ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ನ ಮೂವರು ವೈದ್ಯಕೀಯ ವಿದ್ಯಾರ್ಥಿಗಳನ್ನು ವಿಚಾರಣೆಗೆಗಾಗಿ ವಶಕ್ಕೆ ಪಡೆದಿದೆ. ಅವರ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಸಹ ಸಿಬಿಐ ವಶಪಡಿಸಿಕೊಂಡಿದೆ.
2021ರ ಬ್ಯಾಚ್‌ಗೆ ಸೇರಿದ ವಿದ್ಯಾರ್ಥಿಗಳನ್ನು ಬುಧವಾರ ತಡರಾತ್ರಿ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸಿಬಿಐ ತನಿಖೆಗೆ ಒಳಪಡುತ್ತಿರುವ ವಿದ್ಯಾರ್ಥಿಗಳ ಶಾಲಾ ಕೊಠಡಿಯನ್ನು ಸೀಲ್ ಮಾಡಲಾಗಿದೆ.
ಮಂಗಳವಾರ ಕ್ರಮವಾಗಿ ಪಾಟ್ನಾ ಮತ್ತು ಹಜಾರಿಬಾಗ್ (ಜಾರ್ಖಂಡ್) ಮೂಲದ ಇಬ್ಬರು ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಮತ್ತು ರಾಜು ಸಿಂಗ್ ಅವರ ವಿಚಾರಣೆಯ ನಂತರ ವಿದ್ಯಾರ್ಥಿಗಳ ಬಂಧನವಾಗಿದೆ.
ಇದನ್ನು ಓದಿದ್ದೀರಾ? ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ | ಸಾಕ್ಷ್ಯಾಧಾರ ಸೃಷ್ಟಿ; ಸಿಬಿಐ ತನಿಖೆಯಲ್ಲಿ ಪತ್ತೆ?
ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಗ್ಯಾಂಗ್‌ನೊಂದಿಗೆ ಏಮ್ಸ್-ಪಾಟ್ನಾ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಪ್ರಶ್ನೆ ಪತ್ರಿಕೆಯನ್ನು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಸಂಗ್ರಹಿಸಲಾಗಿದ್ದು, ನಳಂದದ ಸಂಜೀವ್ ಕುಮಾರ್ ಸಿಂಗ್ ಅಲಿಯಾಸ್ ಲುಟನ್ ಮುಖಿಯಾ ನೇತೃತ್ವದ ಸಾಲ್ವರ್ಸ್ ಗ್ಯಾಂಗ್ ಎಂಬ ಪೇಪರ್ ಲೀಕ್ ಮಾಡಿದ ತಂಡಕ್ಕೆ ಏಮ್ಸ್ ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಜಾರ್ಖಂಡ್‌ನ ಬೊಕಾರೊ ನಿವಾಸಿ ಪಂಕಜ್ ಕುಮಾರ್ ಅವರನ್ನು ಮೇ 5ರಂದು ನಡೆದ ಪರೀಕ್ಷೆಗೆ ಮುನ್ನ ಹಜಾರಿಬಾಗ್‌ನಲ್ಲಿ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಟ್ರಂಕ್‌ನಿಂದ ಪ್ರಶ್ನೆ ಪತ್ರಿಕೆ ಕದ್ದ ಆರೋಪದ ಮೇಲೆ ಪಾಟ್ನಾದಲ್ಲಿ ಬಂಧಿಸಲಾಗಿದೆ. ಪಂಕಜ್ ಅಲಿಯಾಸ್ ಆದಿತ್ಯ ಜಮ್ಶೆದ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‌ಐಟಿ) 2017-ಬ್ಯಾಚ್ ಸಿವಿಲ್ ಇಂಜಿನಿಯರ್ ಆಗಿದ್ದಾರೆ.
ಎರಡನೇ ಆರೋಪಿಯನ್ನು ರಾಜು ಸಿಂಗ್ ಎಂದು ಗುರುತಿಸಲಾಗಿದ್ದು, ಕಟ್ಕಮ್‌ಡಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಹಜಾರಿಬಾಗ್‌ನ ರಾಮನಗರ ಪ್ರದೇಶದಲ್ಲಿರುವ ಅತಿಥಿ ಗೃಹದಲ್ಲಿ ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪಂಕಜ್‌ಗೆ ಸಹಾಯ ಮಾಡಿದ ಆರೋಪ ರಾಜು ಸಿಂಗ್ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈವರೆಗೆ 14 ಮಂದಿಯನ್ನು ಬಂಧಿಸಿದೆ.