ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಯುಕ್ತ ಜನತಾದಳದ (ಜೆಡಿಯು) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು (ಡಿ.29) ಮಧ್ಯಾಹ್ನ ದೆಹಲಿಯಲ್ಲಿ ನಡೆದ ಪಕ್ಷದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಲಾಲನ್ ಸಿಂಗ್ ಕೆಳಗಿಳಿದ ಹಿನ್ನಲೆಯಲ್ಲಿ ನಿತೀಶ್ ಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕೆಲವು ವಾರಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ರಾಜೀನಾಮೆ ನೀಡಿದ ನಂತರ ಪಕ್ಷದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಿರ್ಗಮಿತ ಅಧ್ಯಕ್ಷ ಲಾಲನ್ ಸಿಂಗ್, “ನನಗೆ ಯಾವುದೇ ಕೋಪವಿಲ್ಲ, ನಾನೇಕೆ ಕೋಪ ಮಾಡಿಕೊಳ್ಳಲಿ? ಈ ಪದವನ್ನು ನಾನು ಮೊದಲ ಬಾರಿಗೆ ಕೇಳುತ್ತಿದ್ದೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?
ಮೂಲಗಳ ಪ್ರಕಾರ ಲಾಲನ್ ಸಿಂಗ್ ಅವರನ್ನು ಜೆಡಿಯು ಮಿತ್ರ ಪಕ್ಷವಾದ ಆರ್‌ಜೆಡಿಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರೊಂದಿಗೆ ಹೆಚ್ಚು ಆಪ್ತವಾಗಿದ್ದ ಕಾರಣಕ್ಕಾಗಿ ಪದಚ್ಯುತಗೊಳಿಸಲಾಗಿದೆ. ಶೀಘ್ರದಲ್ಲಿಯೇ ಆರ್‌ಜೆಡಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದು ವರದಿ ಪ್ರಕಾರ ಕೆಲವು ತಿಂಗಳಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಪ್ರಧಾನಿ ಮಂತ್ರಿ ಹುದ್ದೆ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನೂತನ ಜೆಡಿಯು ಮುಖ್ಯಸ್ಥರು ತಾವು ಕೂಡ ಇಂಡಿಯಾ ಒಕ್ಕೂಟದ ಪ್ರಧಾನ ಮಂತ್ರಿ ಸ್ಪರ್ಧೆಯಲ್ಲಿ ಇದ್ದೇನೆ ಎಂಬ ಸಂದೇಶವನ್ನು ಪರೋಕ್ಷವಾಗಿ ತಮ್ಮ ಕಾರ್ಯಕರ್ತರ ಮೂಲಕ ರವಾನಿಸಿದ್ದರು.
ಇಂಡಿಯಾ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಕ್ಕೂಟದ ಕೆಲವು ಪಕ್ಷಗಳು ಸೂಚಿಸಿದ ನಂತರ, ವೈಯಕ್ತಿಕವಾಗಿ ತಾವು ಅಭ್ಯರ್ಥಿಯಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.