ನಟಿ ಸೌಂದರ್ಯ ಸಾವು ಅಪಘಾತವಲ್ಲ ಕೊಲೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಸೌಂದರ್ಯ ಮೃತಪಟ್ಟ ಸುಮಾರು ಎರಡು ದಶಕಗಳ ಬಳಿಕ ತೆಲುಗಿನ ಹಿರಿಯ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ.
ಈ ಸಾವು ಅಪಘಾತದಿಂದ ಸಂಭವಿಸಿರುವುದಲ್ಲ. ಮೋಹನ್ ಬಾಬು ಮತ್ತು ಸೌಂದರ್ಯ ನಡುವೆ ಆಸ್ತಿ ವ್ಯಾಜ್ಯವಿತ್ತು. ಈ ವಿಚಾರದಲ್ಲಿಯೇ ಕೊಲೆಯಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಚಿಟ್ಟಿಮಲ್ಲು ಎಂಬವರು ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಸೌಂದರ್ಯ ಜಗದೀಶ್ ಆತ್ಮಹತ್ಯೆ | ಬಿಸಿನೆಸ್ ಪಾಲುದಾರರ ವಿರುದ್ಧ ಎಫ್ಐಆರ್ ದಾಖಲು
ತೆಲುಗು ನಟ ಮೋಹನ್ ಬಾಬು ಅವರು, ಶಂಶಾಬಾದ್ನ ಗ್ರಾಮವೊಂದರಲ್ಲಿ ಇರುವ ಸುಮಾರು ಆರು ಎಕರೆ ಭೂಮಿಯನ್ನು ಮಾರಾಟ ಮಾಡುವಂತೆ ನಟಿ ಸೌಂದರ್ಯ ಮತ್ತು ಅವರ ಸಹೋದರನ ಮೇಲೆ ಒತ್ತಡ ಹಾಕುತ್ತಿದ್ದರು. ಅದರೆ ಇಬ್ಬರೂ ಜಮೀನು ಮಾರಾಟ ಮಾಡಲು ಒಪ್ಪದ ಕಾರಣ ಸೌಂದರ್ಯ ಮತ್ತು ಮೋಹನ್ ಬಾಬು ನಡುವೆ ವೈಮನಸ್ಸು ಉಂಟಾಗಿತ್ತು. ನಟಿ ಮೃತಪಟ್ಟ ಬಳಿಕ ಮೋಹನ್ ಬಾಬು ಆ ಜಮೀನನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈವರೆಗೆ ದೂರುದಾರ ಮತ್ತು ಸೌಂದರ್ಯ, ಅವರ ಸಹೋದರನ ನಡುವೆ ಯಾವ ಸಂಬಂಧವಿದೆ ಎಂಬುದು ಬಹಿರಂಗವಾಗಿಲ್ಲ. ಹಾಗೆಯೇ ಈ ದೂರಿಗೆ ಸಂಬಂಧಿಸಿದಂತೆ ಯಾವುದೇ ಎಫ್ಐಆರ್ ಕೂಡಾ ಈವರೆಗೂ ದಾಖಲಾಗಿಲ್ಲ.
2004ರ ಏಪ್ರಿಲ್ 17ರಂದು ಸೌಂದರ್ಯ ಬಿಜೆಪಿ ಮತ್ತು ಟಿಡಿಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕರೀಂನಗರಕ್ಕೆ ಹೋಗುತ್ತಿದ್ದಾಗ ಅವರ ಖಾಸಗಿ ವಿಮಾನ ಅಪಘಾತಕ್ಕೀಡಾಗಿದ್ದು, ಸೌಂದರ್ಯ ಮೃತಪಟ್ಟಿದ್ದಾರೆ. ಸೌಂದರ್ಯ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಈ ಘಟನೆ ನಡೆದ 21 ವರ್ಷಗಳ ಬಳಿಕ ಇದೀಗ ಸ್ಟಾರ್ ನಟನ ವಿರುದ್ಧ ದೂರು ದಾಖಲಾಗಿದೆ.
ಇದನ್ನು ಓದಿದ್ದೀರಾ? ಸೌಂದರ್ಯ ವಿಕೃತಿ | ಮದುವೆ ಬಳಿಕ ದಪ್ಪ ಆಗಿದ್ದಾರೆಂದು ಪತ್ನಿಗೆ ಪತಿಯಿಂದ ಕಿರುಕುಳ
ಚಿಟ್ಟಿಮಲ್ಲು ಖಮ್ಮಂ ಎಸಿಪಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ಈವರೆಗೂ ಯಾವುದೇ ಪುರಾವೆ ಲಭ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ಅಪಘಾತವಾದ ಬೆನ್ನಲ್ಲೇ ಮೋಹನ್ ಬಾಬು ಅಕ್ರಮವಾಗಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
ಹಾಗೆಯೇ ಮೋಹನ್ ಬಾಬು ವಶಪಡಿಸಿಕೊಂಡಿದರುವ ಭೂಮಿಯನ್ನು ಅನಾಥಾಶ್ರಮ, ಪೊಲೀಸರು, ಮಿಲಿಟರಿ ಮತ್ತು ಮಾಧ್ಯಮ ಸ್ನೇಹಿತರಿಗೆ ನೀಡಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಜೊತೆಗೆ “ನಟ ಮೋಹನ್ ಬಾಬುವಿನಿಂದ ನನ್ನ ಜೀವಕ್ಕೆ ಅಪಾಯವಿದೆ. ಅವರಿಂದ ನನಗೆ ರಕ್ಷಣೆ ಬೇಕು” ಎಂದು ಮನವಿ ಮಾಡಿದ್ದಾರೆ.
ಇನ್ನು ನಟಿ ಸಾವಿನ ಬೆನ್ನಲ್ಲೇ ಹಲವು ಊಹಾಪೋಹಗಳು ಹರಡಿದ್ದವು. ಇದು ಅಪಘಾತವಲ್ಲ, ಕೊಲೆ ಎಂಬ ಅನುಮಾನಗಳನ್ನು ಹಲವು ಮಂದಿ ವ್ಯಕ್ತಪಡಿಸಿದ್ದರು. ಆದರೆ ದಿನ ಕಳೆದಂತೆ ಈ ಪ್ರಕರಣ ಮುಚ್ಚಿಹೋಗಿತ್ತು. ಅಪಘಾತ ಎಂದು ಘೋಷಿಸಲಾಗಿತ್ತು.
