ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗಲೇಬೇಕು, ದುಬಾರಿ ವ್ಯಾಯಾಮ ಉಪಕರಣಗಳನ್ನು ಖರೀದಿಸಲೇಬೇಕು ಎಂಬ ನಿಯಮವಿಲ್ಲ. ಮನೆಯಲ್ಲೇ ಒಂದೇ ಸ್ಥಳದಲ್ಲಿ ನಿಂತು ಓಡುವ ಮೂಲಕ ನಾಲ್ಕು ತಿಂಗಳಲ್ಲಿ 40 ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಕಂಟೆಂಟ್ ಕ್ರಿಯೇಟರ್ ಕೃಷ್ಣ ಎನ್ನುವವರು ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
“ಟ್ರೆಡ್‌ಮಿಲ್ ಇಲ್ಲ, ಓಡುವ ಟ್ರ್ಯಾಕ್ ಇಲ್ಲ. ಒಂದೇ ಸ್ಥಳದಲ್ಲಿ ನಿಂತು ಓಡುತ್ತಿದ್ದೆ. ದಿನಕ್ಕೆ ಒಂದು ಗಂಟೆ, ಕೆಲವೊಮ್ಮೆ ಒಂದೂವರೆ ಗಂಟೆ ವ್ಯಾಯಾಮ ಮಾಡುತ್ತಿದ್ದೆ. ನೋಡಲು ವಿಚಿತ್ರವಾಗಿ ಕಂಡರೂ, ಬೆವರು ಸುರಿಯುತ್ತಿತ್ತು; ಕ್ರಮೇಣ ದೇಹದಲ್ಲಿ ಬದಲಾವಣೆ ಕಾಣಿಸಿತು. ವ್ಯಾಯಾಮಕ್ಕೆ ಜಿಮ್‌ಗಿಂತಲೂ ದೃಢವಾದ ಉದ್ದೇಶ ಮುಖ್ಯ” ಎಂದು ಕೃಷ್ಣ ಹೇಳಿಕೊಂಡಿದ್ದಾರೆ.
ಮನೆಯಲ್ಲೇ ಒಂದೇ ಸ್ಥಳದಲ್ಲಿ ನಿಂತು ಓಡುವುದನ್ನು ‘ಸ್ಟೇಷನರಿ ರನ್ನಿಂಗ್’ ಅಥವಾ ‘ಜಾಗಿಂಗ್ ಇನ್ ಪ್ಲೇಸ್’ ಎಂದು ಕರೆಯಲಾಗುತ್ತದೆ. ಈ ವ್ಯಾಯಾಮದಿಂದ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಹೃದಯ ಹಾಗೂ ಶ್ವಾಸಕೋಶಗಳ ಆರೋಗ್ಯಕ್ಕೆ ನೆರವಾಗುವ ಹೃದಯಸಂಬಂಧಿ ವ್ಯಾಯಾಮದ ಪ್ರಯೋಜನಗಳು ದೊರೆಯಬಹುದು.
ಸಲಹಾ ಆಹಾರ ತಜ್ಞೆ ಹಾಗೂ ಫಿಟ್‌ನೆಸ್ ಪರಿಣಿತೆ ಗರಿಮಾ ಗೋಯಲ್ ಅವರ ಪ್ರಕಾರ, ದಿನನಿತ್ಯದ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ದೇಹ ಹೆಚ್ಚು ಶಕ್ತಿಯನ್ನು ವ್ಯಯಿಸುತ್ತದೆ. ಇದಕ್ಕೆ ಸೂಕ್ತ ಆಹಾರ ಕ್ರಮ ಮತ್ತು ಅಗತ್ಯಕ್ಕನುಗುಣವಾದ ಕ್ಯಾಲೊರಿ ಕೊರತೆಯೂ ಸೇರಿದರೆ ತೂಕ ಇಳಿಕೆಗೆ ನೆರವಾಗಬಹುದು. ಈ ವ್ಯಾಯಾಮದ ವಿಶೇಷವೆಂದರೆ ಇದಕ್ಕೆ ಟ್ರೆಡ್‌ಮಿಲ್, ಹೊರಾಂಗಣ ಸ್ಥಳ ಅಥವಾ ದುಬಾರಿ ಉಪಕರಣಗಳ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಯಾಮ ಮಾಡಲು ಮುಜುಗರಪಡುವವರು ಅಥವಾ ಜಿಮ್‌ಗೆ ಹೋಗಲು ಸಾಧ್ಯವಾಗದವರು ಮನೆಯಲ್ಲೇ ಇದನ್ನು ಅಭ್ಯಾಸ ಮಾಡಬಹುದು.
ಕೃಷ್ಣ ಹೇಳಿಕೊಂಡಿರುವ ನಾಲ್ಕು ತಿಂಗಳಲ್ಲಿ 40 ಕೆಜಿ ತೂಕ ಇಳಿಕೆಯು ಅತ್ಯಂತ ವೇಗದ ತೂಕ ಇಳಿಕೆಯಾಗಿದೆ. ಇಂತಹ ಫಲಿತಾಂಶವನ್ನು ಎಲ್ಲರೂ ಅನುಸರಿಸುವುದು ಸರಿಯಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ಒಬ್ಬ ವ್ಯಕ್ತಿ ಎಷ್ಟು ತೂಕ ಇಳಿಸಿಕೊಳ್ಳಬಹುದು ಎಂಬುದು ಅವರ ಆರಂಭಿಕ ತೂಕ, ಆರೋಗ್ಯ, ಆಹಾರ ಮತ್ತು ವ್ಯಾಯಾಮವನ್ನು ಅವಲಂಬಿಸಿರುತ್ತದೆ. ಆರಂಭದಲ್ಲಿ ಹೆಚ್ಚು ತೂಕ ಹೊಂದಿರುವವರು ಕೆಲವೊಮ್ಮೆ ವೇಗವಾಗಿ ತೂಕ ಇಳಿಸಿಕೊಳ್ಳಬಹುದು. ಆದರೆ, ತೂಕ ಕಡಿಮೆಯಾದರೆ ಅದಕ್ಕೆಲ್ಲಾ ಕೊಬ್ಬು ಕರಗಿರುವುದೇ ಕಾರಣವಲ್ಲ. ದೇಹದಲ್ಲಿನ ನೀರಿನ ಪ್ರಮಾಣ, ಗ್ಲೈಕೋಜನ್ ಸಂಗ್ರಹ ಮತ್ತು ಜೀರ್ಣಾಂಗದಲ್ಲಿರುವ ಆಹಾರದ ಪ್ರಮಾಣದಲ್ಲಿನ ಶಕ್ತಿಯ ಪ್ರಮಾಣ ಕಡಿಮೆಯಾದರೂ ತೂಕ ಇಳಿಯಬಹುದು. ನಾಲ್ಕು ತಿಂಗಳಲ್ಲಿ 40 ಕೆಜಿ ಕೊಬ್ಬು ಕರಗಿಸುವುದು ಅತ್ಯಂತ ಕಠಿಣ ಪ್ರಕ್ರಿಯೆ. ಹಾಗಾಗಿ, ಬೇರೆಯವರು ಇಷ್ಟು ತೂಕ ಇಳಿಸಿಕೊಂಡಿದ್ದಾರೆಂದು ಅದನ್ನೇ ಗುರಿಯಾಗಿಸಿಕೊಳ್ಳಬಾರದು. ಆರೋಗ್ಯಕ್ಕೆ ತಕ್ಕಂತೆ ನಿಧಾನವಾಗಿ ತೂಕ ಇಳಿಸಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಗರಿಮಾ.
ಒಂದೇ ಸ್ಥಳದಲ್ಲಿ ನಿಂತು ಓಡುವುದು ಸರಳವಾಗಿ ಅಥವಾ ವಿಚಿತ್ರವಾಗಿ ಕಂಡರೂ, ಅದರಿಂದ ನಿಯಮಿತವಾಗಿ ದೈಹಿಕ ಚಟುವಟಿಕೆ ಸಾಧ್ಯವಾದರೆ ತೂಕ ಇಳಿಕೆಯಾಗುವ ಸಾಧ್ಯತೆಗಳಿವೆ. ಕಾಲಕ್ರಮೇಣ ವ್ಯಾಯಾಮದ ತೀವ್ರತೆ ಮತ್ತು ಅವಧಿಯನ್ನು ಸೂಕ್ತವಾಗಿ ಹೆಚ್ಚಿಸಬಹುದು. ಅಗತ್ಯವಿದ್ದರೆ ಇತರ ವ್ಯಾಯಾಮಗಳನ್ನೂ ಸೇರಿಸಿಕೊಳ್ಳಬಹುದು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳುವ ಉದ್ದೇಶವಿದ್ದರೆ ಕಾರ್ಡಿಯೊ ವ್ಯಾಯಾಮವೊಂದನ್ನೇ ಅವಲಂಬಿಸುವುದು ಸೂಕ್ತವಲ್ಲ.
ತೂಕ ಇಳಿಸುವ ಪ್ರಯತ್ನದ ಸಂದರ್ಭದಲ್ಲಿ ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಪ್ರತಿರೋಧ ವ್ಯಾಯಾಮ ಅಥವಾ ರೆಸಿಸ್ಟೆನ್ಸ್ ಟ್ರೈನಿಂಗ್ ಸಹಕಾರಿಯಾಗುತ್ತದೆ. ದೇಹಕ್ಕೆ ಸಾಕಷ್ಟು ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳು ದೊರೆಯುವುದೂ ಮುಖ್ಯ. ದೀರ್ಘಕಾಲ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುವಾಗ ಪೌಷ್ಟಿಕಾಂಶದ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ಸ್ನಾಯುಗಳು, ಶಕ್ತಿ ಮತ್ತು ದೈಹಿಕ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳುವುದು ಆರೋಗ್ಯಕರ ತೂಕ ಇಳಿಕೆಯ ಪ್ರಮುಖ ಗುರಿಯಾಗಿರಬೇಕು.
ಸ್ಟೇಷನರಿ ರನ್ನಿಂಗ್’ ಮಾಡುವಾಗ ಕೀಲುಗಳ ಸುರಕ್ಷತೆಗೂ ಗಮನ ಕೊಡಬೇಕಾಗುತ್ತದೆ. ಮನೆಯ ಒಳಾಂಗಣದಲ್ಲಿ ಈ ವ್ಯಾಯಾಮ ಮಾಡುವಾಗ ಕಾಂಕ್ರೀಟ್ ಅಥವಾ ಗಡಸು ನೆಲದ ಮೇಲೆ ನೇರವಾಗಿ ಬರಿಗಾಲಿನಲ್ಲಿ ಜಿಗಿಯುವುದರಿಂದ ಅಥವಾ ಓಡುವುದರಿಂದ ಮಂಡಿ ಮತ್ತು ಪಾದದ ಕೀಲುಗಳ ಮೇಲೆ (Joint Impact) ಅತಿಯಾದ ಒತ್ತಡ ಬೀಳಬಹುದು. ಇದಕ್ಕೆ ಬದಲಾಗಿ ಯೋಗ ಮ್ಯಾಟ್ (Yoga Mat) ಅಥವಾ ಕಾರ್ಪೆಟ್ ಮೇಲೆ ನಿಂತು ವ್ಯಾಯಾಮ ಮಾಡುವುದು ಅಥವಾ ಒಳ್ಳೆಯ ಸ್ಪೋರ್ಟ್ಸ್ ಶೂ (Running Shoes) ಧರಿಸುವುದು ಕೀಲುಗಳ ನೋವನ್ನು ತಡೆಯಲು ಸಹಾಯ ಮಾಡುತ್ತದೆ.
ಒಂದೇ ಸ್ಥಳದಲ್ಲಿ ಓಡುವಾಗ ಪಾದದ ಮುಂಭಾಗದ ಮೇಲೆ (Balls of the feet) ಲಘುವಾಗಿ ಕಾಲಿಡಬೇಕು. ಅತಿಯಾಗಿ ಕುಂಟಿದ ಹಾಗೆ ಅಥವಾ ಭಾರವಾಗಿ ಅಪ್ಪಳಿಸುತ್ತಾ ಜಿಗಿಯಬಾರದು.
ಇದನ್ನೂ ಓದಿ: ಉನ್ನತ ವ್ಯಾಸಂಗ ನಿರತರಿಗೆ ಮಾದರಿ ವಿದ್ಯಾರ್ಥಿಯಾಗಿ ಡಾ ಅಂಬೇಡ್ಕರ್
ವೇಗದ ತೂಕ ಇಳಿಕೆಯಿಂದ ಚರ್ಮವು ಸುಕ್ಕುಗಟ್ಟುವುದು ಅಥವಾ ಸಡಿಲಗೊಳ್ಳುವ (Skin Sagging) ಸಾಧ್ಯತೆ ಇರುತ್ತದೆ. ಅಲ್ಲದೆ, ದೇಹಕ್ಕೆ ಹಠಾತ್ತನೆ ಪೋಷಕಾಂಶಗಳು ಕಡಿಮೆಯಾದರೆ ಪಿತ್ತಕೋಶದಲ್ಲಿ ಕಲ್ಲುಗಳು (Gallstones), ಕೂದಲು ಉದುರುವಿಕೆ ಮತ್ತು ನಿಶ್ಯಕ್ತಿ ಉಂಟಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ವೈದ್ಯಕೀಯ ತಜ್ಞರ ಪ್ರಕಾರ, ವಾರಕ್ಕೆ 0.5 ರಿಂದ 1 ಕೆಜಿ ವರೆಗೆ ತೂಕ ಇಳಿಸಿಕೊಳ್ಳುವುದು ಅತ್ಯಂತ ಸುರಕ್ಷಿತ ಮತ್ತು ಸುಸ್ಥಿರ (Sustainable) ವಿಧಾನವಾಗಿದೆ.
‘ಜಾಗಿಂಗ್ ಇನ್ ಪ್ಲೇಸ್’ ಮಾಡುವುದರ ಜೊತೆಗೆ ಇನ್ನೂ ಕೆಲವು ವ್ಯಾಯಾಮಗಳನ್ನು ಸೇರಿಸಿದರೆ ಫಲಿತಾಂಶ ಇನ್ನಷ್ಟು ಉತ್ತಮವಾಗಿರುತ್ತದೆ. ಕಾಲುಗಳು ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸಲು ಸ್ಕಾಟ್ಸ್ (Squat), ಮೇಲಿನ ಮೈಕಟ್ಟು ಮತ್ತು ತೋಳುಗಳ ಬಲಿಷ್ಠತೆಗಾಗಿ ಪುಶ್-ಅಪ್ಸ್ (Push-ups), ಹೊಟ್ಟೆಯ ಸ್ನಾಯುಗಳನ್ನು (Core Strength) ಗಟ್ಟಿಯಾಗಿಟ್ಟುಕೊಳ್ಳಲು ದಿನಕ್ಕೆ 1-2 ನಿಮಿಷ ಪ್ಲ್ಯಾಂಕ್ ಮಾಡುವುದು ಬಹಳ ಪರಿಣಾಮಕಾರಿ ಎನ್ನುತ್ತಾರೆ ಫಿಟ್‌ನೆಸ್ ತಜ್ಞರು.





