ಅಶಿಸ್ತಿನ ವರ್ತನೆ ಮತ್ತು ಸ್ಪೀಕರ್ ನಿರ್ದೇಶನಗಳನ್ನು ಕಡೆಗಣಿಸಿದ ಕಾರಣಕ್ಕಾಗಿ ಇಂದು ಕೂಡ ಲೋಕಸಭೆಯಲ್ಲಿ ವಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಲಾಯಿತು.
ಇಂದು(ಡಿ.19) ಶಶಿ ತರೂರ್, ಡಿಂಪಲ್ ಯಾದವ್, ಸುಪ್ರಿಯಾ ಸುಳೆ ಮತ್ತು ಡ್ಯಾನಿಶ್ ಅಲಿ, ಫಾರೂಕ್ ಅಬ್ದುಲ್ಲಾ ಸೇರಿದಂತೆ 49 ಸಂಸದರನ್ನು ಅಮಾನತುಗೊಳಿಸಲಾಯಿತು. ಇದರಿಂದ ಕಳೆದ ಮೂರು ಅಧಿವೇಶನ ದಿನಗಳಿಂದ ಉಭಯ ಸದನಗಳಿಂದ 141 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಲೋಕಸಭೆಯಲ್ಲಿ ಪ್ರತಿಭಟನೆ ಮುಂದುವರೆದ ಕಾರಣ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಸಂಸತ್ತಿನ ಉಭಯ ಸದನಗಳ ಒಟ್ಟು 92 ವಿಪಕ್ಷ ಸಂಸದರನ್ನು ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿರುವುದರ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಮಂಗಳವಾರ ಸಂಸತ್ತಿನ ಒಳಗಡೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ
ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಮತ್ತಿತರರು ಪಾಲ್ಗೊಂಡರು.
ಕಳೆದ ಎರಡು ದಿನಗಳಿಂದ ಸಂಸತ್ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸದಸ್ಯರು ಸೇರಿದಂತೆ ಒಟ್ಟು 78 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು. ಇದಕ್ಕೂ ಮುನ್ನ 13 ಸದಸ್ಯರನ್ನು ಅಮಾನತು ಮಾಡಲಾಗಿತ್ತು.