ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ನಿಧನವಾಗಿ ಒಂದು ತಿಂಗಳ ತಿಥಿಯ ಸಂದರ್ಭದಲ್ಲಿ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಅವರ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. ಸದ್ಯ ಪೊಲೀಸರ ಈ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಾಹಿಲ್ ವಾಕೋಡೆ ಅವರ ಪೋಷಕರಾದ ರವೀಂದ್ರ ವಾಕೋಡೆ ಮತ್ತು ಸೋನಾಲಿ ವಾಕೋಡೆ ಅವರು ತಮ್ಮ ಮಗನ ಸಾವಿಗೆ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ನ್ಯಾಯ ಕೋರಿ ಐಐಟಿ ಬಾಂಬೆ ಕ್ಯಾಂಪಸ್ ಬಳಿಯ ಮುಖ್ಯ ಗೇಟ್‌ನಲ್ಲಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಅವರೊಂದಿಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳು ಮತ್ತು ಸಾಹಿಲ್ ಪೋಷಕರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ಆಜಾದ್ ಮೈತಾನ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಕಲಬುರಗಿ | ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ : ಕೇಂದ್ರೀಯ ವಿವಿ ಎದುರು ಪ್ರತಿಭಟನೆ; ಸಮಗ್ರ ತನಿಖೆಗೆ ಒತ್ತಾಯ
ಐಐಟಿ ಬಾಂಬೆ ಸಂಸ್ಥೆಯ ದ್ವಿತೀಯ ವರ್ಷದ ಬಿ.ಟೆಕ್ ದಲಿತ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಾಕೋಡೆ ಅವರ ಸಾವು ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಾಹಿಲ್ ಸೆಪ್ಟೆಂಬರ್ 18ರಂದು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಒಂದೆಡೆ ಸಾಹಿಲ್ ಪರೀಕ್ಷೆ ವೇಳೆ ನಕಲು ಮಾಡಿ ಸಿಕ್ಕಿಬಿದ್ದಿದ್ದರು. ಅದೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಆದರೆ ಸಾಹಿಲ್ ಅವರ ತಂದೆ ರವೀಂದ್ರ ವಾಕೋಡೆ ಮತ್ತು ಕುಟುಂಬಸ್ಥರು ಈ ಸಾವನ್ನು “ಸಂಸ್ಥೆಯ ಹತ್ಯೆ” ಎಂದು ಕರೆದಿದ್ದಾರೆ. ಪೋಷಕರ ಪ್ರಕಾರ ಸಾಹಿಲ್ ಕಳೆದ ಮೂರು ತಿಂಗಳಿನಿಂದ ಐಐಟಿ ಬಾಂಬೆಯ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳಿಂದ ತೀವ್ರವಾದ ಜಾತಿ ಆಧಾರಿತ ನಿಂದನೆ, ತಾರತಮ್ಯ ಮತ್ತು ಮಾನಸಿಕ ಕಿರುಕುಳ ಎದುರಿಸುತ್ತಿದ್ದರು. ಪರೀಕ್ಷೆಯ ದಿನ ನಡೆದ ಘಟನೆಯ ನೆಪದಲ್ಲಿ ಅವರನ್ನು ತೀವ್ರವಾಗಿ ಅವಮಾನಿಸಿ, ಬೆದರಿಕೆ ಹಾಕಲಾಗಿತ್ತು, ಅದೇ ಅವರ ಸಾವಿಗೆ ಪ್ರೇರೇಪಿಸಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಐಐಟಿ ಬಾಂಬೆ ಪ್ರವೇಶದ್ವಾರದ ಬಳಿ ವಿದ್ಯಾರ್ಥಿಗಳು ಮತ್ತು ಮೃತರ ಕುಟುಂಬಸ್ಥರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸಾಹಿಲ್ ಸಾವಿನ ಹಿಂದಿನ ನೈಜ ಕಾರಣಗಳು ಹೊರಬರಬೇಕು ಮತ್ತು ಸಂಸ್ಥೆಯು ಹೊಣೆಗಾರಿಕೆ ಹೊರಬೇಕೆಂದು ಅವರು ಆಗ್ರಹಿಸುತ್ತಿದ್ದರು.
ಆದರೆ, ಭಾನುವಾರ ಪೊಲೀಸರು ಸ್ಥಳದಲ್ಲಿದ್ದ ತಾತ್ಕಾಲಿಕ ಪ್ರತಿಭಟನಾ ಸ್ಥಳವನ್ನು ಧ್ವಂಸಗೊಳಿಸಿ ತೆರವುಗೊಳಿಸಿದ್ದಾರೆ. ಸುಮಾರು 16ರಿಂದ 22ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಲವಂತವಾಗಿ ಪೊಲೀಸ್ ವಾಹನಗಳಲ್ಲಿ ಕರೆದೊಯ್ದು ವಶಕ್ಕೆ ಪಡೆಯಲಾಗಿದೆ. ಬಳಿಕ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಲಾಗಿದೆ.
ಸಾಹಿಲ್ ವಾಕೋಡೆ ಅವರ ಪೋಷಕರು, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರ ಕ್ರಮಕ್ಕೆ ಸದ್ಯ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ಹಲವು ಗಣ್ಯರು ಮುಂಬೈ ಪೊಲೀಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
“ಇದು ಅತ್ಯಂತ ನಾಚಿಕೆಗೇಡಿನ ಸಂಗತಿ, ಪೊಲೀಸರು ದಿನದಿಂದ ದಿನಕ್ಕೆ ತಳಮಟ್ಟಕ್ಕೆ ಇಳಿಯುತ್ತಿದ್ದಾರೆ” ಎಂದು ಟೀಕಿಸಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಆಡಳಿತ ಯಂತ್ರವು ವಿದ್ಯಾರ್ಥಿಗಳ ಸಾವಿನ ಕುರಿತು ಮೌನ ವಹಿಸಿರುವುದಲ್ಲದೆ, ನ್ಯಾಯಕ್ಕಾಗಿ ಕೈಗೆತ್ತಿಕೊಂಡ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.





