ಮನೋಹರ್ ಲಾಲ್ ಖಟ್ಟರ್ ಹರಿಯಾಣದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿಯನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ (ಮಾರ್ಚ್ 12) ಸಂಜೆ 5 ಗಂಟೆಗೆ ಸೈನಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ಘೋಷಿಸಿದ ಬಳಿಕ ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳಿತ್ತು. ಈಗ ಅಧಿಕೃತವಾಗಿ ಬಿಜೆಪಿ ನಯಾಬ್ ಸಿಂಗ್‌ರನ್ನು ಆಯ್ಕೆ ಮಾಡಿದ್ದು, ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಯಾಬ್ ಸಿಂಗ್ ಯಾರು?
ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರದ ಸಂಸದರಾಗಿದ್ದು, ಇದೀಗ ಹರಿಯಾಣ ಬಿಜೆಪಿ ಸರ್ಕಾರದ ನೇತೃತ್ವವನ್ನು ವಹಿಸಲಿದ್ದಾರೆ. ಒಬಿಸಿ ಸಮುದಾಯಕ್ಕೆ ಸೇರಿದ ನಯಾಬ್ ಸೈನಿ, ಮನೋಹರ್ ಲಾಲ್ ಅವರ ನಿಕಟವರ್ತಿ. ನಯಾಬ್ ಸಿಂಗ್ 1996 ರಲ್ಲಿ ಬಿಜೆಪಿಯೊಂದಿಗೆ ತನ್ನ ರಾಜಕೀಯ ಪಯಣ ಆರಂಭಿಸಿದ್ದು, 2002ರಲ್ಲಿ ಬಿಜೆಪಿ ಯುವಮೋರ್ಚಾ ಅಂಬಲದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದರು, 2005ರಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದರು.
2009 ರಲ್ಲಿ ಹರಿಯಾಣದ ಬಿಜೆಪಿ ಕಿಸಾನ್ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2014ರಲ್ಲಿ ನಾರಾಯಣ ಘರ್ ಕ್ಷೇತ್ರದಿಂದ ಶಾಸಕರಾದ ನಯಾಬ್ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕುರುಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈಗ ಹರಿಯಾಣದ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹಾಗೂ ಇವರ ಸಂಪುಟ ಸಚಿವರು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಗೆ ಮಿತ್ರಪಕ್ಷ ಜನನಾಯಕ ಜನತಾ ಪಕ್ಷದೊಂದಿಗೆ (ಜೆಜೆಪಿ) ಸೀಟು ಹಂಚಿಕೆ ಮಾತುಕತೆ ಮುರಿದುಬಿದ್ದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.