ಇಂದಿಗೂ, ಜನರು ಸಂಕಷ್ಟಗಳು ಬಂದಾಗ, ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋಚದಿದ್ದಾಗ ದೇವರ ಮೊರೆ ಹೋಗುವುದು, ಪವಾಡವೇನಾದರು ಸಂಭವಿಸಬೇಕೆಂದು ಬಯಸುವುದು ಸರ್ವೇಸಾಮಾನ್ಯ. ಅಂತೆಯೇ, ತಮ್ಮ ಕಷ್ಟಗಳು ತೀರಿದ್ದಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರು ಹಿಂದು ದೇವರಿಗೆ ಪೂಜೆ ಸಲ್ಲಿಸಿರುವ ಮೌಢ್ಯ ಮತ್ತು ಸಾಮರಸ್ಯದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋ – ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಕಲ್ಯಾಣಪುರದ ಅವಂತಿಪುರಂ ಪ್ರದೇಶದ್ದು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಪೂಜೆ ಸಲ್ಲಿಸುತ್ತಿರುವ ಮಹಿಳೆಯ ಸಂಬಂಧಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯವು ದಿನೇ-ದಿನೇ ಕ್ಷೀಣಿಸುತ್ತಿತ್ತು. ಅವರನ್ನು ಕಳೆದುಕೊಳ್ಳುತ್ತೇವೆಂಬ ಆತಂಕ ಮಹಿಳೆಯಲ್ಲಿತ್ತು.
ಮಹಿಳೆಯು ಆಸ್ಪತ್ರೆಯ ಬಳಿ ಸಣ್ಣ ಶಿವ ದೇವಾಲಯವನ್ನು ಗಮನಿಸಿದ್ದರು. ಆ ದೇವಾಲಯದ ಮುಂದೆ ನಿಂತು, ಹರಕೆ ಕಟ್ಟಿಕೊಂಡಿದ್ದರು. ದಿನನಿತ್ಯ ಶಿವನಲ್ಲಿ ತನ್ನ ಹರಕೆಯ ಬಗ್ಗೆ ಬೇಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ನಿರಂತರ ಚಿಕಿತ್ಸೆ ಮತ್ತು ವೈದ್ಯರ ಪರಿಶ್ರಮದಿಂದ ಮಹಿಳೆಯ ಸಂಬಂಧಿಯ ಆರೋಗ್ಯ ಚೇತರಿಸಿಕೊಂಡಿತು. ಸಂಬಂಧಿ ಚೇತರಿಸಿಕೊಂಡ ಬೆನ್ನಲ್ಲೇ, ಮಹಿಳೆಯು ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು. ಅವರು ಪೂಜೆ ಸಲ್ಲಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
#Watch: यूपी के कानपुर का एक वीडियो सोशल मीडिया पर वायरल हो रहा है। इस वीडियो में एक मुस्लिम महिला भगवान शंकर के मंदिर में पूजा करती नजर आ रही है। #Kanpur #UttarPradesh pic.twitter.com/c4js69qAjz
— Hindustan (@Live_Hindustan) June 26, 2025
ಹರಕೆ ಕಟ್ಟಿಕೊಳ್ಳುವುದು, ಹರಕೆ ಮತ್ತು ದೇವರ ಕೃಪೆಯಿಂದಲೇ ತಮ್ಮ ಕಷ್ಟ ನಿವಾರಣೆಯಾಯಿತು ಎಂದು ಭಾವಿಸುವುದು, ಪೂಜೆ ಸಲ್ಲಿಸುವುದು ಮೌಢ್ಯಾಚರಣೆ ಭಾಗವೇ ಆಗಿದೆ. ಆದಾಗ್ಯೂ, ಈ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯು ಹಿಂದು ದೇವರಿಗೆ ಪೂಜೆ ಸಲ್ಲಿಸಿರುವುದು ಮೌಢ್ಯದ ಹೊರತಾಗಿ ಸೌಹಾರ್ದತೆ, ಸಾಮರಸ್ಯವನ್ನು ಸೂಚಿಸುತ್ತದೆ.
ಮಹಿಳೆಯ ವಿಡಿಯೋ ಸಾಮಾಜಿಕ ಸಾಮರಸ್ಯ ಮತ್ತು ನಂಬಿಕೆಯನ್ನು ತೋರುತ್ತದೆ.