ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಹೊಸ ಸರ್ಕಾರದ ಯೋಜನೆಯ ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವ ಸಲುವಾಗಿ ಎನ್‌ಡಿಎ ಹಾಗೂ ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಪ್ರಯಾಣ ಬೆಳಸಿದ್ದಾರೆ.
ಆಶ್ಚರ್ಯಕರ ಸಂಗತಿಯಲ್ಲಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇವರಿಬ್ಬರು ಪಾಟ್ನಾ- ದೆಹಲಿ ವಿಸ್ತಾರ ವಿಮಾನ ಯುಕೆ-718 ನಲ್ಲಿ ಬೆಳಿಗ್ಗೆ 10.40ಕ್ಕೆ ಪ್ರಯಾಣ ಬೆಳಸಿದರು.
ಚುನಾವಣಾ ಆಯೋಗವು ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, 240 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಬಹುಮತ ಸಂಖ್ಯೆಗಳಿಗೆ 32 ಸ್ಥಾನಗಳ ಕೊರತೆಯಿದೆ. ಸರ್ಕಾರ ರಚನೆಗಾಗಿ ಇತರ 53 ಸ್ಥಾನಗಳನ್ನು ಗೆದ್ದಿರುವ ಎನ್‌ಡಿಎ ಮಿತ್ರಪಕ್ಷಗಳನ್ನು ಅವಲಂಭಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ
ತಾನು ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ನಿತೀಶ್ ಕುಮಾರ್ ಘೋಷಿಸಿದ್ದರೂ ಜೆಡಿಯು ಮುಖ್ಯಸ್ಥರ ಹಿಂದಿನ ನಡೆಗಳನ್ನು ಗಮನಿಸಿದರೆ ಮುಂದಿನ ರಾಜಕೀಯ ನಡೆಗಳು ಏನಾಗುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಚುನಾವಣೆಯಲ್ಲಿ ಆರ್‌ಜೆಡಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಅಲ್ಲದೆ ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರೀಕೂಟವನ್ನು ಆರಂಭಿಸದವರಲ್ಲಿ ಮುಂಚೂಣಿಯಲ್ಲಿದ್ದವರು ನಿತೀಶ್ ಕುಮಾರ್. ಕೆಲವು ತಿಂಗಳ ಹಿಂದೆ ಆರ್‌ಜೆಡಿಯೊಂದಿಗೆ ಉಂಟಾದ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಎನ್‌ಡಿಎ ಮೈತ್ರೀಕೂಟ ಸೇರಿಕೊಂಡರು. ಇವರ ರಾಜಕೀಯ ನಡೆ ಯಾವಾಗ ಬೇಕಾದರೂ ಬದಲಾಗಬಹುದು.
ವಿಪಕ್ಷಗಳ ಒಕ್ಕೂಟ ಇಂಡಿಯಾ ಒಟ್ಟು 234 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಹುಮತ ಸಂಖ್ಯೆ 272ಕ್ಕೆ 38 ಸ್ಥಾನಗಳ ಕೊರತೆಯಿದೆ. ಟಿಡಿಪಿ,ಜೆಡಿಯು ಹಾಗೂ ಸಣ್ಣ ಪುಟ್ಟ ಪಕ್ಷೇತರರು ಬೆಂಬಲ ನೀಡಿದರೆ ಸರ್ಕಾರ ರಚಿಸುವುದು ಕಷ್ಟವೇನಿಲ್ಲ. ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ರಾಜಕೀಯ ಪರಿಸ್ಥಿತಿ ಬದಲಾದರೆ ಆಶ್ಚರ್ಯವೇನಿಲ್ಲ.
