಾರಿಯಾದ ಯುವ ಸಮುದಾಯ ಇಂದು ತಮ್ಮ ನ್ಯಾಯಬದ್ಧ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡಬೇಕಾದ ದುರ್ಗತಿ ಒದಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಕೆಟ್ಟ ಅಧ್ಯಾಯ. ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ಬರೆಯುವ ನೀಟ್ (NEET) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಜೆಪಿ (CJP) ನೇತೃತ್ವದಲ್ಲಿ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿರುವ ಅಮಾನುಷ ಹಲ್ಲೆ ಖಂಡನೀಯವೂ, ಸಂವಿಧಾನ ವಿರೋಧಿಯೂ ಆಗಿದೆ. ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸುವ ಹಕ್ಕನ್ನು ಹತ್ತಿಕ್ಕಲು ಸರ್ಕಾರಿ ಯಂತ್ರಾಂಗ ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.
ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಪರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಾಮಾನ್ಯ ಪೊಲೀಸ್ ಕ್ರಮವಾಗಿ ಕಾಣುತ್ತಿಲ್ಲ, ಆಕ್ರೋಶಗೊಂಡಿರುವ ಯುವ ಸಮುದಾಯವನ್ನು ಅಂಜಿಸಿ, ಬೆದರಿಸಿ, ಸದೆಬಡಿಯುವ ಅಮಾನವೀಯ ಸಂಚಿನಂತೆ ಕಾಣುತ್ತಿದೆ. ಇದೆಲ್ಲವನ್ನೂ ನೋಡಿಯೂ ಕೇಂದ್ರ ಸರ್ಕಾರ ಸುಮ್ಮನಿರುವುದು ನೋಡಿದರೆ, ಅದೂ ಈ ದೌರ್ಜನ್ಯದಲ್ಲಿ ಸಕ್ರಿಯ ಶಾಮೀಲಾಗಿರುವಂತೆ ಗೋಚರಿಸುತ್ತಿದೆ.
ಟಿಯರ್ ಗ್ಯಾಸ್ ಶೆಲ್ ಗಳನ್ನು ನೆಲಕ್ಕೆ ಹೊಡೆಯುವ ಬದಲು ವಿದ್ಯಾರ್ಥಿಗಳತ್ತ ತೂರಿರುವ, ಲಾಠಿಯ ತುದಿಗೆ ಮೊಳೆ ಕಟ್ಟಿ ಹಲ್ಲೆ ಮಾಡಿರುವ ವಿಡಿಯೋ ನೋಡಿದರೆ ಕಣ್ಣಾಲಿ ಒದ್ದೆಯಾಗುತ್ತದೆ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿರುವ ಯಾವ ನಾಗರಿಕ ಸಮಾಜದಲ್ಲೂ ಕಾಣದ ಮೃಗೀಯ ವರ್ತನೆ ಇದು. ಸ್ಥಳದಲ್ಲಿದ್ದ ನೂರಾರು ಮಂದಿಯ ಸಮವಸ್ತ್ರದ ಮೇಲೆ ಹೆಸರಿನ ಪಟ್ಟಿಯನ್ನು ಕಿತ್ತು ಹಾಕಿದ ಪೊಲೀಸರು, ಮಫ್ತಿಯಲ್ಲಿ ಬಂದಿದ್ದ ಹಲವರು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಲಾಠಿ ಪ್ರಹಾರ ನಡೆಸಿದ್ದಾರೆ. ತಲೆ ಒಡೆದಿದ್ದಾರೆ, ಬಟ್ಟೆ ಹರಿದಿದೆ, ಹಲವರ ಕೈಕಾಲು ಹಲ್ಲುಗಳು ಮುರಿದಿವೆ ಎನ್ನಲಾಗುತ್ತಿದೆ. ಈ ದೌರ್ಜನ್ಯ ನಡೆಸಿರುವವರು ಸ್ವತಂತ್ರ ಭಾರತದ ಪೊಲೀಸರೇ, ಭಾರತದ ಪ್ರಜೆಗಳೇ ಆರಿಸಿದ ಸರ್ಕಾರ ಅವರನ್ನು ವಿದ್ಯಾರ್ಥಿಗಳನ್ನು ಬೇಟೆಯಾಡಲು ಬಿಟ್ಟಿರುವುದು ಹೌದೇ ಎಂಬ ದಿಗ್ಭ್ರಮೆ ಮೂಡುತ್ತದೆ.
ಇಷ್ಟೊಂದು ಆಘಾತಕಾರಿ ಘಟನೆ ಘಟಿಸುತ್ತಿದ್ದರೂ ದೇಶದ ನಾಯಕರು ತುಟಿ ಬಿಚ್ಚಿಲ್ಲ. ಕಾಳಜಿಗಾದರೂ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿಲ್ಲ. ವಿದ್ಯಾರ್ಥಿಗಳ ಬಗೆಗೆ ಕಿಂಚಿತ್ತಾದರೂ ಕನಿಕರ ತೋರಿಲ್ಲ.
ಇನ್ನು, ವಿದ್ಯಾರ್ಥಿಗಳ ಮೇಲಿನ ಅಮಾನುಷ ದೌರ್ಜನ್ಯ ಖಂಡಿಸಿ ಹಾಗೂ ಇದರ ತುರ್ತು ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಯ ಸಂದರ್ಭದಲ್ಲಿ ನ್ಯಾಯಾಲಯ ತೋರಿದ ಪ್ರತಿಕ್ರಿಯೆ ಮತ್ತಷ್ಟು ನಿರಾಶಾದಾಯಕವಾಗಿದೆ. “ಈ ವಿಡಿಯೋಗಳನ್ನು ನೋಡಲು ನಮಗೆ ಸಮಯವಿಲ್ಲ” ಎಂದು ಉನ್ನತ ನ್ಯಾಯಾಲಯ ತುರ್ತು ವಿಚಾರಣೆಗೆ ನಿರಾಕರಿಸಿರುವುದು ಈ ದೇಶದ ಜನತೆಯ ವಿಶ್ವಾಸಕ್ಕೇ ದೊಡ್ಡ ಪೆಟ್ಟು ನೀಡಿದೆ. ದೇಶದ ಅತ್ಯುನ್ನತ ನ್ಯಾಯಾಲಯವೇ ಸಂತ್ರಸ್ತರ ನೋವಿಗೆ ಸ್ಪಂದಿಸಲು ಹಿಂಜರಿದರೆ, ಸಾಮಾನ್ಯ ಪ್ರಜೆಗಳು ಯಾರನ್ನು ನಂಬಬೇಕು? ಅತ್ಯಂತ ಆತಂಕದ, ಗಾಬರಿಯ ಸಂಗತಿಯಿದು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ
ಪ್ರಶ್ನಿಸುವ ಧ್ವನಿಯನ್ನು ಲಾಠಿ ತೋರಿಸಿ ಅಡಗಿಸಬಹುದು, ಆದರೆ ಯುವಕರ ಹೃದಯದಲ್ಲಿ ಉರಿಯುತ್ತಿರುವ ಆಕ್ರೋಶದ ಕಿಚ್ಚನ್ನು ತಣಿಸುವುದು ಯಾವ ಲಾಠಿಯಿಂದ ಅಶ್ರುವಾಯುವಿನಿಂದ ಸಾಧ್ಯ? ಪರಿಸ್ಥಿತಿ ಹೀಗೇ ಮುಂದುವರೆದರೆ, ಹಾಲಿ ಪ್ರತಿಭಟನೆ- ಚಳವಳಿ ಮುಂಬರುವ ದಿನಗಳಲ್ಲಿ ಸ್ವತಂತ್ರ ಭಾರತದ ಅತಿದೊಡ್ಡ ಯುವ ಚಳವಳಿಯಾಗಿ ಮಾರ್ಪಡುವುದರಲ್ಲಿ ಯಾವ ಸಂಶಯವೂ ಇಲ್ಲ. ಈಗಿರುವ ಪ್ರತಿಭಟನಾಕಾರರ ಸಾವಿರದ ಸಂಖ್ಯೆ ಮುಂದೆ ಲಕ್ಷಗಳು, ದಶಲಕ್ಷಗಳೂ ಆದೀತು . ಪೊಲೀಸರು ವಿಧಿಸಿರುವ ನಿರ್ಬಂಧಗಳ ನಡುವೆಯೂ, ಪ್ರತಿ ದಿನ ಸಾವಿರಾರು ಹೊಸ ಬೆಂಬಲಿಗರು ದೆಹಲಿ ತಲುಪುತ್ತಿದ್ದಾರೆ. ಧರಣಿನಿರತ ಯುವಕರಿಗೆ ದೇಶದ ನಾನಾ ಭಾಗಗಳಿಂದ ಸಾರ್ವಜನಿಕರು ಆಹಾರ, ನೀರು ಮತ್ತು ಅಗತ್ಯ ಸರಕುಗಳನ್ನು ಕಳುಹಿಸಿಕೊಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಸ್ಥಳದಲ್ಲಿ ಯುವಜನರ ಬೃಹತ್ ಜನಾಂದೋಲನವೇ ಏರ್ಪಟ್ಟಿದೆ. ಬರ್ಬರ ಲಾಠಿ ಏಟುಗಳು ಯುವಜನರ ಮೈಗಳನ್ನು ಗಾಯಗೊಳಿಸಿರಬಹುದು. ಆದರೆ ಅವರ ಆತ್ಮವಿಶ್ವಾಸವನ್ನು ಚೂರೂ ಅಲುಗಾಡಿಸಿಲ್ಲ. ಅಸಲಿಗೆ ಇನ್ನಷ್ಟು ಹೆಚ್ಚಿಸಿವೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕು. ಕನಿಷ್ಟ ಅವರ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ಧೈರ್ಯವನ್ನಾದರೂ ತೋರಬೇಕು. ಶಿಕ್ಷಣ ಇಲಾಖೆಯು ಸಂಪೂರ್ಣ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ಈ ಜನಾಕ್ರೋಶ ಮತ್ತಷ್ಟು ವ್ಯಾಪಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಪದೇ ಪದೇ ಪೇಪರ್ ಲೀಕ್, ಮೇಲಿಂದ ಮೇಲೆ ಮರು ಪರೀಕ್ಷೆ, ಹತಾಶರಾದ ವಿದ್ಯಾರ್ಥಿಗಳ ಆತ್ಮಹತ್ಯೆ, ಆರಾಮವಾಗಿ ಓಡಾಡಿಕೊಂಡಿರುವ ತಪ್ಪಿತಸ್ಥರು, ಇಲಾಖೆಯ ಭೇದವಿಲ್ಲದೆ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದರೆ, ದೇಶದ ಜನರನ್ನ ಅನಿಶ್ಚಿತತೆಗೆ ತಳ್ಳುತ್ತಿದ್ದರೆ, ನೋಡಿಕೊಂಡು ಯುವ ಜನಾಂಗ ಸುಮ್ಮನೆ ಕೂರಲು ಖಂಡಿತ ಆಗುವುದಿಲ್ಲ. ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಹಕ್ಕು. ಆದರೆ, ಆ ಹಕ್ಕನ್ನು ಮೊಟಕುಗೊಳಿಸಲು ಸ್ವತಃ ವ್ಯವಸ್ಥೆಯೇ ಮೃಗೀಯವಾಗಿ ವರ್ತಿಸುತ್ತಿರುವುದು ಭಾರತದ ಸಂವಿಧಾನಿಕ ಮೌಲ್ಯಗಳಿಗೆ ಬಂದೊದಗಿರುವ ದೊಡ್ಡ ಗಂಡಾಂತರ.
ಕೂಡಲೇ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಮೇಲಿನ ಈ ಅಮಾನುಷ ದೌರ್ಜನ್ಯಕ್ಕೆ ನೇರ ಕಾರಣರಾದ ಪೊಲೀಸ್ ಅಧಿಕಾರಿಗಳು ಹಾಗೂ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ, ನೀಟ್ ಹಗರಣದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ, ದೆಹಲಿ ಬೀದಿಗಳಲ್ಲಿ ಹರಿದ ವಿದ್ಯಾರ್ಥಿಗಳ ನೆತ್ತರು, ನೆರೆಯ ದೇಶಗಳಂತೆ, ಈ ಇಡೀ ದೇಶದ ಯುವಕ್ರಾಂತಿಗೆ ದಾರಿಯಾದೀತು!





